ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಸಿಸ್ ಹಿಡಿತದತ್ತ ಬಾಗ್ದಾದ್ ; ಉಗ್ರರ ವಶದಲ್ಲಿರುವ ಎಲ್ಲ ಭಾರತೀಯರು ಸುರಕ್ಷಿತ

ಆಂತರಿಕ ಸಂಘರ್ಷದ ದಳ್ಳುರಿಯಲ್ಲಿ ಬೇಯುತ್ತಿರುವ ಇರಾಕ್‌ನಲ್ಲಿ ಪರಿಸ್ಥಿತಿ..

Vishwanath S
Updated On : 22 Jun 2014, 4:59 am

ಬಾಗ್ದಾದ್: ಆಂತರಿಕ ಸಂಘರ್ಷದ ದಳ್ಳುರಿಯಲ್ಲಿ ಬೇಯುತ್ತಿರುವ ಇರಾಕ್‌ನಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಣ್ಣಪುಟ್ಟ ನಗರಗಳನ್ನು ವಶಪಡಿಸಿಕೊಳ್ಳುತ್ತ ಸಾಗಿರುವ ಸುನ್ನಿ ಉಗ್ರರು ಬಾಗ್ದಾದ್ ಸನಿಹ ತಲುಪಿದ್ದಾರೆ. ಬಂಡುಕೋರರ ವಿರುದ್ಧ ಸೆಣೆಸಲು ಸೇನೆಯೊಂದಿಗೆ ನಾಗರಿಕರೂ ಕೈ ಜೋಡಿಸಿರುವುದರಿಂದ ಇರಾಕ್ ಅಕ್ಷರಶಃ ಯುದ್ಧಭೂಮಿಯಾಗಿ ಮಾರ್ಪಡುವ ಸ್ಥಿತಿ ನಿರ್ಮಾಣವಾಗಿದೆ.
ಸಿರಿಯಾ-ಇರಾಕ್ ಗಡಿಯಲ್ಲಿನ ಖೈಮ್ ಪಟ್ಟಣದ ಬಳಿ ನಡೆದ ಘನಘೋರ ಕಾಳಗದಲ್ಲಿ 30 ಸೈನಿಕರನ್ನು ಬಲಿ ತೆಗೆದುಕೊಂಡಿರುವ ಉಗ್ರರು, ಪಟ್ಟಣ ಸ್ವಾಧೀನಪಡಿಸಿಕೊಂಡಿದ್ದಾರೆ. ಅವರ ಗುರಿ ಈಗ ದೇಶದ ರಾಜಧಾನಿ ಮತ್ತು ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಬಾಗ್ದಾದ್‌ನಲ್ಲಿ ಆಧಿಪತ್ಯ ಸ್ಥಾಪಿಸುವುದು. ಆ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿಬಿಟ್ಟರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಆಗುವುದು ನಿಶ್ಚಿತ. ರಣೋತ್ಸಾಹದಿಂದ ಮುನ್ನುಗ್ಗುತ್ತಿರುವ ಬಂಡುಕೋರರು ಬಾಗ್ದಾದ್ ಪ್ರವೇಶದ್ವಾರಕ್ಕೆ ಕೇವಲ 40 ಮೈಲಿ (64.3 ಕಿ.ಮೀ) ದೂರದಲ್ಲಿದ್ದಾರೆ.
'ಮನೆ ಬಿಡಿ, ಜಿಹಾದ್ ಸೇರಿ' ಎಂದು ಉಗ್ರಗಾಮಿ ಸಂಘಟನೆ ಇಸಿಸ್ ನೀಡಿದ್ದ ಕರೆಗೆ ಪ್ರತಿಯಾಗಿ 'ದೇಶದ್ರೋಹಿಗಳನ್ನು ಹತ್ತಿಕ್ಕಲು ಹೋರಾಡಿ' ಎಂದು ಇರಾಕ್ ಸರ್ಕಾರ ಹಾಗೂ ಧಾರ್ಮಿಕ, ರಾಜಕೀಯ ಮುಖಂಡರು ನೀಡಿದ್ದ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ಯಾವುದೇ ಭಾಗದಲ್ಲಾದರೂ ಉಗ್ರರ ವಿರುದ್ಧ ಹೋರಾಡಲು ಸಿದ್ಧ ಎಂದು ಯುವಸಮುದಾಯ ಮುಂದೆ ಬಂದಿದೆ.
ಎಲ್ಲರೂ ಗೌರವಿಸುವ ಸರ್ಕಾರ: ಸರ್ವ ಜನಾಂಗಗಳನ್ನೂ ಒಳಗೊಂಡ ಹಾಗೂ ಎಲ್ಲ ಇರಾಕಿಗಳೂ ಗೌರವಿಸುವ ಸರ್ಕಾರ ಮಾತ್ರ ದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಬಲ್ಲದು ಎಂದು ಅಮೆರಿಕ ಶನಿವಾರ ಹೇಳುವ ಮೂಲಕ, ಪ್ರಧಾನಿ ನೌರಿ ಅಲ್ ಮಲಿಕಿ ಪದಚ್ಯುತಿಗೆ ಮತ್ತೊಮ್ಮೆ ಒತ್ತಡ ಹೇರಿದೆ. ಇರಾಕ್‌ಗೆ ಅಗತ್ಯ ಶಸ್ತ್ರಾಸ್ತ್ರ, ತರಬೇತಿ, ಮಾರ್ಗದರ್ಶನ ನೀಡುವುದಾಗಿಯೂ ವಾಷಿಂಗ್ಟನ್ ತಿಳಿಸಿದೆ.
ಆದರೆ, 'ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದೇವೆ' ಎಂದು ಮಲಿಕಿ ನಿಕಟವರ್ತಿ ಅಲಿ ಅಲ್-ಸಿಸ್ತಾನಿ ಹೇಳಿದ್ದಾರೆ. 328 ಸದಸ್ಯಬಲದ ಸಂಸತ್ತಿಗೆ ಏ.30ರಂದು ನಡೆದಿದ್ದ ಚುನಾವಣೆಯಲ್ಲಿ ಮಲಿಕಿ ನೇತೃತ್ವದ ಸ್ಟೇಟ್ ಆಫ್ ಲಾ ಮೈತ್ರಿಕೂಟ ಬಹುಮತ ಗಳಿಸಿತ್ತು. ಜೂ.30ರ ಒಳಗೆ ಹೊಸ ಸಂಸತ್‌ನ ಅಧಿವೇಶನ ನಡೆಯಬೇಕಿದೆ.

ಭಾರತೀಯರ ಸಾಮೂಹಿಕ ತೆರವು ಇಲ್ಲ
ಸದ್ಯ ಗಲಭೆಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ತೀವ್ರಗೊಳಿಸಿದೆ. ಇರಾಕ್‌ನ ಸುರಕ್ಷಿತ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯರನ್ನೂ ತೆರವುಗೊಳಿಸಿ ಕರೆ ತರುವ ಬಗ್ಗೆ ಆಲೋಚಿಸಿಲ್ಲ. ವೇತನ ಮತ್ತಿತರ ಕಾರಣಗಳಿಗಾಗಿ ಕೆಲವು ಭಾರತೀಯರು ಒತ್ತೆಯಾಳುಗಳಾಗಿರುವುದೂ ಗಮನಕ್ಕೆ ಬಂದಿದೆ. ಅಂತಹವರು ವಿದೇಶಾಂಗ ವ್ಯವಹಾರಗಳ ಇಲಾಖೆಯನ್ನು ಸಂಪರ್ಕಿಸಿದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಇರಾಕ್‌ನಲ್ಲಿರುವ ಭಾರತೀಯರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

 ಹೊರ ಬರಬೇಡಿ
ಇರಾಕ್ ಸರ್ಕಾರದ ನಿಯಂತ್ರಣ ಕಳೆದುಕೊಂಡಿರುವ ನಗರಗಳಲ್ಲಿ ನೆಲೆಸಿರುವ ಭಾರತೀಯರು ಮನೆಯಿಂದ ಹೊರ ಬರದೇ ಇರುವುದು ಉತ್ತಮ ಎಂದು ಭಾರತದಲ್ಲಿ ಇರಾಕ್ ರಾಯಭಾರಿ ಅಹ್ಮದ್ ತಹ್ಸೀನ್ ಅಹ್ಮದ್ ಬೆರ್ವಾರಿ ಮನವಿ ಮಾಡಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಲ್ಲಿನ ಭಾರತೀಯರನ್ನು ರಕ್ಷಿಸಲು ಇರಾಕ್ ಸರ್ಕಾರವೂ ಪ್ರಯತ್ನಿಸುತ್ತಿದೆ, ಭಾರತದ ಪ್ರಯತ್ನಗಳಿಗೂ ಅಗತ್ಯ ಸಹಕಾರ ನೀಡುತ್ತಿದೆ. ಮೊಸುಲ್‌ನಲ್ಲಿ ಅಪಹೃತ ಭಾರತೀಯರನ್ನು ಪಾರು ಮಾಡುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.ದೇಶದಲ್ಲಿ ಬಿಕ್ಕಟ್ಟು ಉಂಟಾಗಿದ್ದರೂ ಭಾರತಕ್ಕೆ ತೈಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಲಾರದು ಎಂದೂ ಬೆರ್ವಾರಿ ಭರವಸೆ ನೀಡಿದ್ದಾರೆ.

327 ಮಂದಿ ಮಾಹಿತಿ
ಇರಾಕ್‌ನಲ್ಲಿರುವ ತಮ್ಮ ರಾಜ್ಯದವರ ಮಾಹಿತಿ ಪಡೆಯಲು ಪಂಜಾಬ್ ಮತ್ತು ಹರ್ಯಾಣ ಸರ್ಕಾರಗಳು 24 ್ಢ 7 ಮಾಹಿತಿ ಕೇಂದ್ರ ತೆರೆದಿವೆ. ಪಂಜಾಬ್‌ನಲ್ಲಿ 200, ಹರ್ಯಾಣದಲ್ಲಿ 127 ಜನರ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಪಂಜಾಬಿಗಳನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿಯೇ ಕರೆತರಲಾಗುವುದು ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತಿಳಿಸಿದ್ದಾರೆ. ಪಂಜಾಬ್‌ನ 6 ಜನ, ತೀರ್ಥಯಾತ್ರೆಗೆ ತೆರಳಿದ್ದ ಮಧ್ಯಪ್ರದೇಶದ ದಂಪತಿ ಶನಿವಾರ ಸ್ವದೇಶಕ್ಕೆ ಮರಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement