ಸಕ್ಕರೆ ಮುಟ್ಟುಗೋಲು ಹಾಕಿ, ರೈತರಿಗೆ ಹಣ ಕೊಡಿಸಿ: ಸಿಎಂ
ಕಬ್ಬಿಗೆ ಬಾಕಿ ಹಣ ಉಳಿಸಿಕೊಂಡಿರುವ ಕಾರ್ಖಾನೆ ಮಾಲೀಕರು..
ಬೆಂಗಳೂರು: ಕಬ್ಬಿಗೆ ಬಾಕಿ ಹಣ ಉಳಿಸಿಕೊಂಡಿರುವ ಕಾರ್ಖಾನೆ ಮಾಲೀಕರು ತಯಾರಿಸಿರುವ ಸಕ್ಕರೆಯನ್ನು ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಹಣ ಕೊಡಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಬ್ಬಿಗೆ ಸರ್ಕಾರ ನಿಗದಿ ಮಾಡಿದ ದರವನ್ನು ನೀಡದೇ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಕ್ರಮ ಖಂಡಿಸಿ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ತಮ್ಮ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರ ಸಮ್ಮುಖದಲ್ಲಿ ಈ ಆದೇಶ ನೀಡಿದ್ದಾರೆ. ಸಕ್ಕರೆ ಸಚಿವ ಎಚ್.ಎಸ್.ಮಹಾದೇವಪ್ರಸಾದ್ ಹಾಗೂ ಇಲಾಖೆ ಅಧಿಕಾರಿಗಳಿಗೆ ಈ ಸೂಚನೆ ನೀಡಿರುವ ಸಿದ್ದರಾಮಯ್ಯ ಕಾರ್ಖಾನೆ ಮಾಲೀಕರು ಯಾವುದೇ ಕಾರಣಕ್ಕೂ ರೈತರ ಹಣ ಬಾಕಿ ಇಟ್ಟುಕೊಳ್ಳಬಾರದು. ಸರ್ಕಾರ ನಿಗದಿ ಮಾಡಿದ ದರವನ್ನು ನೀಡಲೇಬೇಕು. ರು. 3500 ಕೋಟಿ ಬಾಕಿ ಇದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಾಕಿ ನೀಡದೆಸತಾಯಿಸುತ್ತಿರುವ ಕಾರ್ಖಾನೆ ಮಾಲೀಕರು ತಯಾರಿಸಿರುವ ಸಕ್ಕರೆಮುಟ್ಟುಗೋಲು ಹಾಕಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸರ್ಕಾರ ಭರವಸೆ ನೀಡಿದ್ದ ಪ್ರತಿ ಟನ್ಗೆ 150 ಸಹಾಯಧನದ 2ನೇ ಕಂತಿನ 350 ಕೋಟಿ ಬಿಡುಗಡೆಗೊಳಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.