ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಪಾರದರ್ಶಕ ಆಡಳಿತವೆಲ್ಲಿದೆ? ಪೊಲೀಸ್ ಠಾಣೆಯಲ್ಲಿ ಇದೆಯೇ? ಕಂದಾಯ ಕಚೇರಿಯಲ್ಲಿದೆಯೇ?

'ಸ್ವಚ್ಛ, ಸುಭದ್ರ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇವೆ...

Mainashree
Updated On : 20 Jun 2014, 1:15 am

ಬೆಂಗಳೂರು: 'ಸ್ವಚ್ಛ, ಸುಭದ್ರ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಸರ್ಕಾರ ಶಾಸನ ಸಭೆಯಲ್ಲಿ ಭರವಸೆ ನೀಡಿದೆ. ಆದರೆ ಎಲ್ಲಿದೆ? ಪೊಲೀಸ್ ಠಾಣೆಯಲ್ಲಿದೆಯೇ? ಕಂದಾಯ ಕಚೇರಿಯಲ್ಲಿದೆಯೇ ? ಇಲ್ಲ.
ಸರ್ಕಾರ ಬಜೆಟ್‌ನಲ್ಲಿ ಉಲ್ಲೇಖಿಸಿದ ಈ ಸಾಲು ಕೇವಲ ಅಕ್ಷರವಲ್ಲ, ಪ್ರಮಾಣ. ಈ ಚಿಕ್ಕ ವಾಕ್ಯದ ಆಧಾರದ ಮೇಲೆ ಸದನದಲ್ಲಿ ದಿನವಿಡಿ ಚರ್ಚೆ ಮಾಡಬಹುದು. ಆದರೆ ನಮ್ಮ ಶಾಸಕರಿಗೆ ಇಂಥದೆಲ್ಲ ಗೊತ್ತಾಗುವುದೇ ಇಲ್ಲ! ಶಾಸಕರ ಜವಾಬ್ದಾರಿ ಮತ್ತು ವರ್ತನೆ ಬಗ್ಗೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ವಿಷಾದ ಮಿಶ್ರಿತ ವ್ಯಾಖ್ಯಾನವಿದು.
ಜೂ 23ರಿಂದ ಜುಲೈ ಅಂತ್ಯದವರೆಗೆ ಒಂದು ತಿಂಗಳು ಕಾಲ ರಾಜ್ಯ ವಿಧಾನ ಮಂಡಲದ ಮಹಾ ಅಧಿವೇಶನ ಆರಂಭಗೊಳ್ಳುತ್ತದೆ. ಹಲವು ವರ್ಷಗಳ ನಂತರ ಇಲಾಖಾವಾರು ಬೇಡಿಕೆ ಮೇಲಿನ ಚರ್ಚೆಗೆ ಸರ್ಕಾರ ಹಾಗೂ ಸಭಾಧ್ಯಕ್ಷರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಕಲಾಪದ ಗುಣಮಟ್ಟ ಮತ್ತು ಶಾಸಕರ ಪ್ರತ್ಯುತ್ಪನಮತಿತ್ವದ ಬಗ್ಗೆ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕಾಗೋಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸರ್ಕಾರದ ನಡಾವಳಿ ಬಗ್ಗೆಯೂ ಅತೃಪ್ತಿ ತೋರಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ.....
'ಸ್ವಚ್ಛ, ಸುಭದ್ರ ಹಾಗೂ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಮುಖ್ಯಮಂತ್ರಿಗಳು ಬಜೆಟ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಎಲ್ಲಿದೆ ಇದು ? ಈ ವಿಚಾರದ ಬಗ್ಗೆ ದಿನವಿಡಿ ಚರ್ಚೆ ಮಾಡಬಹುದು. ನಮ್ಮ ಶಾಸಕರು ಈ ರೀತಿ ಮಾಡುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದರೆ ಆಗಲಿಲ್ಲ. ಹೀಗಾಗಿ ನಾನೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕೇಳಿದ್ದೇನೆ. ಎಲ್ಲಿದೆ ಸ್ವಚ್ಛ, ಸುಭದ್ರ ಹಾಗೂ ಪಾರದರ್ಶಕ ಆಡಳಿತ ? ಕಂದಾಯ ಇಲಾಖೆಯಲ್ಲಿದೆಯೇ ? ಆರೋಗ್ಯ ಇಲಾಖೆಯಲ್ಲಿದೆಯೇ ? ಪೊಲೀಸ್ ಠಾಣೆಯಲ್ಲಿದೆಯೇ ? ಸರ್ಕಾರ ಶಾಸನ ಸಭೆಯಲ್ಲಿ ಇಂಥದೊಂದು ಭಾಷೆ ನೀಡಿದ ಮೇಲೆ ಅದು ಕೆಳಹಂತದವರೆಗೆ ತಲುಪಬೇಕು. ಶಾಸಕರು ಸದನದಲ್ಲಿ ಇಂಥ ವಿಚಾರದ ಬಗ್ಗೆ ಪ್ರಸ್ತಾಪಿಸಬೇಕು.
 ಜನರ ಕೈಗನ್ನಡಿ
ಶಾಸನಸಭೆ ಎಂದರೆ ನನ್ನ ಪ್ರಕಾರ ಜನತೆಯ ಕೈಗನ್ನಡಿ. ಸದನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚಿಸುವ ಮುಕ್ತ ವಾತಾವರಣ ಇರಬೇಕು. ನಾಡಿನ ಸಮಸ್ತ ಸಮಸ್ಯೆ ಮತ್ತು ಅಭಿವೃದ್ಧಿಯ ವಿದ್ಯಮಾನ ಸದನದಲ್ಲಿ ಮಂಥನವಾಗಬೇಕು ಎಂಬುದೇ ನನ್ನ ಫಿಲಾಸಪಿ. ಆದರೆ ಇದು ಎಲ್ಲಾಗುತ್ತಿದೆ ? ನಾನು ಕೂಡಾ ಈ ಹಿಂದೆ ಸರ್ಕಾರದಲ್ಲಿ ಸಚಿವನಾಗಿದ್ದೆ. ಶಾಸಕರ ಪ್ರಶ್ನೆಗೆ, ಗಮನ ಸೆಳೆಯುವ ಸೂಚನೆಗೆ, ಶೂನ್ಯವೇಳೆಯಲ್ಲಿ ಪ್ರಸ್ತಾಪವಾಗುವ ಗಂಭೀರ ವಿಚಾರಗಳಿಗೆ ಉತ್ತರ ನೀಡಲು ಸಾಧ್ಯವಾಗದಿದ್ದರೆ ಅದಕ್ಕಿಂತ ಬೇರೆ ಅಪಮಾನವಿಲ್ಲ ಎಂದು ನಾನು ಭಾವಿಸಿದ್ದೆ. ಅಂಥ ಸಂದರ್ಭ ನಿರ್ಮಾಣವಾದಾಗ ದಿನವಿಡಿ ಚಡಪಡಿಸುತ್ತಿದ್ದೆ. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ, ಈಗ ಅಂಥ ತುಡಿತ ಕೆಲವರನ್ನು ಬಿಟ್ಟರೆ ಯಾರಲ್ಲೂ ಕಾಣುತ್ತಿಲ್ಲ. ಶಾಸಕರೂ ಅಷ್ಟೇ; ಸಚಿವರೂ ಅಷ್ಟೇ!
ಸಿಎಂ, ಸ್ಪೀಕರ್ ಕಾರಣ
1972ರಿಂದಲೂ ಇಲಾಖಾವಾರು ಬೇಡಿಕೆ ಮೇಲೆ ಚರ್ಚೆ ನಡೆಯುತ್ತಿತ್ತು. ಸದನ ಚರ್ಚೆಯಲ್ಲಿ ಅಪಾರ ನಂಬಿಕೆ ಮತ್ತು ಗೌರವ ಹೊಂದಿರುವ ನನ್ನ ಪ್ರಕಾರ, ಪ್ರತಿ ವರ್ಷ ಇದು ನಡೆಯಬೇಕು. ಆದರೆ 1998ರ ನಂತರ ಈ ಸಂಪ್ರದಾಯಕ್ಕೆ ಮಹತ್ವ ಕಡಿಮೆ ಆಗುತ್ತಾ ಬಂದಿದೆ. ಇಲಾಖಾವಾರು ಚರ್ಚೆ ನಡೆದಿಲ್ಲ. ನನ್ನ ಪ್ರಕಾರ ಆಯಾ ಕಾಲಘಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಸ್ಪೀಕರ್ ಸ್ಥಾನವನ್ನು ಅಲಂಕರಿಸಿದವರೇ ಇದಕ್ಕೆ ನೇರ ಹೊಣೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಬೇಜವಾಬ್ದಾರಿತನಕ್ಕೆ ಅವಕಾಶ ನೀಡಬಾರದು.
ಸಿಎಂ ಸಿದ್ದರಾಮಯ್ಯನವರು ಈ ಬಾರಿ ಮತ್ತೆ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ವೈಯಕ್ತಿಕವಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಏಕೆಂದರೆ ಈ ಕಲಾಪವನ್ನು ಹಿಂದೆಂದಿಗಿಂತಲೂ ಹೆಚ್ಚು ಅರ್ಥಪೂರ್ಣಗೊಳಿಸುವುದಕ್ಕೆ ಬೇಕಾದ ಎಲ್ಲ ಅವಕಾಶಗಳು ನಮ್ಮ ಸದನದಲ್ಲಿ ಇದೆ. ಪ್ರತಿಪಕ್ಷ ಸಾಲಿನತ್ತ ಒಮ್ಮೆ ದೃಷ್ಟಿ ಹರಿಸಿ, ಅಲ್ಲಿ ಮುಖ್ಯಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿರುವ ಇಬ್ಬರು ಇದ್ದಾರೆ. ಸಚಿವರಾಗಿ ಅಧಿಕಾರ ನಡೆಸಿದವರಿದ್ದಾರೆ. ಆಡಳಿತ ಪಕ್ಷದ ಸಾಲಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಇದ್ದಾರೆ. ಇವರೆಲ್ಲರ ಮಾರ್ಗದರ್ಶನದಲ್ಲಿ ಅರ್ಥಪೂರ್ಣ ಚರ್ಚೆಯಾಗಬೇಕು. ಪ್ರತಿಭಟನೆ ಕೊನೆಯ ಅಸ್ತ್ರ. ಹೀಗಾಗಿ ಗದ್ದಲದಲ್ಲಿ ಸದನ ಕೊನೆಯಾಗಬಾರದು. ಶಾಸಕರು ಸಾಕಷ್ಟು ಸಿದ್ಧತೆಯೊಂದಿಗೆ ಸದನಕ್ಕೆ ಬರಲಿ.
 ದ್ವೇಷವಿಲ್ಲ  
ಕಲಾಪ ಸಂದರ್ಭದಲ್ಲಿ ನಾನು ಆಗಾಗ ಸಿಟ್ಟು ಮಾಡಿಕೊಳ್ಳುತ್ತೇನೆ ಎಂದು ಶಾಸಕರು ಅಲ್ಲಲ್ಲಿ ಹೇಳಿದ್ದು ನನ್ನ ಗಮನಕ್ಕೆ ಬಂದಿದೆ. ಆದರೆ ಪ್ರಾಮಾಣಿಕವಾಗಿ ಹೇಳುತ್ತೇನೆ, ನನ್ನ ಸಿಟ್ಟಿನಲ್ಲಿ ದ್ವೇಷವನ್ನು ಹುಡುಕಲು ಯಾರಿಂದಲೂ ಸಾಧ್ಯವಿಲ್ಲ. ಕಿರಿಯರನ್ನು ತಿದ್ದುವ ಸಾಧನಗಳಲ್ಲಿ ಕೋಪವೂ ಒಂದು. ನನ್ನ ಸಿಟ್ಟು ಆ ಕ್ಷಣಕ್ಕೆ ಮುಗಿದು ಹೋಗುತ್ತದೆ.
 ಅನುಮತಿ ಬೇಕಿಲ್ಲ
ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಾಸಕರ ವಿಚಾರಣೆ ನಡೆಸುವುದಕ್ಕೆ ನನ್ನ ಒಪ್ಪಿಗೆ ಬೇಕಿಲ್ಲ ಎಂದು ನಾನು ಇತ್ತೀಚೆಗೆ ಒಂದು ಆದೇಶ ಹೊರಡಿಸಿದ್ದೇನೆ. ಕಾನೂನು ಪ್ರಕಾರ ಇದರ ಅಗತ್ಯವಿಲ್ಲ. ಯಾರಿಗೆ ಶಾಸಕರನ್ನು ನೇಮಕ ಮಾಡುವ ಅಧಿಕಾರ ಇಲ್ಲವೋ, ಆತನಿಗೆ ತೆಗೆದು ಹಾಕುವ ಅಧಿಕಾರವೂ ಇರುವುದಿಲ್ಲ. ಹೀಗಾಗಿ ಸದನ, ಶಾಸಕರ ಭವನ ಇತ್ಯಾದಿ ಸ್ಪೀಕರ್ ವ್ಯಾಪ್ತಿಯ ಪ್ರದೇಶ ಹೊರತು ಪಡಿಸಿ ತಪ್ಪು ಮಾಡಿದ ಶಾಸಕರನ್ನು ಬಂಧಿಸುವುದಕ್ಕೂ ಸ್ಪೀಕರ್ ಅನುಮತಿ ಬೇಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಆದೇಶ ಮಾಡಿದ್ದೇನೆ ಎಂದು ಹೇಳಿದರು.


ರಾಘವೇಂದ್ರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement