ಬೆಂಗಳೂರಿನಲ್ಲಿ ನಿತ್ಯ ತ್ಯಾಜ್ಯೋತ್ಸವ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ..
- 4,000 ಕೋಟಿಗೂ ಹೆಚ್ಚಿನ ಮೊತ್ತದ ಅನ್ನಭಾಗ್ಯ
- 1368 ಕೋಟಿಯ ಋಣಮುಕ್ತ
- 319 ಕೋಟಿ ಕುಟೀರಜ್ಯೋತಿ ಬಿಲ್ ಮನ್ನಾ
- 818 ಕೋಟಿ ವೆಚ್ಚದ ಕ್ಷೀರಭಾಗ್ಯ
ಇಷ್ಟಕ್ಕೆಲ್ಲ ಖರ್ಚುಮಾಡಲು ನಮ್ಮ ಸರ್ಕಾರದ ಬಳಿ ಹಣ ಮತ್ತು ಇಚ್ಛಾಶಕ್ತಿಯಿದೆ. ಮಾತ್ರವಲ್ಲ...
- ಮೌಢ್ಯ ಮಸೂದೆ
- ದುಬಾರಿ ಮದುವೆಗೆ ತೆರಿಗೆ
- ಅಹಿಂದ ಮಕ್ಕಳಿಗೆ ಮಾತ್ರ ಪ್ರವಾಸ
- ಹಾಲಿಗೆ ಜಾತಿ ಆಧಾರಿತ ಪ್ರೋತ್ಸಾಹಧನ...
ಇಂತಹ ಅಷ್ಟೇನೂ ಮುಖ್ಯವಲ್ಲದ ಯೋಜನೆ ರೂಪಿಸಲು ಸರ್ಕಾರದ ಬಳಿ ಸಮಯವಿದೆ. ಆದರೆ ರಾಜಧಾನಿ ಬೆಂಗಳೂರಿನ ಕಸದ ಸಮಸ್ಯೆ ನಿವಾರಿಸಲು ಆಸಕ್ತಿ, ಸಮಯ, ದುಡ್ಡು ಯಾವುದೂ ನಮ್ಮ ಸರ್ಕಾರದ ಬಳಿ ಇಲ್ಲ. ಕಸದ ಸಮಸ್ಯೆಯನ್ನೂ ಸರ್ಕಾರ ಕಾಲುಕಸದಂತೆ ಕಾಣುತ್ತಿದೆ. ಬಹುಶಃ ಕಸ ಯಾವ ಜಾತಿ, ಧರ್ಮಕ್ಕೂ ಸೇರಿದ್ದಲ್ಲ ಎಂಬ ಕಾರಣಕ್ಕೆ ಈ ನಿರ್ಲಕ್ಷ್ಯವೋ?
ಏಕೆಂದರೆ, ಈ ಸಮಸ್ಯೆಗೆ ಗಮನಕೊಡುವುದರಿಂದ ಯಾವುದೇ ಒಂದು ಜಾತಿ, ಧರ್ಮದವರ ಬೆಂಬಲ ಸರ್ಕಾರಕ್ಕೆ ದೊರೆಯುವುದಿಲ್ಲ. ಅದು ಸಮುದಾಯ ಕೇಂದ್ರೀಕೃತ ಯೋಜನೆಯಲ್ಲ. ಜನಪ್ರಿಯ ಯೋಜನೆಯೂ ಆಗುವುದಿಲ್ಲ. ಹೀಗಾಗಿ ಸರ್ಕಾರ ಕಸ ಸಮಸ್ಯೆ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿಲ್ಲ ಎಂದು ಅನಿವಾರ್ಯವಾಗಿ ಭಾವಿಸಬೇಕಾಗಿದೆ.
ಇದ್ಯಾವುದೂ ಕಾರಣವಿಲ್ಲವೆಂದಾದರೆ ಸರ್ಕಾರ ಕಸದ ಸಮಸ್ಯೆಯನ್ನು ಆದ್ಯತೆ ಮೇರೆಗೆ ಪರಿಹರಿಸಬೇಕಿತ್ತು. ಯಾಕೆಂದರೆ ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿಧಾನಸಭೆ ಕಲಾಪದೊಳಗೆ 'ನಾವು ಅಧಿಕಾರದಲ್ಲಿದ್ದಿದ್ದರೆ 6 ತಿಂಗಳಲ್ಲಿ ನಾನು ಕಸದ ಸಮಸ್ಯೆ ಪರಿಹರಿಸುತ್ತಿದ್ದೆ' ಎಂದು ಹೇಳಿದ್ದರು. ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಕಾಂಗ್ರೆಸ್ ಸಾಕಷ್ಟು ಪ್ರತಿಭಟನೆಗಳನ್ನೂ ಮಾಡಿತ್ತು. ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ 'ಕಸದಿಂದಮತ'ತೆಗೆಯುವ ಪ್ರಯತ್ನ ಮಾಡಿತ್ತು.
ಆದರೆ ಅಧಿಕಾರಕ್ಕೆ ಬಂದ ನಂತರ ಮಾಡಿದ ಪ್ರಯತ್ನ ಸೊನ್ನೆ. ಹಳೆ ಸರ್ಕಾರದಂತೆ ಸರ್ಕಾರ ಕಸದ ಬಗ್ಗೆ ವಿಚಾರ ಮಾಡಬೇಕಾದರೆ ಮಂಡೂರು ಗ್ರಾಮಸ್ಥರು ಪ್ರತಿಭಟನೆಗಿಳಿಯಬೇಕಾಯಿತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ವರ್ಷಸಂದ ನಂತರ ಕಸದ ಸಮಸ್ಯೆ ಮೊದಲಿದ್ದಲ್ಲಿಯೇ ಇದೆ. ಸಾಸಿವೆ ಕಾಳಿನಷ್ಟು ಬದಲಾವಣೆಯೂ ಆಗಲಿಲ್ಲ. ಇಷ್ಟಾದ ಮೇಲೂ ಜಾಹೀರಾತು ಹೇಳುತ್ತೆ ಇದು ನುಡಿದಂತೆ ನಡೆವ ಸರ್ಕಾರ!
ಸರ್ಕಾರ ಯಾವುದೇ ಇರಲಿ ಬೆಂಗಳೂರಿನ ಕಸದ ಸಮಸ್ಯೆ ಪರಿಹರಿಸಲು ಅಥವಾ ಅದಕ್ಕೊಂದು ಸೂಕ್ತ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ ಎಂಬುದು ಸ್ಪಷ್ಟ. ಅದರ ಬಗ್ಗೆ ಸರ್ಕಾರ ಚಿಂತನೆ ಕೂಡ ನಡೆಸಿರಲಿಲ್ಲ. ಸರ್ಕಾರಕ್ಕೆ ನಿಜವಾಗಿಯೂ ಕಾಳಜಿ ಇದ್ದರೆ ಗ್ರಾಮಸ್ಥರ ಪ್ರತಿಭಟನೆಗೇ ಮೊದಲೇ ಒಂದಿಷ್ಟಾದರೂ ಕ್ರಮ ಕೈಗೊಂಡಿರುತ್ತಿತ್ತು.
ಕೇವಲ ಕಸದಿಂದ ಬೆಂಗಳೂರಿನ ಮಾನ ಹರಾಜಾಯಿತು ಎಂದು ಪ್ರತಿಪಕ್ಷದಲ್ಲಿ ಕುಳಿತು ಬೊಬ್ಬೆಹೊಡೆದವರೇ ಆಡಳಿತ ಪಕ್ಷದಲ್ಲಿ ಕುಳಿತು ಮತ್ತೊಮ್ಮೆ ಬೆಂಗಳೂರಿನ ಮಾನ ಹರಾಜಾಗಲು ಅವಕಾಶ ಮಾಡಿಕೊಟ್ಟಂತಾಯಿತು. ಕಸದ ಜತೆಗೆ ಬೆಂಗಳೂರಿನ ಮಾನವೂ 'ಕಾಲುಕಸ'ಕ್ಕೆ ಸಮನಾಗಿಹೋಯಿತು.
ಇಷ್ಟಾದ ಮೇಲೆ ಸಿದ್ದರಾಮಯ್ಯನವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, 'ಎದ್ದೇಳಿ ಅಧಿಕಾರಿಗಳೇ' ಎಂದು ಬೈದು ಅಬ್ಬರಿಸಿದರು. ಆದರೆ ಸರ್ಕಾರವೇ ಕಸದ ಬಗ್ಗೆ ಅಧಿಕಾರಕ್ಕೆ ಬಂದಕೂಡಲೇ ಎಚ್ಚೆತ್ತಿದ್ದರೆ ಈಗನಿದ್ರಾಭಂಗವಾಗುವ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೇ?
ಬೆಂಗಳೂರಿನ ಕಸದ ಸಮಸ್ಯೆ ಗಂಭೀರವಾಗಿದೆ. ಅಷ್ಟು ಸುಲಭವಾಗಿ ಅಥವಾ ದಿಢೀರನೆ ಪರಿಹರಿಸುವಂತಹ ಸಮಸ್ಯೆಯಲ್ಲ ಎಂಬುದರ ಅರಿವಿದೆ. ಆದರೆ ಸರ್ಕಾರ ಮನಸ್ಸು ಮಾಡಿದರೆ 7-8 ತಿಂಗಳಲ್ಲಿ ಪರಿಹರಿಸಲಾಗದ ಸಮಸ್ಯೆಯಂತೂ ಖಂಡಿತ ಅಲ್ಲ. ಬೆಂಗಳೂರಿನಲ್ಲಿ ಒಂದು ದಿನಕ್ಕೆ 3500 ಟನ್ ಕಸ ಉತ್ಪಾದನೆಯಾಗುತ್ತದೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 12,000 ಟನ್ ಕಸ ಉತ್ಪಾದನೆಯಾಗುತ್ತದೆ. ಅಂದರೆ ಬೆಂಗಳೂರಿನ ಮೂರುಪಟ್ಟು ಹೆಚ್ಚು ಕಸ. ಆದರೂ ಅಲ್ಲಿ ಬೆಂಗಳೂರು ರೀತಿಯ ಕಸದ ಸಮಸ್ಯೆ ಇಲ್ಲ! ಕಂಡಕಂಡಲ್ಲಿ ಕಸಬಿದ್ದು ನಾರುತ್ತಿರುವುದಿಲ್ಲ!!
ಸಾಫ್ಟ್ವೇರ್ನಲ್ಲಿ ಅಮೆರಿಕಕ್ಕೇ ಪೈಪೋಟಿಕೊಟ್ಟವರು ನಾವು. ಒಬಾಮಾ ಬಾಯಲ್ಲಿ ಬೆಂಗಳೂರಿನ ಹೆಸರು ಬರುತ್ತಿದೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳೋಣ ಅನ್ನುವಷ್ಟರಲ್ಲಿ ಕಸದ ದುರ್ನಾಥದಿಂದ ಮೂಗುಮುಚ್ಚಿಕೊಳ್ಳುವುದರಲ್ಲಿ ಕೈ ಬ್ಯೂಸಿಯಾಗುತ್ತಿದೆ.
ನ್ಯೂಯಾರ್ಕ್ ನಗರದಲ್ಲಿ ಉತ್ಪಾದನೆಯಾಗುವ ಒಟ್ಟು ಕಸದ ಶೇ.17ರಷ್ಟನ್ನು ಮಾತ್ರ ರೀಸೈಕಲ್ ಮಾಡಲಾಗುತ್ತಿದೆ. ಅದರಲ್ಲಿ ಕೇವಲ ಪೇಪರ್ ರೀಸೈಕಲ್ ಮೂಲಕ ನ್ಯೂಯಾರ್ಕ್ ಸಿಟಿ ಕಾರ್ಪೊರೇಶನ್ 74 ಲಕ್ಷ ಡಾಲರ್ ಲಾಭ ಮಾಡುತ್ತಿದೆಯಂತೆ. ನಮಗೆ ಲಾಭ ಸಿಗದಿದ್ದರೆ ಬೇಡ. ಕೊನೇ ಪಕ್ಷ ಕಸದ ನಿರ್ವಹಣೆಯಾದರೂ ಆಗುತ್ತದಲ್ಲವೇ?
ನಮ್ಮನ್ನಾಳುವವರಿಗೆ ದೂರದೃಷ್ಟಿಯ ಕೊರತೆಯಿದೆ. ಅವರದ್ದೇನಿದ್ದರೂ ತಕ್ಷಣದ ಪರಿಹಾರ ಮಾತ್ರ ಎಂಬುದಕ್ಕೆ ಬೆಂಗಳೂರಿನ ಕಸದ ಸಮಸ್ಯೆ ಅತ್ಯಂತ ಉತ್ತಮ ಉದಾಹರಣೆ. ಸ್ವಲ್ಪವೇ ಸ್ವಲ್ಪ ದೂರದೃಷ್ಟಿ ಇದ್ದಿದ್ದರೂ ಕಸ ಮುಂದೊಂದು ದಿನ ಸಮಸ್ಯೆಯಾಗಿ ಬೆಳೆಯುತ್ತದೆ ಎಂಬ ಸೂಚನೆ ಕಣ್ಣಿಗೆ ಖಂಡಿತ ರಾಚುತ್ತಿತ್ತು. ಸರ್ಕಾರದ ಇದೇ ಧೋರಣೆ ಮುಂದುವರಿದರೆ ಕಸವೊಂದೇ ಅಲ್ಲ ಬೆಂಗಳೂರಿನಲ್ಲಿ ಮಳೆಯಿಂದ ಹಿಡಿದು ಪ್ರತಿಯೊಂದೂ ಸಮಸ್ಯೆಯಾಗಿ ಕಾಡುವ ದಿನಗಳು ದೂರವಿಲ್ಲ.
ಸಾಫ್ಟ್ವೇರ್ನಲ್ಲಿ ಅಮೆರಿಕಕ್ಕೇ ಪೈಪೋಟಿಕೊಟ್ಟವರು ನಾವು. ಒಬಾಮ ಬಾಯಲ್ಲಿ ಬೆಂಗಳೂರಿನ ಹೆಸರು ಬರುತ್ತಿದೆ ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಳ್ಳೋಣ ಅನ್ನುವಷ್ಟರಲ್ಲಿ ಕಸದ ದುರ್ನಾಥದಿಂದ ಮೂಗುಮುಚ್ಚಿಕೊಳ್ಳುವುದಲ್ಲಿ ಕೈ ಬ್ಯೂಸಿಯಾಗುತ್ತಿದೆ ಎನ್ನುತ್ತಾರೆ
ವಿನಾಯಕ ಭಟ್ಟ ಮೂರೂರು