ಡೀವಿ ರೈಲು ದುಬಾರಿ
ರೈಲು ಪ್ರಯಾಣ ದರ ಹೆಚ್ಚಳ ಆಗಲಿದೆ ಎಂಬ ಸುಳಿವು ನಿಜವಾಗಿದೆ..
-ನಷ್ಟ ತಡೆಗೆ ರೇಲ್ವೆ ಪ್ರಯಾಣ ದರ ಶೇ.14.2 ಸರಕು ಸಾಗಣೆ ದರ ಶೇ.6.5ರಷ್ಟು ಏರಿಕೆ ಮಾಡಿದ ಮೋದಿ ಸರ್ಕಾರ
- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ರೈಲು ಪ್ರಯಾಣ ದರ ಹೆಚ್ಚಳ ಆಗಲಿದೆ ಎಂಬ ಸುಳಿವು ನಿಜವಾಗಿದೆ. ಕೇಂದ್ರ ಸರ್ಕಾರ ಎಲ್ಲ ದರ್ಜೆಯ ಪ್ರಯಾಣದಲ್ಲಿ ಶೇ.14.2 ಮತ್ತು ಸರಕು ಸಾಗಣೆ ದರದಲ್ಲಿ ಶೇ.6.5ರಷ್ಟು ಹೆಚ್ಚಳ ಮಾಡಿದೆ. ಪರಿಷ್ಕೃತ ದರ ಜೂ.25ರಿಂದ ಅನುಷ್ಠಾನಕ್ಕೆ ಬರಲಿದೆ.
ಒಳ್ಳೆಯ ದಿನಗಳು ಬರಲಿವೆ ಎಂಬ ಭರವಸೆಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಎನ್ಡಿಎ ಸರ್ಕಾರದ ಮೊದಲ ಪ್ರಮುಖ ದರ ಏರಿಕೆ ಇದಾಗಿದೆ. ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಕರ್ನಾಟಕ ಪ್ರವಾಸದಲ್ಲಿದ್ದಾಗ ಮತ್ತು ಹಲವು ಸಂದರ್ಭಗಳಲ್ಲಿ ಪ್ರಯಾಣ ದರ ಹೆಚ್ಚಳ ಬಗ್ಗೆ ಮುನ್ಸೂಚನೆ ನೀಡಿದ್ದರು.
ಸಮ್ಮತಿಸಿದ ಪ್ರಧಾನಿ: ದರ ಪರಿಷ್ಕರಣೆಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಿದ್ದಾರೆ. ಮೋದಿ ಸಮ್ಮತಿ ಬಳಿಕವೇ ರೈಲ್ವೆ ಮಂಡಳಿ ದರ ಪರಿಷ್ಕರಣೆಗೆ ಮುಂದಾಗಿದೆ. ಯುಪಿಎ ಸರ್ಕಾರ ಪ್ರಯಾಣ ದರವನ್ನು ಶೇ.14.2 ಮತ್ತು ಸರಕು ಸಾಗಣೆ ದರವನ್ನು ಶೇ.6.5ರಷ್ಟು ಹೆಚ್ಚಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದನ್ನು ತಡೆಹಿಡಿದಿತ್ತು.
ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ (ಮೇ 16) ಮೇ 20 ರಿಂದ ಪರಿಷ್ಕೃತ ದರ ಜಾರಿ ಮಾಡುವುದಾಗಿ ರೈಲ್ವೆ ಮಂಡಳಿ ತಿಳಿಸಿತ್ತು. ಆದರೆ, ಈ ನಿರ್ಧಾರವನ್ನು ಮುಂಬರುವ ಸರ್ಕಾರದ ವಿವೇಚನೆಗೆ ಬಿಡುವಂತೆ ಆ ಸಂದರ್ಭದಲ್ಲಿ ರೇಲ್ವೆ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸೂಚಿಸಿದ್ದರಿಂದಾಗಿ ತಡೆ ಹಿಡಿಯಲಾಗಿತ್ತು. ಹಿಂದಿನ ಸರ್ಕಾರ ತಡೆ ಹಿಡಿದಿದ್ದ ಆದೇಶವನ್ನು ನಾನು ವಾಪಸ್ ಪಡೆದಿದ್ದೇನೆ. ಜೂನ್ 25ರಿಂದ ಪರಿಷ್ಕೃತ ದರ ಜಾರಿ ಆಗಲಿದೆ ಎಂದು ರೈಲ್ವೆ ಸಚಿವ ಸದಾನಂದಗೌಡ ಶುಕ್ರವಾರ ತಿಳಿಸಿದ್ದಾರೆ.
ಲಾಭ ಎಷ್ಟು?: ದರ ಹೆಚ್ಚಳ ನಿರ್ಧಾರ ಜಾರಿಯಿಂದ 8 ಸಾವಿರ ಕೋಟಿ ಆದಾಯ ಗಳಿಸುವ ಗುರಿ ರೇಲ್ವೆಯದ್ದು. ಆದರೂ ನಷ್ಟದ ಪ್ರಮಾಣ ಸರಿದೂಗಿಸಲು ಸಾಧ್ಯವಾಗುತ್ತಿಲ್ಲ. ಮಧ್ಯಂತರ ಬಜೆಟ್ನಲ್ಲಿ ಘೋಷಿಸಿರುವ ಕೆಲ ಕ್ರಮಗಳಿಂದಾಗಿ ದೀರ್ಘ ಕಾಲದಲ್ಲಿ ಇಲಾಖೆ ಗಳಿಕೆ ಸುಧಾರಿಸಲಿದೆ. ಪ್ರಮುಖವಾಗಿ ಇಂಧನ ವೆಚ್ಚಾಧಾರಿತ ಪ್ರಯಾಣ ದರ ನಿಗದಿ, ಡೈನಾಮಿಕ್ ಪ್ರೈಸಿಂಗ್ ಮತ್ತಿತರ ಕ್ರಮಗಳಿಂದ ಆದಾಯ ಹೆಚ್ಚುವ ನಿರೀಕ್ಷೆ ಇದೆ.
ರೈಲ್ವೆ ಸಚಿವ ಸದಾನಂದಗೌಡರು ಈಗಾಗಲೇ ರೈಲ್ವೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಹಣಕಾಸು ಸಚಿವ ಅರುಣ್ ಜೆಟ್ಲಿ ಅವರಿಗೆ ಮನವಿ ಮಾಡಿದ್ದಾರೆ. ಜತೆಗೆ ಪೂರ್ಣ ರೈಲ್ವೆ ಬಜೆಟ್ನಲ್ಲಿ ಆದಾಯ ಸೋರಿಕೆ ತಡೆ ಮತ್ತು ಆದಾಯ ಸಂಗ್ರಹ ಹೆಚ್ಚಳಕ್ಕೆ ಹಲವು ಸುಧಾರಣಾ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ.
ದರ ಹೆಚ್ಚಳ ಹೇಗೆ?
10% ಎಲ್ಲ ದರ್ಜೆಯ ಪ್ರಯಾಣ ದರ ಹೆಚ್ಚಳ
4.2% ಇಂಧನ ಮರುಹೊಂದಾಣಿಕೆ ದರ
6.5% ಸರಕು ಸಾಗಣೆ ದರ ಹೆಚ್ಚಳ
ರು. 8000 ಕೋಟಿ ದರ ಹೆಚ್ಚಳದಿಂದ ಸಂಗ್ರಹ ಮಾಡಲು ಉದ್ದೇಶಿಸಿರುವ ಮೊತ್ತ
ರು. 900 ಕೋಟಿ ಪ್ರಯಾಣಿಕರ ವಿಭಾಗದಲ್ಲಿ ಪ್ರತಿ ತಿಂಗಳು ಉಂಟಾಗುತ್ತಿರುವ ನಷ್ಟ
ದೆಹಲಿ-ಮುಂಬೈ
ಹಾಲಿ ಪರಿಷ್ಕೃತ
1ಎ 4,135 4,722
2ಎ 2,495 2,849
3ಎ 1,815 2,072
ದೆಹಲಿ-ಬೆಂಗಳೂರು
1ಎ 5,915 6,754
2ಎ 3,585 4,094
3ಎ 2,600 2,969
ದೆಹಲಿ-ಕೋಲ್ಕತಾ
1ಎ 4,390 5,013
2ಎ 2,635 3,009
3ಎ 1,915 2,186
ದೆಹಲಿ-ಚೆನ್ನೈ
1ಎ 5,635 6,435
2ಎ 3,440 3,928
3ಎ 2,515 2,872
ರು. 30 ಕೋಟಿ ನಷ್ಟ
ಸಾಮಾನ್ಯ ದರ್ಜೆಗೆ ಅತಿ ಕಡಿಮೆ ಪ್ರಯಾಣ ದರ ವಿಧಿಸುತ್ತಿರುವ ರೈಲ್ವೆ ಆರ್ಥಿಕ ಬಿಕ್ಕಟ್ಟಿನಲ್ಲಿದೆ. ಪ್ರಯಾಣ ಮತ್ತು ಸಕರು ಸಾಗಣೆಯಿಂದ ನಿತ್ಯ ಆಗುತ್ತಿರುವ ನಷ್ಟ 30 ಕೋಟಿ. ಅಂದರೆ ವಾರ್ಷಿಕ ನಷ್ಟ ಸುಮಾರು 11,000 ಕೋಟಿ.
ಚೊಚ್ಚಲ ಬಜೆಟ್ಗೆ ಮುನ್ನ ದರ ಹೆಚ್ಚಳ ಮಾಡಿದ ಕ್ರಮ ಸರಿಯಲ್ಲ. ನಾನು ರೇಲ್ವೆ ಸಚಿವನಾಗಿದ್ದಾಗ ಮಂಡಳಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸಂಸತ್ನಲ್ಲಿ ಚರ್ಚಿಸಲು ಸಮಯ ಇಲ್ಲ ಎಂಬ ಕಾರಣಕ್ಕೆ ತಡೆಹಿಡಿಯಲಾಗಿತ್ತು.
-ಮಲ್ಲಿಕಾರ್ಜುನ ಖರ್ಗೆ
ಅಚ್ಛೇದಿನ್ ಆಯೇಂಗೆ... ಎನ್ನುತ್ತಾ ಅಧಿಕಾರಕ್ಕೇರಿದ ಮೋದಿ, ಜನರನ್ನು ಮೂರ್ಖರನ್ನಾಗಿಸಿದ್ದು ಸಾಬೀತಾಗಿದೆ.
- ಲಾಲೂ ಪ್ರಸಾದ್
ಸಂಸತ್ನ ಒಪ್ಪಿಗೆ ಪಡೆಯದೇ, ಶ್ವೇತಪತ್ರವನ್ನು ಹೊರಡಿಸದೇ ರೇಲ್ವೇ ದರವನ್ನು ಹಠಾತ್ತನೆ ಏರಿಸಿರುವ ಕ್ರಮ ಸರಿಯಲ್ಲ.
- ಮನೀಶ್ ತಿವಾರಿ
ಮಧ್ಯಮ ವರ್ಗ ಹಾಗೂ ಬಡಜನರ ಹಿತಾಸಕ್ತಿಯನ್ನು ಪರಿಗಣಿಸಿ, ರೇಲ್ವೇ ಪ್ರಯಾಣ ದರ ಏರಿಕೆ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತಕ್ಷಣವೇ ಹಿಂಪಡೆಯಬೇಕು.
- ಜಯಲಲಿತಾ