ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸವಿತಾ ಸಮಾಜ 7 ಮಂದಿಗೆ 1 ಲಕ್ಷ

ಸವರ್ಣೀಯರ ತಿರಸ್ಕಾರಕ್ಕೆ ಒಳಗಾಗಿರುವ ಸವಿತಾ ಸಮಾಜದ ಏಳು ಜನರಿಗೆ...

Mainashree
Updated On : 19 Jun 2014, 10:15 am

ಕನ್ನಡಪ್ರಭ ವಾರ್ತೆ | ಬೆಂಗಳೂರು | ಜೂನ್ 19
ಸವರ್ಣೀಯರ ತಿರಸ್ಕಾರಕ್ಕೆ ಒಳಗಾಗಿರುವ ಸವಿತಾ ಸಮಾಜದ ಏಳು ಜನರಿಗೆ ಜೀವನೋಪಾಯಕ್ಕೆ ಇತರೆ ವೃತ್ತಿ ನಿರ್ವಹಣೆಗೆ ಅನುವಾಗಲು ತಲಾ ಒಂದು ಲಕ್ಷ ರುಪಾಯಿ ಸಾಲ ನೀಡುವ ಮೂಲಕ ಸರ್ಕಾರ ಅನುಕಂಪ ತೋರಿದೆ.
ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ತಾಳೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಿದರು ಎಂದು ಸವರ್ಣೀಯರು ಸವಿತಾ ಸಮಾಜದ ಐದು ಅಂಗಡಿಗಳಿಗೆ ಕ್ಷೌರಕ್ಕೆ ಬರುತ್ತಿರಲಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಇವರಿಗೆ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ತಲಾ ಒಂದು ಲಕ್ಷ ರುಪಾಯಿ ಸಾಲವನ್ನು ಶೇ.4ರಷ್ಟು ಬಡ್ಡಿದರದಲ್ಲಿ ವಿತರಿಸಲಾಗಿದೆ. ಇದರಲ್ಲಿ 5 ಸಾವಿರ ಸಬ್ಸಿಡಿ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್. ಆಂಜನೇಯ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ತಾಳೂರಿನ ಹನುಮಂತಪ್ಪ, ಮಲ್ಲಿಕಾರ್ಜುನ, ಆಂಜನೇಯ, ಈರಣ್ಣ, ಲೋಕೇಶ್, ಪಾಂಡುರಂಗಪ್ಪ, ದೊಡ್ಡ ಬಸಪ್ಪ ಅವರಿಗೆ ತಲಾ 50 ಸಾವಿರದ ಚೆಕ್‌ಗಳನ್ನು ಸಚಿವ ಆಂಜನೇಯ ಗುರುವಾರ ವಿತರಿಸಿದರು. ಉಳಿದ ಹಣವನ್ನು ಅವರು ಎಲ್ಲ ರೀತಿಯ ದಾಖಲೆಗಳನ್ನು ನೀಡಿದ ನಂತರ ವಿತರಿಸಲಾಗುತ್ತದೆ. ಅವರು ಬುಧವಾರ ಸಂಜೆ 7 ಗಂಟೆಗೆ ನನ್ನನ್ನು ಭೇಟಿ ಮಾಡಿದರು. ಅವರ ಜೀವನ ನಿರ್ವಹಣೆಗೆ ತೊಂದರೆಯಾಗಬಾರದು ಎಂದು ತುರ್ತಾಗಿ ಕ್ರಮ ಕೈಗೊಂಡು ನಿಗಮದಿಂದ ಕೂಡಲೇ ಹಣ ನೀಡಲಾಗಿದೆ ಎಂದು ಹೇಳಿದರು.
ತಾಳೂರು ಗ್ರಾಮದಲ್ಲಿ ಸವಿತಾ ಸಮಾಜದವರ ಸ್ಥಿತಿ ಹದಗೆಟ್ಟಿದ್ದು, ಸವರ್ಣೀಯರು ಕ್ಷೌರಕ್ಕೆ ಬರುತ್ತಿಲ್ಲ. ದಲಿತರು ಅಸ್ಪೃಶ್ಯತೆಯ ಮೊಕದ್ದಮೆ ದಾಖಲಿಸುತ್ತಿದ್ದಾರೆ. ಸ್ಥಳೀಯ ಮುಖಂಡರು ಹಾಗೂ ದಲಿತ ಮುಖಂಡರು ಎಲ್ಲರೂ ಕೂಡಿಕೊಂಡು ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ದಲಿತ ಮುಖಂಡರು ಯಾವುದೇ ಮೊಕದ್ದಮೆ ಹಾಕಬಾರದು ಎಂದು ಮನವಿ ಮಾಡಿಕೊಂಡರು.
ಸವಿತಾ ಹಾಗೂ ಮಡಿವಾಳ ಸಮಾಜದವರಿಗಾಗಿ ತಲಾ 5 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್ ನೀಡಲಾಗುತ್ತಿದೆ. ಈ ಮೂಲಕ ಶೇ.4ರಷ್ಟು ಬಡ್ಡಿ ದರದಲ್ಲಿ 1 ಲಕ್ಷದಿಂದ 5 ಲಕ್ಷದವರೆಗೆ ಅವರಿಗೆ ಸಾಲ ನೀಡಲಾಗುತ್ತದೆ. ಜೀವನೋಪಾಯಕ್ಕಾಗಿ ಇತರೆ ವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು. ರಾಜ್ಯದಲ್ಲಿ ಎರಡೂ ಸಮಾಜದವರು ಸೇರಿದಂತೆ 3 ಸಾವಿರ ಜನರಿದ್ದಾರೆ. ಅವರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ. ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಯಾವುದೇ ಶೇಕಡವಾರು ಅಂಕಗಳಿಸಿ ಉತ್ತೀರ್ಣರಾಗಿದ್ದರೂ ಅವರಿಗೆ ವಿದ್ಯಾಸಿರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲಾಗುತ್ತದೆ. ವಸತಿ ಶಾಲೆಗಳಲ್ಲಿ ಪ್ರವೇಶ ಸಿಗದಿದ್ದರೆ ವರ್ಷಕ್ಕೆ ಹತ್ತು ತಿಂಗಳು ತಲಾ 1500 ನೀಡಲಾಗುತ್ತದೆ ಎಂದರು.
ಗ್ರಾ.ಪಂ ಮೇಲೆ ಕಾನೂನು ಕ್ರಮ
ಚಿಕ್ಕಮಗಳೂರಿನ ತೊಗರಿಹಂಕಲ್ ಗ್ರಾಮ ಪಂಚಾಯಿತಿ ಕ್ಷೌರದ ಅಂಗಡಿಗೆ ಮಳಿಗೆಗಳನ್ನು ನೀಡುವುದಿಲ್ಲ ಎಂದು ಆದೇಶ ಹೊರಡಿಸಿದೆ. ಇದು ಕಾನೂನುಬಾಹಿರವಾಗಿದ್ದು, ಸೂಕ್ತ ಪರಿಶೀಲನೆ ನಡೆಸಿ ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ. ತೊಗರಿಹಂಕಲ್ ಗ್ರಾಮ ಪಂಚಾಯಿತಿ ಹರಾಜು ಇಸ್ತಿಹಾರು ಜಾಹೀರಾತಿನಲ್ಲಿ ಸಂತೆ, ಕುರಿಮಾಂಸದ ಅಂಗಡಿ, ಹಂದಿಮಾಂಸದ ಅಂಗಡಿ, ದನದ ದೊಡ್ಡಿ, ಎಳನೀರು ಸಿಪ್ಪೆ, ಅಂಗಡಿ ಮಳಿಗೆಗಳ ಹರಾಜಿಗೆ ಆದೇಶ ಹೊರಡಿಸಿದ್ದು, ಇದರಲ್ಲಿ ಕ್ಷೌರದ ಅಂಗಡಿಗೆ ಅವಕಾಶ ಇಲ್ಲ. ಇದರಲ್ಲಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರ ಹೆಸರಿನಲ್ಲಿ ಆದೇಶ ಹೊರಡಿಸಲಾಗಿದೆ. ಸಹಿ ಇದರಲ್ಲಿ ಇಲ್ಲ. ಇದನ್ನು ಸವಿತಾ ಸಮಾಜದವರು ನನ್ನ ಗಮನಕ್ಕೆ ತಂದಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳುವೆ.
ಎಚ್. ಆಂಜನೇಯ,
ಸಚಿವ, ಸಮಾಜ ಕಲ್ಯಾಣ ಖಾತೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement