ಅಲ್ಲೊಂದು ನ್ಯಾಯ, ಇಲ್ಲೊಂದು ಅನ್ಯಾಯ!
ರಾಜ್ಯಪಾಲರ ಬದಲಾವಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ನ ಹಿರಿ ತಲೆಗಳು..
ಮಂಗಳೂರು: ರಾಜ್ಯಪಾಲರ ಬದಲಾವಣೆ ವಿಚಾರದಲ್ಲಿ ಕೇಂದ್ರದ ವಿರುದ್ಧ ಕಾಂಗ್ರೆಸ್‌ನ ಹಿರಿ ತಲೆಗಳು ಕಿಡಿ ಕಾರುತ್ತಿರುವ ಬೆನ್ನಲ್ಲೇ ಈಗ ಇದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರಾವಧಿಯ ನೇಮಕಾತಿಗಳನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಲಲಿತಕಲಾ ಅಕಾಡೆಮಿ, ಯಕ್ಷಗಾನ ಬಯಲಾಟ ಅಕಾಡೆಮಿ ಮತ್ತು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮತ್ತು ಸದಸ್ಯರ ನೇಮಕ ಆದೇಶವನ್ನು ಸರ್ಕಾರ ರದ್ದುಪಡಿಸಿದೆ. ಹಾಗೆ ನೋಡಿದರೆ ಬಿಜೆಪಿ ಸರ್ಕಾರದಲ್ಲಿ ನೇಮಕವಾದ ಮೂರು ಅಕಾಡೆಮಿ ಅಧ್ಯಕ್ಷರನ್ನು ಕಾಂಗ್ರೆಸ್ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ವಜಾಗೊಳಿಸಿತ್ತು. 2014ರ ಫೆ.26ರಂದು ಮೂರು ಅಕಾಡೆಮಿಗಳಿಗೆ ಸಹಿತ ಎಲ್ಲ ಅಕಾಡೆಮಿಗೂ ಹೊಸ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು.
ಪದಚ್ಯುತ ಅಧ್ಯಕ್ಷರು ಹೈಕೋರ್ಟ್ ಮೊರೆ ಹೋಗಿರುವುದರಿಂದ ಮುಜುಗರ ತಪ್ಪಿಸಿಕೊಳ್ಳಲು ಸರ್ಕಾರ ಈಗ ಎಲ್ಲ ನೇಮಕವನ್ನು ರದ್ದುಗೊಳಿಸುವ ಕ್ರಮಕ್ಕೆ ಮುಂದಾಗಿದೆ. ವಾರ್ತಾ ಇಲಾಖೆ ಉಪ ಕಾರ್ಯದರ್ಶಿ ಸಿ.ಮಂಜುಳಾ ಗುರುವಾರ ಆದೇಶ ಹೊರಡಿಸಿದ್ದು, ಇಲಾಖೆ ನಿರ್ದೇಶಕರ ಮೂಲಕ ಅಕಾಡೆಮಿ ರಿಜಿಸ್ಟ್ರಾರ್‌ಗೆ ಶನಿವಾರ ಬಂದು ತಲುಪಿದೆ. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎಲ್. ಸಾಮಗ, ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಯ್ಯ ಶೆಟ್ಟಿ 2013ರ ಮೇ ತಿಂಗಳಲ್ಲಿ ಪದಚ್ಯುತಗೊಂಡಾಗ ಹೈಕೋರ್ಟ್‌ಗೆ ಹೋಗಿದ್ದರು.
ಕೊಡವ ಅಕಾಡೆಮಿ ಅಧ್ಯಕ್ಷರು ತಮ್ಮನ್ನು ಪದಚ್ಯುತ ಗೊಳಿಸುವ ಮುನ್ನವೇ ಹೈಕೋರ್ಟ್ ಮೊರೆ ಹೋಗಿದ್ದರಿಂದ ಅವರನ್ನು ಸರ್ಕಾರ ವಜಾ ಗೊಳಿಸಿರಲಿಲ್ಲ. ಪ್ರಕರಣ ಇತ್ಯರ್ಥವಾಗುವ ತನಕ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಜುಲೈಯಲ್ಲಿ ಸರ್ಕಾರಕ್ಕೆ ಸೂಚಿಸಿತ್ತು. 2014ರ ಫೆ.26ರಂದು ಎಲ್ಲ ಅಕಾಡೆಮಿ ಅಧ್ಯಕ್ಷರ ನೇಮಕವಾಗುವ ಸಂದರ್ಭ ಮೂರು ಅಕಾಡೆಮಿಗೂ ನೇಮಕ ಆಗಿತ್ತು. ವಿಚಾರಣೆ ಬಾಕಿ ಇರುವಾಗ ನೇಮಕ ಮಾಡಿದ್ದು ಹೈಕೋರ್ಟ್ ಅದೇಶ ಉಲ್ಲಂಘನೆ ಎಂದು ಮೂರು ಪದಚ್ಯುತ ಅಧ್ಯಕ್ಷರು ಹೈಕೋರ್ಟ್ ಗಮನಕ್ಕೆ ತಂದಿದ್ದರು. ಈ ಕುರಿತು ಮುಂದಿನ ವಾರ ಹೈಕೋರ್ಟ್ ವಿಚಾರಣೆ ನಡೆಯಲಿದೆ. ಹೈಕೋರ್ಟ್ ಬೀಸುವ ದೊಣ್ಣೆಯಿಂದ ತಪ್ಪಿಸಲು ಇದೀಗ ಸರ್ಕಾರ ಹೊಸದಾಗಿ ನೇಮಿಸಿದ ಮೂರು ಅಕಾಡೆಮಿ ಅಧ್ಯಕ್ಷರ ನೇಮಕ ರದ್ದು ಮಾಡಿದೆ. 'ಅಧ್ಯಕ್ಷರ ನೇಮಕ ರದ್ದುಗೊಳಿಸಿದ ಸರ್ಕಾರದ ಆದೇಶ ತಲುಪಿದೆ, ಇದನ್ನು ಅಕಾಡೆಮಿ ಅಧ್ಯಕ್ಷರಿಗೆ ಮುಟ್ಟಿಸಿದ್ದೇವೆ' ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಉಮರ್ ಯು.ಎಚ್. ತಿಳಿಸಿದ್ದಾರೆ.