ಹೊಸ ಆರೋಗ್ಯ ಯೋಜನೆ ಬಜೆಟ್ನಲ್ಲಿ ಪ್ರಸ್ತಾಪವಿಲ್ಲ
ಮಂಗಳೂರು: ಆರೋಗ್ಯ ಇಲಾಖೆಗೆ ಬಜೆಟ್ನಲ್ಲಿ ಇನ್ನು ಹೊಸ ಯೋಜನೆ ಕೇಳುವುದಿಲ್ಲ, ಸಿಬ್ಬಂದಿ ಭರ್ತಿ ಸೇರಿದಂತೆ ಆಸ್ಪತ್ರೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ದ.ಕ.ಜಿಲ್ಲಾ ಶಾಖೆ ಶುಕ್ರವಾರ ವೆನ್ಲಾಕ್ ಆಸ್ಪತ್ರೆಯ ಆರ್ಎಪಿಸಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಫ್ಲಾರೆನ್ಸ್ ನೈಂಟಿಂಗೇಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ, ಆಸ್ಪತ್ರೆಗಳಲ್ಲಿ ಖಾಲಿ ಇರುವ ಎಲ್ಲ ರೀತಿಯ ಹುದ್ದೆ ಭರ್ತಿಗೆ ಮುಖ್ಯಮಂತ್ರಿ ಸಮ್ಮತಿ ನೀಡಿದ್ದಾರೆ. ರಾಜ್ಯದಲ್ಲಿ ಆಸ್ಪತ್ರೆಗಳ ಮೇಲ್ದರ್ಜೆ, ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡುವುದಿಲ್ಲ. ಹಾಲಿ ಆಸ್ಪತ್ರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಆಸ್ಪತ್ರೆಗಳಲ್ಲಿ ಖಾಲಿ ಇರುವ 886 ಸರ್ಜನ್ ಹಾಗೂ ಎನ್ಆರ್ಎಚ್ಎಂನಲ್ಲಿ 4 ಸಾವಿರ ಸಿಬ್ಬಂದಿ ಭರ್ತಿಗೆ ನಿರ್ಧರಿಸಲಾಗಿದೆ. ಇವರನ್ನು ಹಂತ ಹಂತವಾಗಿ ಕಾಯಂಗೊಳಿಸಲಾಗುವುದು ಎಂದರು. ಶುಶ್ರೂಷಕರ ನಾನಾ ಬೇಡಿಕೆ ಈಡೇರಿಸುವ ಬಗ್ಗೆ ಜೂ.29ರೊಳಗೆ ಬೆಂಗಳೂರಿನಲ್ಲಿ ರಾಜ್ಯ ಸಂಘ ಹಾಗೂ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.