ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಿಂದಿಗೆ ಹಿನ್ನಡೆ

ಕೇಂದ್ರ ಸರ್ಕಾರ ಹುಟ್ಟುಹಾಕಿರುವ 'ಹಿಂದಿ' ವಿವಾದದ ಬೆಂಕಿ ಇನ್ನೂ ಆರಿಲ್ಲ. ಸರ್ಕಾರದ ಅಧಿಕೃತ...

Mainashree
Updated On : 20 Jun 2014, 10:50 am

ಚೆನ್ನೈ/ನವದೆಹಲಿ: ಕೇಂದ್ರ ಸರ್ಕಾರ ಹುಟ್ಟುಹಾಕಿರುವ 'ಹಿಂದಿ' ವಿವಾದದ ಬೆಂಕಿ ಇನ್ನೂ ಆರಿಲ್ಲ. ಸರ್ಕಾರದ ಅಧಿಕೃತ ಸುತ್ತೋಲೆಗಳಲ್ಲಿ ಹಾಗೂ ಸಾಮಾಜಿಕ ತಾಣಗಳಲ್ಲಿ ಹಿಂದಿ ಭಾಷೆಯನ್ನೇ ಬಳಸಬೇಕು ಎಂಬ ಕೇಂದ್ರದ ಪ್ರಸ್ತಾಪಕ್ಕೆ ಇನ್ನಷ್ಟು ಆಕ್ರೋಶ ವ್ಯಕ್ತವಾಗಿದೆ.
 ಸರ್ಕಾರದ ಪ್ರಸ್ತಾಪ ಖಂಡಿಸಿ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರು ಪ್ರಧಾನಿಗೆ ಪತ್ರ ಬರೆದ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರೂ 'ಹಿಂದಿ ಹೇರಿಕೆ'ಯನ್ನು ವಿರೋಧಿಸಿದ್ದಾರೆ. ಜತೆಗೆ, ಬಿಎಸ್‌ಪಿ, ಸಿಪಿಎಂ, ಪಿಎಂಕೆ, ಎಂಡಿಎಂಕೆ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಇದೇ ವೇಳೆ ಶುಕ್ರವಾರ ಒಡಿಶಾ ವಿಧಾನಸಭೆಯಲ್ಲಿ ಹಿಂದಿಯಲ್ಲಿ ಪ್ರಶ್ನೆ ಕೇಳಲು ಸದಸ್ಯರೊಬ್ಬರು ಯತ್ನಿಸಿದ್ದು, ಅದಕ್ಕೆ ಸಭಾಧ್ಯಕ್ಷರು ಅನುಮತಿ ನೀಡದ ಘಟನೆಯೂ ನಡೆದಿದೆ. ಇವೆಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್ಚೆತ್ತ ಕೇಂದ್ರ ಸರ್ಕಾರ, ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಇದನ್ನು ಕಡ್ಡಾಯ ಮಾಡಿಲ್ಲ ಎನ್ನುವ ಮೂಲಕ ವಿವಾದದ ಬೆಂಕಿ ಆರಿಸಲು ಪ್ರಯತ್ನಿಸಿದೆ.
ಮಿತ್ರಪಕ್ಷಗಳಿಂದಲೂ ವಿರೋಧ: ಎನ್‌ಡಿಎ ಮಿತ್ರಪಕ್ಷಗಳಾದ ಪಿಎಂಕೆ, ಎಂಡಿಎಂಕೆ ಕೂಡ 'ಹಿಂದಿ ಪ್ರಸ್ತಾಪ'ವನ್ನು ವಿರೋಧಿಸಿವೆ. ದೇಶದ ಏಕತೆ ಮತ್ತು ಸಮಗ್ರತೆ ಹಿತಾಸಕ್ತಿಯಿಂದ ಎಲ್ಲ ಭಾಷೆಗಳನ್ನೂ ಅಧಿಕೃತ ಭಾಷೆ ಎಂದು ಘೋಷಿಸಬೇಕು. ಅಲ್ಲಿವರೆಗೆ ಆಂಗ್ಲವೇ ಅಧಿಕೃತ ಭಾಷೆಯಾಗಿ ಮುಂದುವರಿಯಲಿ ಎಂದಿದ್ದಾರೆ ಎಂಡಿಎಂಕೆ ನಾಯಕ ವೈಕೋ.
ತಮಿಳರ ಭಾವನೆಗೆ ಧಕ್ಕೆ
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ತಮಿಳುನಾಡು ಸಿಎಂ ಜಯಲಲಿತಾ, ಹಿಂದಿಗೆ ಸಂಬಂಧಿಸಿ ಕೇಂದ್ರ ಗೃಹ ಸಚಿವಾಲಯದ ಪ್ರಸ್ತಾಪವು 1963ರ ಅಧಿಕೃತ ಭಾಷಾ ಕಾಯ್ದೆಗೆ ವಿರೋಧವಾದದ್ದು ಎಂದಿದ್ದಾರೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ತಮ್ಮ ಭಾಷಾ ಪರಂಪರೆಯ ಬಗ್ಗೆ ಅತೀವ ಪ್ರೀತಿ ಹಾಗೂ ಹೆಮ್ಮೆ ಹೊಂದಿರುವ ತಮಿಳರ ಭಾವನೆಗಳಿಗೆ ಸರ್ಕಾರದ ಪ್ರಸ್ತಾಪ ಧಕ್ಕೆ ಉಂಟುಮಾಡಿದೆ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement