ಹಣ ಕೊಡದಿದ್ದರೆ ಸಕ್ಕರೆ ಕಾರ್ಖಾನೆಗಳಿಗೆ ಬೀಗ
ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣ ಪಾವತಿ ಮಾಡದಿದ್ದಲ್ಲಿ ಸಕ್ಕರೆ...
ಬೆಂಗಳೂರು: ಕಬ್ಬು ಬೆಳೆಗಾರರಿಗೆ ನೀಡಬೇಕಾದ ಬಾಕಿ ಹಣ ಪಾವತಿ ಮಾಡದಿದ್ದಲ್ಲಿ ಸಕ್ಕರೆ ಕಂಪನಿಗಳ ಸಕ್ಕರೆ ಜಪ್ತಿ ಮಾಡಿಕೊಳ್ಳುವ ಹಾಗೂ ಕಾರ್ಖಾನೆಗಳಿಗೆ ಬೀಗ ಜಡಿಯುವ ತೀರ್ಮಾನಕ್ಕೆ ರೈತರು ಮುಂದಾಗಿದ್ದಾರೆ.
ಕಬ್ಬು ಬೆಳೆಗಾರರಿಗೆ ನೀಡಬೇಕಿರುವ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಶುಕ್ರವಾರ ಬೆಂಗಳೂರಿನಲ್ಲಿ ನಡೆಸಿದ ಬೃಹತ್ ಪ್ರತಿಭಟನೆ ವೇಳೆ ಸಂಘದ ಅಧ್ಯಕ್ಷ ಕುರುಬೂರು ಶಾಂತರಕುಮಾರ್ ಅವರು ಪದಾಧಿಕಾರಿಗಳೊಂದಿಗೆ ಚರ್ಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ.
ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಹಿತ ಕಾಪಾಡಬೇಕಾದ ರಾಜ್ಯದ ಕೆಲ ಸಂಸದರು, ಸಚಿವರು ಹಾಗೂ ಶಾಸಕರಿಂದಲೇ ಕಬ್ಬುಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ಅಧ್ಯಕ್ಷ ಆರೋಪಿಸಿದರು.
ರಾಜ್ಯದ ಸುಮಾರು 24ಕ್ಕಿಂತ ಅಧಿಕ ಕಾರ್ಖಾನೆಗಳು ರಾಜಕಾರಣಿಗಳ ಮಾಲೀಕತ್ವದಲ್ಲಿವೆ. ಸುಮಾರು 56 ಕಾರ್ಖಾನೆಗಳು ರೈತರಿಗೆ ನೀಡಬೇಕಾದ ರು. 3500 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿವೆ. ಬಾಕಿ ಹಣ ನೀಡುವಂತೆ ಸರ್ಕಾರ ಆದೇಶಿಸಿದ್ದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸರ್ಕಾರ ಇನ್ನು 15 ದಿನಗಳಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಕಬ್ಬು ಸರಬರಾಜು ಮಾಡಿದ 2 ವಾರದಲ್ಲಿ ರೈತನಿಗೆ ಹಣ ಸಿಗಬೇಕು. ಆದರೆ, ಯಾವ ಕಾರ್ಖಾನೆಗಳೂ ಅದನ್ನು ಪಾಲಿಸುತ್ತಿಲ್ಲ. ಹಾಗಾಗಿ ಸೇ.15ರಷ್ಟು ಬಡ್ಡಿ ಸೇರಿಸಿ ಹಣ ನೀಡಬೇಕು ಎಂದು ಒತ್ತಾಯಿಸಿದರು.
ಮಂಡ್ಯ, ಹಾಸನ, ಬೆಳಗಾವಿ, ಮದ್ದೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈಲಿನಲ್ಲಿ ಬೆಳಗ್ಗೆಯೇ ಬೆಂಗಳೂರಿಗೆ ಆಗಮಿಸಿದ್ದರು. ರೈಲು ನಿಲ್ದಾಣದಿಂದ ಸಾವಿರಾರು ರೈತರು ಮುಖ್ಯಮಂತ್ರಿ ನಿವಾಸದತ್ತ ಮೆರವಣಿಗೆ ಸಾಗಿದರು. ಆದರೆ, ಪೊಲೀಸರು ಆನಂದ್‌ರಾವ್ ವೃತ್ತದ ಬಳಿಯೇ ರೈತರನ್ನು ತಡೆದು ನಿಲ್ಲಿಸಿದರು. ನಂತರ ಫ್ರೀಡಂ ಪಾರ್ಕ್‌ಗೆ ತೆರಳಿ ಪ್ರತಿಭಟನೆ ನಡೆಸುವಂತೆ ಸೂಚಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರನ್ನು ಮಾತುಕತೆಗೆ ಕರೆದರು. ಆದರೂ ಪಟ್ಟುಬಿಡದ ರೈತರು ಸಂಜೆವರೆಗೆ ರಸ್ತೆಯಲ್ಲೇ ಕುಳಿತು ಪ್ರತಿಭಟಿಸಿದರು.
ರಾಜಿ ಮಾಡಲ್ಲ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಆಹಾರ ಸಚಿವ ದಿನೇಶ್ ಗುಂಡೂರಾವ್, ಸಕ್ಕರೆ ಮಾಲೀಕರು ಯಾರೇ ಆಗಿರಲಿ, ಎಲ್ಲರೂ ಕಾನೂನಿನಲ್ಲಿ ಒಂದೇ. ಪ್ರತಿಯೊಬ್ಬರಿಗೂ ಸರ್ಕಾರದ ಆದೇಶ ಅನ್ವಯವಾಗುತ್ತದೆ. ಹಾಗಾಗಿ ಆದೇಶ ಮೀರಿ ರೈತರಿಗೆ ವಂಚಿಸುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಎಂ ಬದ್ಧರಾಗಿದ್ದಾರೆ. ಕಾರ್ಖಾನೆಗಳ ಜತೆ ರಾಜಿ ಪ್ರಶ್ನೆಯೇ ಇಲ್ಲ ಎಂದರು.
ಗ್ರೀನ್‌ಬಡ್ಸ್ ವಿರುದ್ಧ ತನಿಖೆ ನಡೆಸಿ
ಗ್ರೀನ್‌ಬಡ್ಸ್ ಆಗ್ರೋ ಫಾರಂ ಕಂಪನಿಯ ಮಾಲೀಕ ಬಿ.ಎಲ್. ರವೀಂದ್ರನಾಥ್‌ನವರನ್ನು ಬಂಧಿಸಬೇಕು, ಅವರ ಕಂಪನಿಗೆ ಸೇರಿದ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕುರುಬೂರು ಶಾಂತಕುಮಾರ್ ಇದೇ ವೇಳೆ ಸಿಎಂಗೆ ಮನವಿ ಮಾಡಿದರು. ಅದಕ್ಕೆ ಸಮ್ಮತಿಸಿದ ಸಿಎಂ 2 ತಂಡಗಳನ್ನು ರಚಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.