ಶೃಂಗೇರಿ ಸಂಸ್ಕೃತ ಸಂಸ್ಥಾನ ವಿವಿ ಕುಲಪತಿ ನೇಮಕ: ಕೇಂದ್ರಕ್ಕೆ 'ಹೈ' ನೋಟಿಸ್
ಹಣ ದುರುಪಯೋಗ ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ...
ಬೆಂಗಳೂರು: ಹಣ ದುರುಪಯೋಗ ಹಾಗೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸುತ್ತಿರುವ ಶೃಂಗೇರಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಕಣ್ಣನ್ ಎಂಬುವರು ಮಂತ್ರಿಗಳ ಪ್ರಭಾವದಿಂದ ಹಂಗಾಮಿಯಾಗಿ 6 ತಿಂಗಳ ಮಟ್ಟಿಗೆ ಕುಲಪತಿಯಾಗಿ ನೇಮಕವಾಗಿದ್ದಾರೆಂದು ಸಂಸ್ಕೃತ ಹಿತ ರಕ್ಷಣಾ ಸಮಿತಿ ಮತ್ತು ಪ್ರಶಾಂತ್ ಕುಮಾರ್ ಜಿ.ವಿ. ಹೈಕೋರ್ಟ್ ಮೆಟ್ಟಲೇರಿದ್ದರು. ವಿಚಾರಣೆ ನಡೆಸಿದ ಮುಖ್ಯ ನ್ಯಾ. ಡಿ.ಎಚ್. ವಾಘೇಲ ಹಾಗೂ ಎಚ್.ಜಿ. ರಮೇಶ್ ಅವರಿದ್ದ ದ್ವಿಸದಸ್ಯ ಪೀಠ ನೋಟಿಸ್ ಜಾರಿ ಮಾಡಿದೆ.
ಹಂಗಾಮಿ ಕುಲಪತಿ ಕಣ್ಣನ್ರವರು 2009ರಲ್ಲಿ ಅವ್ಯವಹಾರದಲ್ಲಿ ಭಾಗಿ ಆಗಿದ್ದಾರೆಂದು ವಿಚಾರಣೆ ನಡೆಸಿ 2010ರಲ್ಲಿ ವಿವಿ ಅವರನ್ನು ಪ್ರಾಂಶುಪಾಲ ಹುದ್ದೆಯಿಂದ ಸಹಾಯ ಪ್ರಾಧ್ಯಾಪಕ ಹುದ್ದೆಗೆ ಹಿಂಬಡ್ತಿ ನೀಡಿತು. ಅಷ್ಟೇ ಅಲ್ಲದೆ ಸಾರಿಗೆ ಭತ್ಯೆ , ನೇಮಕಾತಿಯಲ್ಲಿ ಅವ್ಯವಹಾರ ಮತ್ತು ಅಕ್ರಮವಾಗಿ ಗಂಧದ ಮರ ಕಡಿದಿದ್ದಾರೆಂದು ಅವರ ಮೇಲೆ ಆರೋಪವಿದೆ.
ಈ ಬಗ್ಗೆ ಕೆಲವು ತಿಂಗಳ ಹಿಂದೆ 'ಕನ್ನಡಪ್ರಭ' ವರದಿಯನ್ನೂ ಪ್ರಕಟಿಸಿತ್ತು. ನೇಮಕದಲ್ಲಿ ಹಿರಿತನ ಪರಿಗಣಿಸಿದರೂ ಐವರ ಹೆಸರು ಪಟ್ಟಿಯಲ್ಲಿದ್ದು ಉಳಿದವರನ್ನು ಕಡೆಗಣಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ಅರ್ಜಿಯಲ್ಲಿ ತಿಳಿಸಿದ್ದರು. ಹಂಗಾಮಿ ಕುಲಪತಿ ಆಗಿ ಮಾರ್ಚ್ 11ರಂದು ಹೊರಡಿಸಿದ ಆದೇಶದಲ್ಲಿ ಫೆ.24ರಿಂದ ಕುಲಪತಿಯಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಉಲ್ಲೇಖವಾಗಿದೆ. ಈ ಎಲ್ಲಾ ಅಂಶವನ್ನು ಪರಿಗಣಿಸಿ ಕಣ್ಣನ್ರವರನ್ನು ವಜಾಗೊಳಿಸುವಂತೆ ಅರ್ಜಿಯಲ್ಲಿ ಕೋರಿದ್ದರು.