ಕೊಳವೆ ಬಾವಿಗಳೆಂಬ ಮೃತ್ಯುಕೂಪಗಳು
ಮಕ್ಕಳು ನಡೆವ ದಾರಿಯಲ್ಲಿ, ಆಸ್ಪತ್ರೆ ಪಕ್ಕದಲ್ಲಿ, ಶಾಲೆ ಆಸುಪಾಸಿನಲ್ಲಿ...
ಕನ್ನಡಪ್ರಭ ಕಾಳಜಿ
ಮಕ್ಕಳು ನಡೆವ ದಾರಿಯಲ್ಲಿ, ಆಸ್ಪತ್ರೆ ಪಕ್ಕದಲ್ಲಿ, ಶಾಲೆ ಆಸುಪಾಸಿನಲ್ಲಿ, ಎಲ್ಲೆಲ್ಲೂ ಕಾಯುತ್ತಿವೆ ಕೊಳವೆ ಬಾವಿಗಳೆಂಬ ಮೃತ್ಯುಕೂಪಗಳು, ಜಿಲ್ಲಾಡಳಿತಗಳು ಎಚ್ಚೆತ್ತುಗೊಳ್ಳದಿದ್ದರೆ ತಿಂಗಳಿಗೊಂದು ಅಕ್ಷತಾ ಪ್ರಕರಣ ಗ್ಯಾರಂಟಿ, ಈಗ ಎದ್ದು ಜನ ಪ್ರಕರಣ ಮರೆತ ಮೇಲೆ ಅಧಿಕಾರಿಗಳು ಮಲಗಿದರಂತೂ ಆಡುವ ಮಕ್ಕಳ ಪಾಲಿಗೆ ದೇವರೇ ಗತಿ.
ಸಂಕಟ ಬಂದಾಗಷ್ಟೇ ವೆಂಕಟರಮಣ ಅನ್ನೋದು ಶುರುವಾಗಿಬಿಟ್ಟಿದೆ. ಬಿಜಾಪುರದ ಘಟನೆ ಈಗ ಅಧಿಕಾರಿ ವರ್ಗದಲ್ಲಿ ಜಾಗ್ರತೆ ಮೂಡಿಸಿದೆ. ತೆರೆದ ಬೋರ್ವೆಲ್ಗಳ ಮುಚ್ಚುವುದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ಎರಡು ದಿನಕ್ಕಷ್ಟೇ ಸೀಮಿತವಾಗಬಾರದು. ಬೋರ್ವೆಲ್ಗಳ ಮುಚ್ಚಿಸುವ ಕೆಲಸವಾಗಬೇಕು.
ಇಲ್ಲಿ ಬೋರ್ಗಳಿಗಿಲ್ಲ ಬರ
ಇದು ರಾಜ್ಯದಲ್ಲೇ ಅತ್ಯಂತ ಬರಪೀಡಿತ ಜಿಲ್ಲೆ. ಇಲ್ಲಿ ಎಲ್ಲಿ ನೋಡಿದರೂ ಕೊಳವೆ ಬಾವಿಗಳೇ. ಕುಡಿಯುವ ನೀರಿಗೂ ಇವೇ ಆಸರೆ. ಬಿಜಾಪುರ ಘಟನೆಯಾದ ಮೇಲೆ ಅಧಿಕಾರಿಗಳು ಎಚ್ಚೆತ್ತು ಕೊಳವೆ ಬಾವಿ ಮುಚ್ಚಿಸುತ್ತಿದ್ದಾರೆ. ಆದರೆ ಇದು ನಗರ ಭಾಗಕ್ಕೆ ಮಾತ್ರ ಸೀಮಿತ. ಗ್ರಾಮೀಣ ಭಾಗದಲ್ಲಂತೂ ಕೇಳೋರು ಇಲ್ಲವೇ ಇಲ್ಲ. ಹೀಗಾಗಿ ಯಾವಾಗ ಬೇಕಾದರೂ ಇಲ್ಲಿನ ಮೃತ್ಯುಕೂಪಗಳು ಬಲಿ ಕೇಳಬಹುದು. ತಿಪಟೂರು, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ ಶಿರಾ ಮುಂತಾದ ತಾಲೂಕುಗಳಲ್ಲಿ ತೆರೆದ ಕೊಳವೆ ಬಾವಿಗಳು ಹೇರಳವಾಗಿ ಕಾಣಸಿಗುತ್ತಿವೆ. ಈ ಗ್ರಾಮಗಳಲ್ಲಿ ನೀರು ಸಿಗಲಿ ಎಂದು 500 ಅಡಿಗಿಂತಲೂ ಹೆಚ್ಚು ಆಳಕ್ಕೆ ಹೋಗುವುದುಂಟು. ಈ ಬೋರ್ವೆಲ್ಗಳು ಫೇಲ್ ಆದಲ್ಲಿ ಮುಚ್ಚಿಸದೇ ಹಾಗೆ ಬಿಡುವುದು ಜನರ ವಾಡಿಕೆ.
ಬಲಿ ಬೇಕು ಎನ್ನುತ್ತಿವೆ
ಅಥಣಿ ತಾಲೂಕನ್ನು ಹೊರತುಪಡಿಸಿದರೆ ಬೇರೆ ಯಾವುದೇ ತಾಲೂಕಿನಲ್ಲಿ ತೆರೆದ ಕೊಳವೆ ಬಾವಿಗಳು ಕಂಡುಬಂದಿಲ್ಲ. ಅಥಣಿ ತಾಲೂಕಿನಲ್ಲಿ ಶಾಲೆಗಳ ಆವರಣದಲ್ಲೇ ತೆರೆದ ಕೊಳವೆಬಾವಿಗಳಿವೆ. ಇವು ಪಾಲಕರನ್ನು ಬೆಚ್ಚಿಬೀಳಿಸುತ್ತಿವೆ. ಶಾಲಾ ಆವರಣದಲ್ಲಿ ಕೊರೆಯಿಸಲಾದ ಕೊಳವೆಬಾವಿಗಳಿಗೆ ಹ್ಯಾಂಡ್ಪಂಪ್ ಕೂರಿಸದೇ ಹಾಗೆ ಬಿಡಲಾಗಿದೆ. ಹೊಲಗದ್ದೆಗಳಲ್ಲಿ ಸುಮಾರು 50 ತೆರೆದ ಕೊಳವೆಬಾವಿಗಳಿವೆ. ಆದರೆ, ಇವುಗಳಿಗೆ ಮುಚ್ಚಳ ಹಾಕಿ ಯಾವುದೇ ಅನಾಹುತ ಘಟನೆ ನಡೆದಂತೆ ಯಾರೂ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳಿಗೂ ಗೊತ್ತಿದ್ದರೂ ಕಣ್ಮುಚ್ಚಿಕುಳಿತಿದ್ದಾರೆ.
ಬತ್ತಿದ ಬೋರ್ ಮುಚ್ಚಿಸಿಲ್ಲ
ಕೊಳವೆ ಬಾವಿಯೇ ಜಿಲ್ಲೆಯ ನೀರಿನ ಮೂಲ. ಸರ್ಕಾರಿ ಅಂಕಿ-ಅಂಶಗಳ ಪ್ರಕಾರವೇ ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಒಟ್ಟು 4.26 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳಿವೆ. ಅಂತರ್ಜಲ ಕುಸಿದು, ಹಲವು ಕೊಳವೆ ಬಾವಿಗಳು ಬತ್ತಿವೆ. ಲಕ್ಷ್ಮೇಶ್ವರ ಮತ್ತು ಗಜೇಂದ್ರಗಡ ಆಸುಪಾಸು ಕೆಂಪು ಮಿಶ್ರಿತ ಮಣ್ಣಿನ ಹೊಲಗಳಲ್ಲಿ ಕೊರೆದ ಕೊಳವೆ ಬಾವಿಗಳು ಬತ್ತಿದ್ದು, ಹಲವು ತೆರೆದ ಸ್ಥಿತಿಯಲ್ಲಿ ಇಂದಿಗೂ ಗೋಚರಿಸುತ್ತಿವೆ. ಲಕ್ಷ್ಮೇಶ್ವರ ಸಮೀಪದ ಹರದಗಟ್ಟಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊರೆಸಿದ ಕೊಳವೆ ಬಾವಿ ಬತ್ತಿದ್ದು, ಅದನ್ನು ಮುಚ್ಚದೆ ಬಲಿಗಾಗಿ ಬಾಯ್ತೆರೆದು ನಿಂತಿದೆ. ಕೊಳವೆ ಬಾವಿ ಮಾಲೀಕರೂ ಬತ್ತಿದ ಕೊಳವೆ ಬಾವಿಗಳನ್ನು ತಕ್ಷಣ ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎನ್ನುವುದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರ ಎಚ್ಚರಿಕೆ.
ಬಲಿಗೆ ಕಾದಿವೆ ತೆರೆದ ಕೊಳವೆ ಬಾವಿ
ಜಿಲ್ಲೆಯಾದ್ಯಂತ ಬಲಿ ಪಡೆಯಲೆಂದೇ ಅಲ್ಲಲ್ಲಿ ಕೊಳವೆ ಬಾವಿಗಳು ಬಾಯಿ ತೆರೆದು ಕುಳಿತಿವೆ. ಸರ್ಕಾರವೇ ಕೊರೆಸಿದ ಬೋರ್ವೆಲ್ಗಳೇ ಬಾಯ್ತೆರೆದು ಕುಳಿತಿವೆ ಎಂದರೆ ಇಲ್ಲಿನ ಆಡಳಿತದ ಪರಿಸ್ಥಿತಿ ಹೇಗಿರಬೇಡ? ಕೊಳವೆಬಾವಿಗೆ ಮಕ್ಕಳು ಬಿದ್ದು ಸುದ್ದಿಯಾದಾಗ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿ ಮೈಮರೆಯುತ್ತಿದೆ. ಅನೇಕ ಕೊಳವೆ ಬಾವಿಗಳನ್ನು ಇಂದಿಗೂ ಮುಚ್ಚಿಸಿಲ್ಲ. ಜಿಲ್ಲಾ ಕೇಂದ್ರದಿಂದ 8 ಕಿ.ಮೀ. ಅಂತರದಲ್ಲಿರುವ ಚಿಕ್ಕಸಿಂದೋಗಿ, 12 ಕಿ.ಮೀ. ದೂರದ ಮೈನಳ್ಳಿ, ಬಿಸರಳ್ಳಿ, ಬಿಕನಹಳ್ಳಿ ಮುಂತಾದ ಕಡೆ ಅಪಾಯಕಾರಿ ರೀತಿಯಲ್ಲಿ ಅನೇಕ ಕೊಳವೆ ಬಾವಿಗಳು ತೆರೆದೇ ಇವೆ. ಜಿಲ್ಲಾಡಳಿತ, ಜಿಪಂ ಸುತ್ತೋಲೆ ಹೊರಡಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸುತ್ತದೆ. ಇದರ ಪ್ರತಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರೆ ತಮ್ಮ ಕೆಲಸವಾಯಿತೆಂದು ಭಾವಿಸುತ್ತವೆ. ತೆರೆದ ಕೊಳವೆ ಬಾವಿ ಮುಚ್ಚಿಸುವಂತೆ ಸೂಚಿಸುವ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ.
ಯಮಸ್ವರೂಪಿ ಕೊಳವೆ
ಬಳ್ಳಾರಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳಿದ್ದು, ಅದರಲ್ಲಿ 2556 ಕಾರ್ಯ ನಿರ್ವಹಿಸುತ್ತಿವೆ. ಉಳಿದವು ನಿರ್ವಹಣೆ ಕೊರತೆಯಿಂದಾಗಿ ನಿರುಪಯುಕ್ತವಾಗಿವೆ. ಬಹುತೇಕ ಮುಚ್ಚಿದ್ದರೂ ಅಲ್ಲೊಂದು, ಇಲ್ಲೊಂದು ತೆರೆದ ಕೊಳವೆಬಾವಿ ಮೃತ್ಯುವಿಗೆ ಆಹ್ವಾನಿಸುತ್ತಿವೆ. ಹೂವಿನಹಡಗಲಿ ತಾಲೂಕಿನ ಮಾಗಳ ಗ್ರಾಮದ ಹೊನ್ನಮ್ಮ ದೇವಿ ದೇವಸ್ಥಾನದ ಹತ್ತಿರದಲ್ಲೇ 10-12 ವರ್ಷಗಳ ಹಿಂದೆ ಕೊಳವೆಬಾವಿ ಕೊರೆಯಲಾಗಿತ್ತು. ಆದರೆ ಇದು ಇನ್ನೂ ಬಾಯ್ತೆರೆಕೊಂಡೇ ಇದೆ. ನಿರ್ವಹಣೆ ಕೊರತೆಯಿಂದ ಕೊಳವೆ ಬಾವಿಗಳು ನಿರುಪಯುಕ್ತವಾಗಿವೆ. ಇನ್ನು ತೋಟಗಳಲ್ಲಿರುವ ನಿರುಪಯುಕ್ತ ಕೊಳವೆಬಾವಿಗಳ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಾಗಿದೆ.
ರಸ್ತೆ ಪಕ್ಕದಲ್ಲೇ ಕೊಳವೆ ಬಾವಿ
ಹಾವೇರಿ / ಬ್ಯಾಡಗಿ: ನಿರುಪಯೋಗಿ ತೆರೆದ ಕೊಳವೆ ಬಾವಿಯಿಂದ ಆಗುತ್ತಿರುವ ಅನಾಹುತಗಳಿಂದ ಹಾವೇರಿ ನಗರಸಭೆ ಎಚ್ಚೆತ್ತುಕೊಂಡಿಲ್ಲ. ರೇಲ್ವೆ ಮೇಲ್ಸೇತುವೆ ಕೆಳಭಾಗದಲ್ಲಿ ರಸ್ತೆ ಪಕ್ಕದಲ್ಲೇ ಐದಾರು ವರ್ಷಗಳಿಂದ ಕೊಳವೆ ಬಾವಿ ಬಾಯ್ತೆರೆದು ನಿಂತಿದೆ. ಅಕ್ಕಪಕ್ಕದಲ್ಲಿ ಹತ್ತಾರು ಮನೆಗಳಿದ್ದು, ಪುಟ್ಟ ಮಕ್ಕಳಿದ್ದಾರೆ. ಆಟವಾಡಲು ಹೋಗಿ ಅಪಾಯವಾದರೆ ಏನು ಗತಿ ಎಂಬುದು ನಿವಾಸಿಗಳ ಭಯ. ಬ್ಯಾಡಗಿ ಪಟ್ಟಣದ ಚಾವಡಿ ರಸ್ತೆಯಲ್ಲಿರುವ ಕೊಳವೆಬಾವಿ ಮುಚ್ಚಿಸಿಲ್ಲ. ಪಕ್ಕದಲ್ಲೇ ಬಾಲಕಿಯರ ಸರ್ಕಾರಿ ಶಾಲೆ ಇದೆ. ಮಕ್ಕಳು ಆಟವಾಡುತ್ತಾ ಕೊಳವೆ ಬಾವಿಗೆ ಬಿದ್ದರೆ ಏನು ಗತಿ? ಎಂದು ಮಹ್ಮದಲಿ ಜಿನ್ನಾ ಹಲಗೇರಿ ಹಾಗೂ ಪಾಂಡು ಸುತಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿಗೆ ಹೇಳಿ ಈ ಕೊಳವೆಬಾವಿ ಮುಚ್ಚಿಸುವುದಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಚ್. ನಟರಾಜ ಹೇಳಿದ್ದಾರೆ.
ಇಲ್ಲಿ ಇನ್ನೊಂಥರಾ ಸಮಸ್ಯೆ
ಈ ಜಿಲ್ಲೆಯ ದುರದೃಷ್ಟ ಎಂದರೆ ಕೊಳವೆ ಬಾವಿಗಳ ಬದಲಿಗೆ ಪ್ರತಿವರ್ಷ ಮಕ್ಕಳನ್ನು ಬಲಿ ತೆಗೆದುಕೊಳ್ಳುವ ಕೊಜೆ (ಆವೆ ಮಣ್ಣು ತೆಗೆದು ಉಂಟಾದ) ಹೊಂಡಗಳಿವೆ. ಈ ಹೊಂಡಗಳಲ್ಲಾಗುವ ಸಾವನ್ನು ಜಿಲ್ಲಾಡಳಿತ (ಮೃತಪಟ್ಟ ಮಕ್ಕಳ ಕುಟುಂಬಕ್ಕೆ ಸರ್ಕಾರದ ಪರಿಹಾರ ಒದಗಿಸುವುದಕ್ಕಾಗಿ) ಪ್ರಕೃತಿ ವಿಕೋಪ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಫೈಲುಗಳಲ್ಲಿ ಸೇರಿಸಿ ಸುಮ್ಮನಾಗುತ್ತಿದೆ. ಆದರೆ ಇದು ಪ್ರಕೃತಿ ವಿಕೋಪ ಅಲ್ಲ, ಕೊಳವೆ ಬಾವಿಗಳಂತೆ ಈ ಹೊಂಡಗಳು ಕೂಡ ಮಾನವ ನಿರ್ಮಿತ ವಿಕೋಪಗಳೇ ಆಗಿವೆ. ಜಿಲ್ಲೆಯಲ್ಲಿ 2012ರಲ್ಲಿ 15 ಮತ್ತು 2013ರಲ್ಲಿ 11 ಮಂದಿ ಶಾಲಾ ಮಕ್ಕಳು ಇಂತಹ ಹೊಂಡಗಳಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ.
ಡೆಡ್ಲಿ ಬೋರ್ವೆಲ್
ಅಪಾಯಕಾರಿ ಹಾಗೂ ಬಲಿಗಾಗಿ ಕಾದಿರುವ ತೆರೆದ ಕೊಳವೆ ಬಾವಿಗಳು ಧಾರವಾಡ ಜಿಲ್ಲೆಯಲ್ಲಿ ಸಾಕಷ್ಟಿದ್ದರೂ ಕೆಲವಷ್ಟೇ ಈಗ ಬೆಳಕಿಗೆ ಬಂದಿವೆ. ಜಿಲ್ಲೆಯ ಐದು ತಾಲೂಕುಗಳ ಪೈಕಿ ಧಾರವಾಡ ನಗರ, ಕಲಘಟಗಿ ಹಾಗೂ ಅಳ್ನಾವರ ಪಟ್ಟಣದಲ್ಲಿ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಆಂಜನೇಯ ನಗರ ಬಡಾವಣೆಯಲ್ಲಿ ಜಲಮಂಡಳಿ ವತಿಯಿಂದ 10 ವರ್ಷಗಳ ಹಿಂದೆ ಕೊರೆಸಿದ್ದ ಮೂರು ಕೊಳವೆ ಬಾವಿಗಳಲ್ಲಿ ನೀರು ಬಾರದೆ, ಹಾಗೇ ಬಿಡಲಾಗಿದೆ. ಅವುಗಳ ಸುತ್ತ ಅಂಗನವಾಡಿ ಹಾಗೂ ಪ್ರೌಢಶಾಲೆಗಳಿವೆ. ಈ ಪ್ರದೇಶದಲ್ಲಿ ಹೆಚ್ಚು ಮಕ್ಕಳಿದ್ದು, ಅವರೆಲ್ಲ ಈ ಕೊಳವೆ ಬಾವಿಗಳ ಸುತ್ತ ಆಟವಾಡುತ್ತಾರೆ. ಒಂದು ಬಾವಿಯಂತೂ ಜಲಮಂಡಳಿಯ ಪಂಪ್ ಬಳಿಯೇ ಇದ್ದು, ಅನಾಹುತವಾದರೆ ಯಾರಿಗೂ ಗೊತ್ತಾಗುವುದೇ ಇಲ್ಲ ಎಂಬುದು ಸ್ಥಳೀಯರ ಆತಂಕ.
ಮುಚ್ಚದಿದ್ದರೆ ಅಪಾಯ
ಮೈಸೂರು ಜಿಲ್ಲೆಯ ಮೂರು ಕಡೆ ತೆರೆದ ಕೊಳವೆ ಬಾವಿಗಳು ಕಂಡು ಬಂದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಹುಣಸೂರು ತಾಲೂಕು ಬೀಜಗನಹಳ್ಳಿಯಲ್ಲಿ ಕೊರೆಯಿಸಿದ್ದ ಕೊಳವೆ ಬಾವಿಗೆ ತಾಲೂಕು ಆಡಳಿತ ಪಂಪ್ ಹಾಕಿಲ್ಲ, ಮುಚ್ಚಳವನ್ನೂ ಹಾಕಿಲ್ಲ. ಇದು ರಸ್ತೆಯ ಮಧ್ಯೆ ಇದೆ. ಮುಚ್ಚಳ ಇಲ್ಲದಿರುವುದರಿಂದ ಯಾರಾದರೂ ಬಿದ್ದರೆ ಮುಗಿಯಿತು. ಆಗ ತಾಲೂಕು ಆಡಳಿತ ಎಚ್ತೆತ್ತುಕೊಳ್ಳಬಹುದು. ಟಿ. ನರಸೀಪುರ ತಾಲೂಕು ಹಳೆ ತಿರಮಕೂಡಲು ಬಳಿ ಕುಂಭಮೇಳ ಅಂಗವಾಗಿ ಕೊರೆಯಿಸಿದ್ದ ಕೊಲವೆ ಬಾವಿಗೆ ಮುಚ್ಚಳ ಇಲ್ಲ. ಅದನ್ನು ಮುಚ್ಚುವ ಬಗ್ಗೆಯೂ ಜಿಲ್ಲಾಡಳಿತ ತಲೆಕೆಡಿಸಿಕೊಂಡಿಲ್ಲ. ಎಚ್.ಡಿ. ಕೋಟೆ ತಾಲೂಕು ಕಾರೇಹುಂಡಿ ಬಸವೇಶ್ವರ ದೇವಸ್ಥಾನದ ಬಳಿ ಕೊಳವೆ ಬಾವಿ ಕೊರೆಯಲಾಗಿದ್ದು, ಕೇಸಿಂಗ್ ಪೈಪ್ ಹಾಕಿಲ್ಲ. ಹಾಗೇ ಕಲ್ಲಿಡಲಾಗಿದೆ. ಕಲ್ಲು ಪಕ್ಕಕ್ಕೆ ಸರಿದರೆ ಅಪಾಯ ಖಚಿತ. ಜಿಲ್ಲೆಯಲ್ಲಿ ಈವರೆಗೆ 13,774 ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ. ಇವುಗಳ ಪೈಕಿ 1,116 ವಿಫಲವಾಗಿವೆ. ವಿಫಲವಾಗಿರುವ ಎಲ್ಲಾ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆ ಎನ್ನುತ್ತಾರೆ ಜಿಪಂ ಸಿಇಒ ಪಿ.ಎ. ಗೋಪಾಲ್.
ಎಲ್ಲೆಲ್ಲೂ ಮೃತ್ಯುಕೂಪ
ಈ ಜಿಲ್ಲೆಯಲ್ಲಿ ಎಲ್ಲೆಲ್ಲೂ ಮೃತ್ಯುಕೂಪಗಳಿವೆ, ಅರ್ಥಾತ್ ತೆರೆದ ಕೊಳವೆ ಬಾವಿಗಳಿವೆ. ಬಹುತೇಕ ಜಮೀನುಗಳಲ್ಲಿ ಕೊಳವೆ ಬಾವಿಗಳನ್ನು ಮುಚ್ಚೇ ಇಲ್ಲ. ಯಳಂದೂರು ಜೂನಿಯರ್ ಕಾಲೇಜು, ಅಂಬಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲೂ ಬೋರ್ವೆಲ್ಗೆ ಮುಚ್ಚಳ ಹಾಕಿಲ್ಲ. ಜಿಲ್ಲಾಡಳಿತದ ಪ್ರಕಾರ ಜಿಲ್ಲೆಯಲ್ಲಿ 1265 ನಿಷ್ಪಯೋಜಕ ಕೊಳವೆ ಬಾವಿಗಳಿವೆ ಎಂಬ ಮಾಹಿತಿ ಇದೆ. ನೀರು ಬಾರದ ಕೊಳವೆ ಬಾವಿಗಳ ಬಗ್ಗೆ ಹಿಂದಿನಿಂದಲೂ ಮುಂಜಾಗ್ರತಾ ಕ್ರಮ ಅಳವಡಿಸುತ್ತಾ ಬಂದಿದ್ದೇವೆ. ಪ್ರತಿ ನೀರು ಬಾರದ ಕೊಳವೆ ಬಾವಿಯಿಂದ ಪೈಪ್ ಹೊರ ತೆಗೆದು ನಂತರ ಮಣ್ಣು ಮಚ್ಚಲಾಗುತ್ತದೆ ಎನ್ನುತ್ತಾರೆ.
ಅಪಾಯಕ್ಕೆ ಆಹ್ವಾನ
ಕೊಳವೆ ಬಾವಿ ಸದ್ದು ರಾಜ್ಯದಲ್ಲಿ ಕೇಳಿಬರುತ್ತಿದ್ದರೂ ಇಲ್ಲಿನ ಆಡಳಿತಕ್ಕೆ ಮಾತ್ರ ಕಿವಿ ಕೇಳಿಸುತ್ತಿಲ್ಲ. ಏಕೆಂದರೆ ಕುಶಾಲನಗರದ ನಿಜಾಮುದ್ದಿನ್ ಬಡಾವಣೆಯಲ್ಲಿ ತೆರೆದ ಕೊಳವೆ ಬಾವಿ ಬಾಯಿ ತೆರೆದು ಅನಾಹುತಕ್ಕೆ ಆಹ್ವಾನ ನೀಡುತ್ತಿದೆ. ಈ ಕೊಳವೆ ಬಾವಿ ಯಾವುದೇ ಕ್ಷಣದಲ್ಲಿಯೂ ಜನರ ಸಾವಿಗೆ ಕಾರಣವಾಗುವಂತಿದೆ. ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹೊಲಗಳಲ್ಲಿ ಕೊಳವೆ ಬಾವಿಗಳು
ಅಡಿಕೆ, ತೆಂಗಿನ ತೋಟಗಳು ಹಾಗೂ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ರೈತರು ಕೊಳವೆ ಬಾವಿಗಳನ್ನು ಕೊರೆಸುತ್ತಿದ್ದಾರೆ. ಆ ಬಾವಿಗಳಲ್ಲಿ ನೀರು ಬಂದರೆ ಓಕೆ. ಇಲ್ಲದೆ ಹೋದರೆ, ಅವುಗಳನ್ನು ಮುಚ್ಚುವ ಕೆಲಸ ರೈತರು ಮಾಡುತ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಮೋಟಾರ್ ಅಳವಡಿಸಲು ಹಾಗೆಯೇ ಬಿಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯಲ್ಲಿ ಇಂಥ ಅಪಾಯಕಾರಿ ಬೋರ್ವೆಲ್ಗಳಿವೆ. ತಮ್ಮ ಹೊಲ ಹಾಗೂ ತೋಟದೊಳಗೆ ಸಾರ್ವಜನಿಕರು ಓಡಾಡುವುದು ಕಡಿಮೆ ಈ ಕಾರಣದಿಂದಲೇ ಉದಾಶೀನತೆ ತೋರಿದಂತೆ ಕಂಡು ಬರುತ್ತದೆ. ಆದರೆ, ಕೂಲಿ ಕಾರ್ಮಿಕರು, ಜಾನುವಾರು ಈ ಪ್ರದೇಶದಲ್ಲಿ ಓಡಾಡುವುದರಿಂದ ಅವಘಡ ಸಂಭವಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತ್ತಿಲ್ಲ.
ಇಂಡಿಯಲ್ಲಿ ದಂಡಿ ಕೊಳವೆ ಬಾವಿ
ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಾಲ್ಕು ತೆರೆದ ಕೊಳವೆ ಬಾವಿಗಳು ಬಲಿಗಾಗಿ ಬಾಯ್ದೆರೆದುಕೊಂಡಿವೆ. ಕಳೆದ ವರ್ಷದ ಬೇಸಿಗೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ನಿವಾರಣೆಗೆ ಇಂಡಿ ಪುರಸಭೆ ಬರ ಪರಿಹಾರ ಕಾಮಗಾರಿ ಯೋಜನೆ ಅಡಿಯಲ್ಲಿ ಹಲವಾರು ಬಡಾವಣೆಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಿತ್ತು. ಅವುಗಳಲ್ಲಿ ಬಹಳಷ್ಟು ಕೊಳವೆ ಬಾವಿಗಳು ವಿಫಲಗೊಂಡಿವೆ. ಅವುಗಳನ್ನು ಮುಚ್ಚದೆ ಹಾಗೆ ಬಿಟ್ಟಿದ್ದಾರೆ. ಈಗ ಅವು ಬಲಿಗಾಗಿ ಪೈಪೋಟಿ ನಡೆಸಿವೆ. 2009ರಲ್ಲಿ ಇಂಡಿ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 6 ವರ್ಷದ ಬಾಲಕಿ ಕಾಂಚನಾ ಕೊಳವೆ ಬಾವಿಗೆ ಬಿದ್ದಿದ್ದಳು. ಸಾವು ಮನೆ ಬಾಗಿಲಿಗೆ ಬಂದು ಕದ ತಟ್ಟಿದರೂ ಪುರಸಭೆ ವಿಫಲಗೊಂಡ ಕೊಳವೆ ಬಾವಿಗಳನ್ನು ಮುಚ್ಚದೆ ಹಾಗೇ ಬಿಟ್ಟಿರುವುದು ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ.
ಕೆಟ್ಟರೂ ಬುದ್ಧಿ ಬಂದಿಲ್ಲ
2005ರಲ್ಲಿ ರಿಯೂರು ತಾಲೂಕು ಐಮಂಗಲ ಬಳಿಯ ದಾಸಯ್ಯನಕಟ್ಟೆ ಎಂಬ ಗ್ರಾಮದ ಕೊಳವೆ ಬಾವಿಯೊಂದಕ್ಕೆ ರವಿಕುಮಾರ್ ಎಂಬ 6 ವರ್ಷದ ಬಾಲಕ ಬಿದ್ದಿದ್ದ. ಬದುಕಿಸುವ ಪ್ರಯತ್ನ ನಡೆದಿತ್ತಾದರೂ ಬಾಲಕ ಉಳಿಯಲಿಲ್ಲ. ಆದರೂ ಈ ಜಿಲ್ಲೆಯ ಅಧಿಕಾರಿಗಳಿಗೆ ಬುದ್ದಿ ಬಂದಿಲ್ಲ. ವಿಚಿತ್ರ ಎಂದರೆ ಎಲ್ಲೆಲ್ಲಿ ಅಪಾಯಕಾರಿ ಬೋರ್ವೆಲ್ಗಳಿವೆ ಎಂಬ ಮಾಹಿತಿಯೂ ಇಲ್ಲಿನ ಯಾವ ಇಲಾಖೆಗೂ ಇಲ್ಲ.
ಬಯಲುಸೀಮೆಯಲ್ಲಿ ಬೋರ್ವೆಲ್
ಬಯಲುಸೀಮೆ ತಾಲೂಕುಗಳನ್ನು ಹೊರತುಪಡಿಸಿದರೆ ಉಳಿದೆಡೆ ಬೋರ್ವೆಲ್ಗಳು ಕಡಿಮೆ. ಹೀಗಾಗಿ ಕೊಳವೆ ಬಾವಿಗಳ ಸಂಖ್ಯೆ ಶಿವಮೊಗ್ಗ, ಭದ್ರಾವತಿ ಹಾಗೂ ಶಿಕಾರಿಪುರ ತಾಲೂಕಿನಲ್ಲಿಯೇ ಹೆಚ್ಚು. 'ಕನ್ನಡಪ್ರಭ'ವು ನಗರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಯಡವಾಲ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದಾಗ ಅಪಾಯಕಾರಿಯಾಗಿ ತೆರೆದಿದ್ದ ಕೊಳವೆ ಬಾವಿಗಳು ಕಂಡುಬಂದವು. ಈ ತಾಲೂಕಿನ ದೇವಬಾಳು, ಹಿಟ್ಟೂರು, ಯಡವಾಲ ಪ್ರದೇಶಕ್ಕೆ ಭೇಟಿ ನೀಡಿದಾಗ ಶುಂಠಿ ಬೆಳೆಯಲು ಭೂಮಿ ಗುತ್ತಿಗೆ ಪಡೆದವರು ಅಕ್ಕಪಕ್ಕದಲ್ಲಿಯೇ ಹತ್ತಾರು ಕೊಳವೆಬಾವಿಗಳನ್ನು ಕೊರೆಸಿರುವುದು ಕಂಡುಬಂತು. ಇವುಗಳಲ್ಲಿ ಬಹುತೇಕ ತೆರೆದ ಕೊಳವೆಬಾವಿಗಳು ರಸ್ತೆ ಪಕ್ಕದಲ್ಲಿಯೇ ಇವೆ. ಒಮ್ಮೆ ಕೊರೆದ ನಂತರ ನೀರು ಬರದಿದ್ದರೆ ಪಕ್ಕದಲ್ಲಿಯೇ ಮತ್ತೊಮ್ಮೆ ಕೊರೆದಿದ್ದಾರೆ. ಯಡವಾಲ-ಹಿಟ್ಟೂರು ಗ್ರಾಮಗಳ ನಡುವೆ ಈ ರೀತಿ ಹತ್ತಾರು ಕೊಳವೆ ಬಾವಿಗಳಿದ್ದವು. ಕೆಲವು ಕೊಳವೆ ಬಾವಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.
ಎಲ್ಲೆಂದರಲ್ಲಿ ಯಮಪಾಶ
ಬಾಯಿ ತೆರೆದುಕೊಂಡು ಕುಳಿತಿರುವ, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೊಳವೆಬಾವಿಗಳಿಗೆ ಗುಲ್ಬರ್ಗದಲ್ಲಿ ಲೆಕ್ಕ ಇಟ್ಟವರಾರು. ಊರಿದ್ದಲ್ಲಿ ಹತ್ತಿಪ್ಪತ್ತು ಬೋರವೆಲ್ ಭೋಕಾ(ರಂಧ್ರ) ಅದಾವ್ರಿ, ಅಲ್ಯವ, ಇಲ್ಯವ ಅಂತ ಹೇಳಕ್ಕಾಗಲ್ಲ. ಯಾರಾದ್ರೂ ಬಿದ್ರಾಗ್ಲೇ ಗೊತ್ತಾಗಬೇಕಷ್ಟೆ... ಎಂದು ಹಳ್ಳಿಮಂದಿ ತಮ್ಮ ಸುತ್ತಮುತ್ತ ಬಾಯಿ ತೆರೆದುಕೊಂಡು ಬಲಿಗಾಗಿ ಕಾದಿರುವ ಬೊರವೆಲ್ ರಂಧ್ರಗಳ ಬಗ್ಗೆ ಹಿಡಿಶಾಪ ಹಾಕುವಂತಗಿದೆ. ಜಿಪಂ ಎಂಜಿನಿಯರಿಂಗ್ ವಿಭಾಗದ ಮೂಲಗಳ ಪ್ರಕಾರ ಪ್ರಸಕ್ತ ವರ್ಷ ಕುಡಿಯುವ ನೀರು ಪೂರೈಕೆಗೆಂದು 4,232 ಕೊಳವೆಬಾವಿಗಳನ್ನು ಸರ್ಕಾರದ ವಿವಿಧ ಯೋಜನೆಗಳಡಿ ಕೊರೆಯಲಾಗಿದೆ. ಆ ಪೈಕಿ ಶೇ.30ರಷ್ಟು ನೀರಿಲ್ಲದೆ ವಿಫಲವಾಗಿವೆ. ಇವೆಲ್ಲವೂ ಬೇಕಾಬಿಟ್ಟಿ ನಿರ್ವಹಣೆಯಿಂದಾಗಿ ಮೃತ್ಯುಕೂಪವಾಗುತ್ತಿವೆ. ಸರ್ಕಾರಿ ಲೆಕ್ಕವೇ ಇಷ್ಟಿರುವಾಗ ಇನ್ನೂ ಖಾಸಗಿ ವಲಯದಲ್ಲಿ ಕೊರೆಯುವ ಕೊಳವೆಗಳದ್ದು ದೇವರಲೆಕ್ಕ.
ಮೃತ್ಯುವಿಗೆ ನಿಗೂಢ ಆಹ್ವಾನ
ಮಹಾನಗರದ ನಡುವೆ ಇರುವ ಜೈಲ್ ಕ್ವಾಟರ್ಸ್ನಲ್ಲಿ ಅರೆಬರೆ ಮುಚ್ಚಿದ ಬಾವಿ ಪ್ರಾಣ ನುಂಗಲು ಇದಿರು ನೋಡುತ್ತಿದೆ. ಜೈಲು ಸಿಬ್ಬಂದಿ ಮಕ್ಕಳು ಈ ಪ್ರದೇಶದಲ್ಲಿ ಆಟವಾಡುತ್ತಿರುತ್ತಾರೆ. ಬ್ರಿಟಿಷರ ಕಾಲದ ನೀರಿನ ತುಕ್ಕು ಹಿಡಿದ ಟ್ಯಾಂಕ್, ಪಕ್ಕದಲ್ಲಿಯೇ ಮುಚ್ಚಿದ ಬಾವಿ. ಪಾಳುಬಿದ್ದ ಮನೆಯ ಚಾವಡಿಯಂತಿದೆ, ಅದನ್ನು ಎಷ್ಟೋ ವರ್ಷಗಳ ಹಿಂದೆ ಮರದ ಸೋಂಟೆಗಳನ್ನು ಹಾಕಿ ಮುಚ್ಚಲಾಗಿದೆ. ಅಪ್ಪಿ ತಪ್ಪಿ ಮಕ್ಕಳು ಕುತೂಹಲದಿಂದ ಕಾಲಿಟ್ಟರೆ, ನೆಲ ಬಾವಿಯೊಳಗೆ ಸಮಾಧಿ ಖಚಿತ! ಇನ್ನು ಮೂಲ್ಕಿ ಸರ್ಕಾರಿ ಆಸ್ಪತ್ರೆ ಬಳಿ ಮುಖ್ಯ ರಸ್ತೆಯಿಂದ ಶವಗಾರದ ಕಡೆಗೆ ಹೋಗುವ ರಸ್ತೆಯಲ್ಲಿ ತೆರೆದ ಕೊಳವೆ ಬಾವಿಯೊಂದು ಮೃತ್ಯುವಿಗೆ ಆಹ್ವಾನ ನೀಡುತ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದಾಗ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಎಚ್ಚೆತ್ತು ತೆರೆದ ಕೊಳವೆ ಬಾವಿಯ ಮೇಲೆ ತಾತ್ಕಾಲಿಕವಾಗಿ ಕಲ್ಲನ್ನು ಇಟ್ಟಿದ್ದಾರೆ.
465 ಬಾವಿಗೆ ಮುಚ್ಚಳ
ಜಿಲ್ಲೆಯಲ್ಲಿ ಬಹುತೇಕ ಕಡೆ ಹೊಲ-ಗದ್ದೆಗಳಲ್ಲಿ ವಿಫಲವಾಗಿರುವ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಿಲ್ಲ. ಕೆಲವು ಕಡೆ ಕಲ್ಲು ಚಪ್ಪಡಿಗಳನ್ನು ತಾತ್ಕಾವಿಕವಾಗಿ ಮುಚ್ಚಿದ್ದರೆ, ಇನ್ನು ಕೆಲವು ಕಡೆ ಮಣ್ಣು ಮುಚ್ಚಲಾಗಿದೆ. ನಗರಸಭೆ, ಪುರಸಭೆ ವ್ಯಾಪ್ತಿಯಲ್ಲೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚಿಲ್ಲ. ಪ್ರಸಕ್ತ ಸಾಲಿನಲ್ಲಿ 1506 ಹೊಸ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ವಿಫಲವಾಗಿರುವ 465 ಕೊಳವೆ ಬಾವಿಗಳನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚಿಸಲಾಗಿದೆ. ಇನ್ನೂ ಕೆಲವ ಬೋರ್ವೆಲ್ಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ.
ಬಾಯ್ ತೆರೆದಿವೆ ಕೊಳವೆಗಳು
ಬಸವಕಲ್ಯಾಣದ ಗೋಲ್ಚೌಡಿ ಚೌಕ್ನಿಂದ ಶಹಾಪೂರ ಗಲ್ಲಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ನಗರಸಭೆಯಿಂದ ಅಳವಡಿಸಿರುವ ಕೊಳವೆ ಬಾವಿ ಬಾಯಿ ತೆರೆದುಕೊಂಡಿದೆ. ಔರಾದ್ ತಾಲೂಕಿನ ಕಮಲನಗರ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿನ ಕೊಳವೆ ಬಾವಿ ಹಾಗೂ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಎಸ್ಸಿಎಸ್ಟಿ ಬಾಲಕರ ವಸತಿ ನಿಲಯದಲ್ಲಿನ ಕೊಳವೆ ಬಾವಿಗಳು ಕೂಡ ಯಮ ದರ್ಶನಕ್ಕೆ ಆಹ್ವಾನ ನೀಡುವಂತಿವೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಮಕ್ಕಳಿಗೆ ಅಪಾಯದ ಗಂಟೆಯಾಗಿದ್ದರೆ ಬಾಲಕರ ವಸತಿ ನಿಲಯದಲ್ಲಿನ ಕೊಳವೆ ಬಾವಿಯಲ್ಲಿ ನೀರಿದ್ದರೂ ಮೋಟಾರ್ ರಿಪೇರಿ ನೆಪದಲ್ಲಿ ಬಾಯಿ ತೆರೆದಿಡಲಾಗಿದೆ. ಔರಾದ್ ಪಟ್ಟಣದ ಹೊರ ವಲಯದಲ್ಲಿರುವ ಅರುಣೊದಯ ವಿದ್ಯಾ ಸಂಸ್ಥೆಯ ಮಹಾದ್ವಾರದ ಬಳಿ ಎರಡು ಯಮ ಸ್ವರೂಪಿ ತೆರೆದ ಕೊಳವೆ ಬಾವಿಗಳಿದ್ದರೆ ತಾಲೂಕಿನಾದ್ಯಾಂತ ಗ್ರಾಮಗಳಲ್ಲಿ ಹಾಗೂ ಹೊಲ ಗದ್ದೆಗಳಲ್ಲಿ ಕೆಲ ಕೊರೆದ ಬಾವಿಗಳು ಜವರಾಯನ ಸ್ವರೂಪದಲ್ಲಿ ಜೀವ ಬಲಿಗಾಗಿ ಕಾಯುತ್ತಾ ಕುಳಿತಂತಿವೆ.
ಜಿಲ್ಲಾಡಳಿತಕ್ಕೆ ಕೊಳವೆ ಸಂಖ್ಯೆ ಗೊತ್ತಿಲ್ಲ
ರಾಯಚೂರು ಜಿಲ್ಲೆಯಲ್ಲಿ ಎಷ್ಟು ಕೊಳವೆಬಾವಿಗಳು ನೀರು ಬಾರದೇ ಹಾಳು ಬಿದ್ದಿವೆ ಎಂಬುದರ ಬಗ್ಗೆ ಜಿಲ್ಲಾಡಳಿತದ ಬಳಿ ಯಾವುದೇ ಅಂಕಿ ಸಂಖ್ಯೆಯಿಲ್ಲ. ಹಿಂದೊಮ್ಮೆ ಮಾನವಿ ತಾಲೂಕಿನ ನೀರಮಾನವಿಯಲ್ಲಿ ಕೊಳವೆಬಾವಿಗೆ ಸಂದೀಪ್ ಎಂಬ ಬಾಲಕ ಬಿದ್ದು ಮೃತನಾದ ನಂತರ ಎಚ್ಚೆತ್ತು ಅಲ್ಲಿಲ್ಲಿ ಕೊಳವೆ ಬಾವಿ ಮುಚ್ಚುವ ಕಾರ್ಯ ಮಾಡಿದ್ದ ಆಡಳಿತ ಆನಂತರ ಅತ್ತ ಗಮನ ನೀಡಿಲ್ಲ. ಬಿಜಾಪುರದ ಘಟನೆ ನಂತರ ಈಗ ಜಿಲ್ಲಾಡಳಿತ ಮತ್ತೆ ಎಚ್ಚೆತ್ತಿದೆ. ಮಾನವಿ ತಾಲೂಕಿನ ನೀರಮಾನವಿಯಿಂದ ಮರಾಠಾ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಕೊಳವೆಬಾವಿ ಕೊರೆದಿದ್ದು ನೀರು ಬಾರದ್ದಕ್ಕೆ ಮುಚ್ಚಿಲ್ಲ.
ಬಾಲಕ ಸಂದೀಪ್ನ ನೆನಪು
ಮಾನವಿ ತಾಲೂಕಿನ ನೀರಮಾನವಿ ಗ್ರಾಮದಲ್ಲಿ 2007ರಲ್ಲಿ ತೆರೆದ ಕೊಳವೆಬಾವಿಗೆ ಬಿದ್ದು ಬಾಲಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ನಡೆದಿತ್ತು. ನೀರಮಾನವಿ ಗ್ರಾಮದ ಹೊಲವೊಂದರಲ್ಲಿ 2007ರ ಏ.24ರ ಮಧ್ಯಾಹ್ನ 12.30ಕ್ಕೆ ತೆರೆದಿಟ್ಟಿದ್ದ ಕೊಳವೆಬಾವಿಗೆ ಬಾಲಕ ಸಂದೀಪ್(8) ಆಟವಾಡುತ್ತಲೇ ಹೋಗಿ ಬಿದ್ದು 56 ಅಡಿಯ ಆಳದಲ್ಲಿ ಸಿಲುಕಿ ಹಾಕಿಕೊಂಡಿದ್ದ. ಹಟ್ಟಿ ಚಿನ್ನದ ಗಣಿ ತಜ್ಞರು ಜೆಸಿಬಿ ಯಂತ್ರಗಳನ್ನು ಬಳಸಿ ಸತತವಾಗಿ 60 ಗಂಟೆಯ ಕಾರ್ಯಾಚರಣೆ ನಡೆಸಿದ್ದರು. ಆದರೆ ಈ ಯಾವ ಕಾರ್ಯಾಚರಣೆಯೂ ಫಲ ನೀಡಿರಲಿಲ್ಲ.
ಬಲಿಗೆ ಕಾದಿವೆ ಕೊಳವೆಗಳು!
ಶಹಾಪುರ ಮತ್ತು ಯಾದಗಿರಿ ತಾಲೂಕುಗಳಲ್ಲಿ ಕೊರೆದ ಕೆಲ ಕೊಳವೆಬಾವಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿದ್ದು ಜೀವ ಬಲಿಗಾಗಿ ಕಾದಿವೆ. ಅವಶ್ಯಕತೆ ಇರುವ ಕಡೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಕೆಲವೊಂದಕ್ಕೆ ನೀರು ಹತ್ತಿದ್ದು, ಇನ್ನೂ ಕೆಲವು ಕಡೆ ನೀರು ಬರದ ಕಾರಣ ಅವುಗಳನ್ನು ಹಾಗೆಯೇ ಬೀಡಲಾಗಿದೆ. ಯಾದಗಿರಿ ತಾಲೂಕಿನ ವರ್ಕನಳ್ಳಿಯಲ್ಲಿಯೂ ಗ್ರಾಪಂ ಎದುರು ಕೊಳವೆಬಾವಿಯನ್ನು ಕೊರೆದು ನೀರು ಬರದಿದ್ದರೂ ಹಾಗೆಯೇ ಬಿಟ್ಟಿದ್ದಾರೆ. ಕೆಲವು ಕಡೆ ಬೋರವೆಲ್ನಿಂದ 20 ಮೀಟರ್ ಅಂತರದಲ್ಲಿ ಅಂಗನವಾಡಿ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಆಟವಾಡುತ್ತಾರೆ. ಅದೃಷ್ಟವಶಾತ್ ಇಲ್ಲಿಯವರೆಗೆ ಯಾವುದೇ ಅನಾಹುತ ಆಗಿಲ್ಲ.