ಒಕ್ಕಲಿಗರಿಗೆ ಡಿಸಿಎಂ ಹುದ್ದೆ?
ಕನ್ನಡಪ್ರಭವಾರ್ತೆ | ಬೆಂಗಳೂರು |ಜೂ 19
ಉಪಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್‌ನಲ್ಲಿ ಈಗ ಜಾತ್ಯಾಧಾರಿತ ಚರ್ಚೆ ಆರಂಭಗೊಂಡಿದೆ.
ಜಾತಿ ಆಧಾರದ ಮೇಲೆ ಕಾಂಗ್ರೆಸ್‌ನಲ್ಲಿ ನೀಡುತ್ತಿರುವ ಪ್ರಾತಿನಿಧ್ಯದಲ್ಲಿ ಒಕ್ಕಲಿಗರಿಗೆ ಅವಕಾಶ ಕ್ಷೀಣಿಸಿದೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ಈ ಸಮುದಾಯದ ಮುಖಂಡರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಂಬ ಕೂಗು ಗಟ್ಟಿಯಾಗುತ್ತಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರನ್ನು ರೇಸ್‌ನ ಮುಂಚೂಣಿಗೆ ತರುವ ಪ್ರಯತ್ನ ನಡೆಯುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ನಂತರ ಕಾಂಗ್ರೆಸ್‌ನಲ್ಲಿ ಜಾತ್ಯಾಧಾರಿತ ಪ್ರಾತಿನಿಧ್ಯ ನೀಡುವ ಪ್ರಕ್ರಿಯೆ ಆರಂಭಗೊಂಡಿದೆ. ಇದರ ಮೊದಲ ಭಾಗವಾಗಿ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ದಲಿತರನ್ನು ತುಷ್ಠಿಗೊಳಿಸುವ ಕೆಲಸಕ್ಕೆ ಹೈಕಮಾಂಡ್ ಕೈ ಹಾಕಿದೆ. ಜತೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಪರಿಷತ್‌ಗೆ ಆಯ್ಕೆಗೊಳಿಸಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ.
ಪರಮೇಶ್ವರ ನಂತರ ತೆರವುಗೊಳ್ಳುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಉತ್ತರ ಕರ್ನಾಟಕದ ಲಿಂಗಾಯಿತ ಮುಖಂಡರೊಬ್ಬರನ್ನು ನೇಮಕ ಮಾಡುವುದಕ್ಕೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಚಿಂತನೆ ನಡೆಸಿದ್ದಾರೆ.
ಆದರೆ ಈ ಎಲ್ಲ ಪ್ರಕ್ರಿಯೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪ್ರಬಲವಾಗಿರುವ ಒಕ್ಕಲಿಗರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಸಮುದಾಯದ ಮುಖಂಡರು ಈಗ ಉಪಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಉತ್ತರ ಕರ್ನಾಟಕದ ದಲಿತ ಮುಖಂಡ ಖರ್ಗೆ ಅವರಿಗೆ ಕೇಂದ್ರ ನಾಯಕತ್ವ, ಅದೇ ಭಾಗದ ಲಿಂಗಾಯಿತ ಮುಖಂಡರಿಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡುವುದರಿಂದ ಪ್ರಬಲ ಮತಬ್ಯಾಂಕ್‌ನ್ನು ಭದ್ರಗೊಳಿಸಿದಂತಾಗುತ್ತದೆ. ಅದೇ ರೀತಿ ಹಿಂದುಳಿದ ವರ್ಗಕ್ಕೆ ಸೇರಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಒಕ್ಕಲಿಗ ಸಮುದಾಯದ ವ್ಯಕ್ತಿಯೊಬ್ಬರನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ನಿಯೋಜಿಸುವದರಿಂದ ಭವಿಷ್ಯದಲ್ಲಿ ಪಕ್ಷ ಇನ್ನಷ್ಟು ಭದ್ರಗೊಳ್ಳುತ್ತದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರವಾನಿಸಲು ಕಾಂಗ್ರೆಸ್‌ನ ಪ್ರಬಲ ಬಣವೊಂದು ಸಜ್ಜಾಗಿದೆ.
ಆದರೆ ಈ ಸಂದರ್ಭದಲ್ಲಿ ಅದು, ಆಶ್ಚರ್ಯಕರ ರೀತಿಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರನ್ನು ಆಯ್ದುಕೊಂಡಿದೆ. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಂಘಟನಾ ಚಾತುರ್ಯ ಹಾಗೂ ಸಾಮರ್ಥ್ಯವಿದ್ದರೂ ಅವರು ನೇರವಾಗಿ ಮುಖ್ಯಮಂತ್ರಿ ಹುದ್ದೆಯ ಮಹಾತ್ವಾಕಾಂಕ್ಷೆ ಹೊಂದಿದ್ದಾರೆ. ಸದ್ಯದ ಮಟ್ಟಿಗೆ ಅದು ಸಾಧ್ಯವಿಲ್ಲ.
ಹೀಗಾಗಿ ಒಕ್ಕಲಿಗರ ಪ್ರಾತಿನಿಧ್ಯದ ಹೆಸರಿನಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ಜಯಚಂದ್ರ ಅವರಿಗೆ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್‌ಗೆ ಮುಟ್ಟಿಸುವ ಪ್ರಯತ್ನ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ಆರಂಭವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.