ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

23ರಂದು ವಿಧಾನಸೌಧ ಮುತ್ತಿಗೆ

ಕಬ್ಬು, ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ...

Mainashree
Updated On : 21 Jun 2014, 1:16 am

ಬೆಂಗಳೂರು: ಕಬ್ಬು, ಭತ್ತ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಲು ವಿಧಾನಸೌಧಕ್ಕೆ ಜೂನ್ 23 ರಂದು ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಬ್ಬಿಗೆ ನಿಗದಿ ಮಾಡಿರುವ ಬೆಲೆಯನ್ನು ಕಾರ್ಖಾನೆ ಮಾಲೀಕರಿಂದ ಸರ್ಕಾರ ಕೊಡಿಸಬೇಕು. ಹಾಗೆಯೇ ಭತ್ತ ಹಾಗೂ ನಷ್ಟ ಅನುಭವಿಸಿದ ಹತ್ತಿ ಬೆಳೆಗಳಿಗೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಹಾಗೂ ಪರಿಹಾರ ಘೋಷಿಸಬೇಕು. ಹತ್ತಿ ಬೆಳೆ ನಷ್ಟಕ್ಕೆ ಕಾರಣವಾದ ಮಾನ್ಸಂಟೊದ ಮಹಿಕೊ ಕಂಪನಿ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಸಮಗ್ರವಾದ ನೀರಾವರಿ ಯೋಜನೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.
ಮುಂಬರುವ ವಿಧಾನಸಭೆ ಅಧಿವೇಶನ ನಡೆಯಲು ಬಿಡುವುದಿಲ್ಲ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದನು. ಆಗ ಮುಖ್ಯಮಂತ್ರಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಾತು ಕೊಟ್ಟಿರುವ ಹಿನ್ನೆಲೆಯಲ್ಲಿ ಅಂದಿನ ಅಧಿವೇಶನಕ್ಕೆ ಯಾವುದೇ ಅಡ್ಡಿ ಮಾಡಿರಲಿಲ್ಲ. ಕೊಟ್ಟ ಮಾತುಗಳನ್ನು ಈಡೇರಿಸದ ಹೊರತು ಈ ಅಧಿವೇಶನ ಮಾಡಲು ಬಿಡುವುದಿಲ್ಲ. ಮಾಡಲೇ ಬೇಕಾದರೆ ನಮ್ಮನ್ನು ಜೈಲಿನಲ್ಲಿಟ್ಟು ಅಧಿವೇಶನ ಮಾಡಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಆಯೋಗ ರಚನೆಗೆ ಒತ್ತಾಯ: ಕೃಷಿಬೆಳೆಬೆಲೆಗೆ ಸಂಬಂಧಿಸಿ ಆಯೋಗವೊಂದನ್ನು ರಚಿಸಬೇಕು. ಅದರಲ್ಲಿ ರೈತ ಸಂಘದ ಪ್ರತಿನಿಧಿಗಳು, ರೈತ ತಜ್ಞರು ಇರಬೇಕೆಂದು ಆಗ್ರಹಿಸಿದರು.
ಪುಟ್ಟಣ್ಣಯ್ಯನವರೇ ಇತ್ತ ನೋಡಿ...
ರೈತ ಹಾಗೂ ರೈತ ಸಂಘಟನೆಗಳ ಬಗ್ಗೆ ಮಾತನಾಡುವ ನೈತಿಕತೆ ಕೆ.ಎಸ್. ಪುಟ್ಟಣ್ಣಯ್ಯ ಅವರಿಗಿಲ್ಲ. ಈಗ ಅವರು ಕಟ್ಟಿಸುತ್ತಿರುವ ಮನೆ ನಗರದಲ್ಲಿದೆಯೋ? ಹಳ್ಳಿಯಲ್ಲಿದೆಯೋ? ಎಂದು ಮೈಸೂರಿನಲ್ಲಿ ಕಟ್ಟಿಸುತ್ತಿರುವ ಮನೆ ಹಾಗೂ ಚಂದ್ರಶೇಖರ್ ಬೆಂಗಳೂರಿನಲ್ಲಿರುವ ರೈತ ಎಂಬ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಹಸಿರು ಟವಲ್ ತೆಗೆಯಲು ಸಿದ್ಧ: ಪ್ರೆಸ್ ಕ್ಲಬ್‌ಗೆ ಬನ್ನಿ, ನಿಮ್ಮ ಪ್ರಶ್ನೆಗಳಿಗೆ ನಾವು ಉತ್ತರ ಕೊಡದೇ ಇದ್ದರೆ ಹಸಿರು ಟವಲ್‌ನ್ನು ತೆಗೆದಿಟ್ಟು ಹೋಗುತ್ತೇನೆ ಎಂದು ಅವರು ಪುಟ್ಟಣ್ಣಯ್ಯರಿಗೆ ಸವಾಲು ಹಾಕಿದ್ದಾರೆ.
ಅಸ್ತಿತ್ವಕ್ಕಾಗಿ 'ಕೈ' ಜೋಡಿಸುವರು: ಮಂಡ್ಯ ರೈತ ಸಮಾವೇಶದಲ್ಲಿ ಅವರು ಕಾಂಗ್ರೆಸ್‌ನೊಂದಿಗೆ ಕೈ ಜೋಡಿಸಿದ್ದಾರೆ. ಈ ಹಿಂದೆ ಅಧಿಕಾರದಲ್ಲಿದ್ದಾಗ ಬಿಜೆಪಿ ನಂತರದ ದಿನಗಳಲ್ಲಿ ಕೆಜೆಪಿ ಪಕ್ಷದ ಬಾವುಟ ಹಿಡಿದುಕೊಂಡು ಹೋಗಿದ್ದರು. ಇಂತಹ ವ್ಯಭಿಚಾರ ಕೆಲಸವನ್ನು ಬಿಡಬೇಕು ಎಂದು ನಿಂದಿಸಿದರು. ಅಸ್ತಿತ್ವ ಉಳಿವಿಗಾಗಿ ರಾಜಕೀಯ ಪಕ್ಷದವರೊಂದಿಗೆ ಸೇರಿಕೊಳ್ಳುವವರು ಹಸಿರು ಟವಲ್ ಬಿಟ್ಟು ರಾಜಕೀಯ ಪಕ್ಷದಡಿಯಲ್ಲಿ ಕಾರ್ಯ ನಿರ್ವಹಿಸಲಿ ಎಂದು ಕುಟುಕಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement