ನಡೆಯದ ರೋಬೋ ಚಮತ್ಕಾರ
ಅಕ್ಷತಾ ಮೇಲೆತ್ತಲು ಮದುರೈನ ಮಣಿಕಂಠ ನೇತೃತ್ವದ ತಂಡ ಬುಧವಾರ...
ಬಿಜಾಪುರ: ಅಕ್ಷತಾ ಮೇಲೆತ್ತಲು ಮದುರೈನ ಮಣಿಕಂಠ ನೇತೃತ್ವದ ತಂಡ ಬುಧವಾರ ರಾತ್ರಿ ಮೂರು ಬಾರಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಲಿಲ್ಲ.
ಮೂರು ಬಾರಿಯೂ ರೊಬೋಟ್ ಕೈಯ್ಯಲ್ಲಿ ಮಣ್ಣೇ ಬಂದಿದ್ದರಿಂದ ಕೊಳವೆ ಬಾವಿಯಲ್ಲಿ ಮಣ್ಣು ತುಂಬಿಕೊಂಡಿದೆ ಎಂದು ಅಂದಾಜಿಸಲಾಗಿದೆ. ಗುರುವಾರ ಮುಂಜಾನೆ ರೊಬೋಟ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.
ರೊಬೋಟ್ ಕೈಗೆ ಲೆನ್ಸ್ ಕ್ಯಾಮೆರಾ ಅಳವಡಿಸಿದ್ದು, ಕ್ಯಾಮೆರಾದಲ್ಲೂ ಮಗುವಿನ ಚಿತ್ರ ಮೂಡಲೇ ಇಲ್ಲ. ಇದರಿಂದ ಕಾರ್ಯಾಚರಣೆ ಇನ್ನಷ್ಟು ವಿಳಂಬವಾಯಿತು.
ಮುಂದುವರಿದ ಕಾರ್ಯಾಚರಣೆ: ಮಂಗಳವಾರ ರಾತ್ರಿಯಿಂದಲೇ ಕೊಳವೆ ಬಾವಿಯ ಪಕ್ಕದಲ್ಲೇ 35 ಅಡಿ ಆಳದ ಕಾಲುವೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಕಾಲುವೆ ನಿರ್ಮಾಣ ಕಾರ್ಯ ಮುಗಿದಿತ್ತು. ಬಳಿಕ ಹಟ್ಟಿ ಚಿನ್ನದ ಗಣಿ ಕಾರ್ಮಿಕರು 10 ಅಡಿ ವ್ಯಾಸದ ಸುರಂಗ ಮಾರ್ಗ ಕೊರೆದು ಕೊಳವೆ ಬಾವಿ ಸಂಪರ್ಕಿಸುವ ಕಾರ್ಯ ನಡೆಸಿದರು. ರಾತ್ರಿ ವೇಳೆಗೆ ಬಾವಿ ತಲುಪಲು ಕೇವಲ ಅರ್ಧ ಅಡಿ ಮಾತ್ರ ಬಾಕಿ ಉಳಿದಿತ್ತು. ಬಳಿಕ ಅಲ್ಲಿ ಕೊಳವೆ ಬಾವಿಗೆ ಅಡ್ಡಲಾಗಿ ಪ್ಲೇಟ್ ಅಳವಡಿಸಿ, ಮೇಲ್ಮುಖವಾಗಿ ಕೊಳವೆ ಬಾವಿ ಕೊರೆದು ಬಾಲಕಿಯನ್ನು ತಲುಪುವ ಯತ್ನ ಮುಂದುವರಿಸಲಾಗಿತ್ತು.
ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಎಸ್ಪಿ ರಾಮನಿವಾಸ ಸಫಟ್, ಹಿರಿಯ ಅಧಿಕಾರಿಗಳು, ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು, ರೋಬೋಟ್ ತಂತ್ರಜ್ಞ ಮಣಿಕಂಠ ಸೇರಿದಂತೆ ಹಲವರು ಸ್ಥಳದಲ್ಲೇ ಬೀಡು ಬಿಟ್ಟಿದ್ದು ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಎರಡನೇ ದಿನವೂ ನಾಗಠಾಣ ಸುತ್ತಮುತ್ತಲಿನ ಪ್ರದೇಶದ ಸಾವಿರಾರು ಜನರು ಸ್ಥಳಕ್ಕೆ ಧಾವಿಸಿ ಬರುತ್ತಿದ್ದಾರೆ. ಬಾಲಕಿ ಅಕ್ಷತಾಳ ತಂದೆ ಹನುಮಂತ, ತಾಯಿ ಸಾವಿತ್ರಿ, ಅವರ ಬಂಧು ಬಳಗದ ಹತ್ತಾರು ಜನರು 3 ದಿನದಿಂದ ಸ್ಥಳದಲ್ಲೇ ಇದ್ದು, ಆಕ್ರಂದನ ಮುಗಿಲು ಮುಟ್ಟಿದೆ.