ಹಾಲಿನ ಪ್ರೋತ್ಸಾಹಧನ ರೈತರಿಗೆ ನೇರ ವರ್ಗಾವಣೆ
ಹಾಲಿನ ಪ್ರೋತ್ಸಾಹಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ...
ಕ.ಪ್ರ. ವಾರ್ತೆ | ಬೆಂಗಳೂರು | ಜೂ.20
ಹಾಲಿನ ಪ್ರೋತ್ಸಾಹಧನವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವ ಯೋಜನೆ ಇನ್ನೊಂದು ತಿಂಗಳಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಪಶುಸಂಗೋಪನೆ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ರಾಜ್ಯದಲ್ಲಿ ಇದೀಗ ಪ್ರತಿ ನಿತ್ಯ 64 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ದಿನವೂ 13 ಕೋಟಿಯಷ್ಟು ಪ್ರೋತ್ಸಾಹಧನವನ್ನು ವಿತರಿಸಲಾಗುತ್ತಿದೆ. 7.5 ಲಕ್ಷ ರೈತರು ಈ ಸೌಲಭ್ಯ ಪಡೆಯುತ್ತಿದ್ದಾರೆ. 4 ಪ್ರೋತ್ಸಾಹ ಧನವನ್ನು ಸರ್ಕಾರ ಬಿಡುಗಡೆ ಮಾಡಿದ ಮೇಲೆ ಇಲಾಖೆ, ಕೆಎಂಎಫ್ ಅಲ್ಲಿಂದ ಸಂಘ-ಸಂಸ್ಥೆಗಳು ನಂತರ ಫಲಾನುಭವಿಗಳಿಗೆ ಹಣ ಲಭಿಸುತ್ತಿತ್ತು. ಇದಕ್ಕೆ ಹೊರತಾಗಿ ಫಲಾನುಭವಿಗಳ ಖಾತೆಗೆ ಆನ್‌ಲೈನ್ ಮೂಲಕ ನೇರವಾಗಿ ಹಣ ಸಂದಾಯ ಮಾಡಲಾಗುತ್ತದೆ ಎಂದು ಸುದ್ದಿಗಾರರಿಗೆ ಶುಕ್ರವಾರ ವಿವರಿಸಿದರು.
ಬೆಂಗಳೂರು ಹಾಗೂ ಮಂಗಳೂರಿನಲ್ಲಿರುವ ಬಹುತೇಕ ಹಾಲು ಉತ್ಪಾದಕರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಇನ್ನು 15 ದಿನದಲ್ಲಿ ರಾಜ್ಯದಲ್ಲಿರುವ ಎಲ್ಲ ಹಾಲು ಉತ್ಪಾದಕರೂ ಬ್ಯಾಂಕ್‌ನಲ್ಲಿ ಖಾತೆ ತೆರೆದು ಅದನ್ನು ಸಂಘಗಳ ಮೂಲಕ ಇಲಾಖೆಗೆ ಸಲ್ಲಿಸಲು ಸೂಚಿಸಲಾಗಿದೆ. ನಂತರ ಎಲ್ಲರಿಗೂ ಖಾತೆಗೇ ಪ್ರೋತ್ಸಾಹಧನವನ್ನು ಸಂದಾಯ ಮಾಡಲಾಗುತ್ತದೆ ಎಂದು ತಿಳಿಸಿದರು.
ಕ್ಷೀರಭಾಗ್ಯ ವಿಸ್ತರಣೆ: ಕ್ಷೀರಭಾಗ್ಯ ಯೋಜನೆಯನ್ನು ಐದು ದಿನ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ. ಆದರೆ, ಹಾಲಿನ ಪುಡಿ ತಯಾರಿಕೆ ಸಂಬಂಧ ರಾಜ್ಯದಲ್ಲಿರುವ ಘಟಕಗಳ ಸಾಮರ್ಥ್ಯ ಕಡಿಮೆ ಇದೆ. ಇದನ್ನು ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಹಾಸನದ ಚನ್ನರಾಯಪಟ್ಟಣದಲ್ಲಿ ಘಟಕವನ್ನು 80 ಕೋಟಿ ವೆಚ್ಚದಲ್ಲಿ ಉನ್ನತೀಕರಿಸಲಾಗುತ್ತಿದೆ. ಇದು ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಇನ್ನು ಮೈಸೂರಿನಲ್ಲಿ 200 ಕೋಟಿ ವೆಚ್ಚದಲ್ಲಿ ಬೃಹತ್ ಘಟಕ ಸ್ಥಾಪಿಸಲಾಗುತ್ತಿದ್ದು, ಅದು ಇನ್ನೊಂದು ವರ್ಷದಲ್ಲಿ ಮುಗಿಯಲಿದೆ. ಹಾಲಿನ ಪುಡಿ ತಯಾರಿಕೆ ಹೆಚ್ಚು ಮಾಡಿ ಶೀಘ್ರದಲ್ಲೇ ಐದು ದಿನವೂ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ನೀಡಲಾಗುತ್ತದೆ ಎಂದು ಹೇಳಿದರು.
ತುಮಕೂರಿನಲ್ಲಿ ಹಾಲನ್ನು ಫ್ಲೆಕ್ಸಿ ಪ್ಯಾಕೆಟ್‌ನಲ್ಲಿ ನೀಡುವ ಕಾರ್ಯ ಆಗುತ್ತಿದೆ. ಇದಕ್ಕೆ ಒಂದು ರುಪಾಯಿ ಹೆಚ್ಚು ವೆಚ್ಚವಾಗುತ್ತಿದೆ. ತುಮಕೂರಿನಲ್ಲಿ ಘಟಕ ಸ್ಥಾಪಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು, ಇಲ್ಲಿಂದ ತುಮಕೂರು ಸೇರಿದಂತೆ ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳ ಮಕ್ಕಳಿಗೆ ಫ್ಲೆಕ್ಸಿ ಪ್ಯಾಕೆಟ್‌ನಲ್ಲೇ ಹಾಲು ವಿತರಿಸಲಾಗುತ್ತದೆ.
ಇನ್ನೊಂದು ವರ್ಷದಲ್ಲಿ ರಾಜ್ಯದಲ್ಲಿರುವ ಎಲ್ಲ ಶಾಲಾಮಕ್ಕಳಿಗೂ ಕ್ಷೀರಭಾಗ್ಯದಲ್ಲಿ ಹಾಲಿನಪುಡಿ ನೀಡುವ ಬದಲು ಫ್ಲೆಕ್ಸಿ ಪ್ಯಾಕ್‌ನಲ್ಲಿ ಹಾಲನ್ನೇ ನೀಡಲಾಗುತ್ತದೆ. ಈ ಫ್ಲೆಕ್ಸಿ ಪ್ಯಾಕ್ ಹಾಲು ಒಂದು ತಿಂಗಳು ಕೆಡುವುದಿಲ್ಲ ಎಂದು ಸಚಿವ ಟಿ.ಬಿ.ಜಯಚಂದ್ರ ವಿವರಿಸಿದರು.