ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತಮಿಳರಿಗಿರುವ ಬದ್ಧತೆ ನಮಗಿಲ್ಲ

ಕಾವೇರಿ ವಿಷಯದಲ್ಲಿ ತಮಿಳುನಾಡಿಗೆ ಇರುವ ಬದ್ಧತೆ ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲ...

Vishwanath S
Updated On : 22 Jun 2014, 1:08 am

ಬೆಂಗಳೂರು: ಕಾವೇರಿ ವಿಷಯದಲ್ಲಿ ತಮಿಳುನಾಡಿಗೆ ಇರುವ ಬದ್ಧತೆ ನಮ್ಮ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಷಾದಿಸಿದರು.
ಜೆಡಿಎಸ್ ಕಚೇರಿಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಲಲಿತಾ, ಕರುಣಾನಿಧಿ ಯಾರೇ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೂ ಕಾವೇರಿ ನೀರು ಪಡೆಯುವ ಸಲುವಾಗಿ ಖಚಿತ ನಿಲುವು ಮಂಡನೆ ಮಾಡುತ್ತಾರೆ. ನಮ್ಮಲ್ಲಿ ಇಂಥ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎಂದರು.
ನಮ್ಮ ರಾಜ್ಯದ ಮುಖ್ಯಮಂತ್ರಿ ಕಾವೇರಿ ವಿಷಯದಲ್ಲಿ ಹೆಚ್ಚಿನ ಜವಾಬ್ದಾರಿ ಹೊರಬೇಕು. ಯಾವುದೇ ಕಾರಣಕ್ಕೂ ನಮ್ಮ ರೈತರಿಗೆ ನೀರಿನ ವಂಚನೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕೇಂದ್ರ, ರಾಜ್ಯ, ತಮಿಳುನಾಡು ಪ್ರತಿನಿಧಿಗಳು ಸೌಹಾರ್ದ ಮಾತುಕತೆಗೆ ಕುಳಿತು ಕಾವೇರಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ರಾಜ್ಯಕ್ಕೆ ಅನ್ಯಾಯವಾಗದಂತೆ ಸರ್ಕಾರ ವಾದ ಮಂಡಿಸಬೇಕು ಎಂದರು.
ರೇಲ್ವೆ ದರ ಏರಿಕೆ ಹೊರೆ: ಕೇಂದ್ರ ಸರ್ಕಾರ ರೇಲ್ವೆ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರಿಗೆ ಹೊರೆಯಾಗುವಂತೆ ನಡೆದುಕೊಂಡಿರುವುದು ಸೂಕ್ತವಲ್ಲ. ರೈಲಿನಲ್ಲೇ ಜನಸಾಮಾನ್ಯರು ಹೆಚ್ಚು ಸಂಚರಿಸೋದು. ಇಂಥ ಜನರ ಮೇಲೆ ಹೊರೆ ಹೇರುವುದು ಸರಿಯಲ್ಲ ಎಂದರು.
ಸುರಕ್ಷತಾ ದೃಷ್ಟಿಯಿಂದ ರೈಲಿನ ಹಳೆಬೋಗಿಗಳನ್ನು ಬದಲಿಸುವ ಅಗತ್ಯವಿದೆ. ನಾನು ಪ್ರಧಾನಿಯಾಗಿದ್ದ  ಕಾಲದಲ್ಲೇ ಆರಂಭಗೊಂಡ ರಾಜ್ಯದ ರೇಲ್ವೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇವುಗಳನ್ನು ಪೂರ್ಣಗೊಳಿಸುವಂತೆ ಹಿಂದಿನ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಈಗ ನಮ್ಮ ರಾಜ್ಯದ ರೇಲ್ವೆ ಸಚಿವರೇ ಇದ್ದಾರೆ. ಇವರು ಪೂರ್ಣಗೊಳಿಸಲಿ ಎಂದು ಆಶಿಸಿದರು.
ರಾಜ್ಯಪಾಲರ ವಜಾ ವಿವಾದ: ಇನ್ನೇನು ಅಧಿಕಾರದ ಅವಧಿ ಮುಗಿದ ಕೂಡಲೇ ರಾಜ್ಯಪಾಲರು ತಾವೇ  ರಾಜಿನಾಮೆ ನೀಡುತ್ತಾರೆ. ಯಾವುದೇ ಸರ್ಕಾರಗಳು ಬರಲಿ ಅವರ ಆರು ವರ್ಷಗಳ ಅಧಿಕಾರಾವಧಿ ಸಂವಿಧಾನ ಬದ್ಧವಾಗಿ ಬಂದದ್ದು. ಅದಕ್ಕೂ ಮುಂಚೆ ರಾಜ್ಯಪಾಲರನ್ನು ವಜಾಗೊಳಿಸುವ ಮಾತು ಸಲ್ಲದು. ಈ ಬಗ್ಗೆ ವಿವಾದ ಬೇಡ ಎಂದರು.
ತ್ರಿಭಾಷಾ ಸೂತ್ರವೇ ಸೂಕ್ತ ಪರಿಹಾರ
ಭಾಷಾ ಸಮಸ್ಯೆ ಪರಿಹಾರಕ್ಕೆ ಸಂವಿಧಾನ ಬದ್ಧವಾಗಿಯೇ ಬಂದಿರುವ ತ್ರಿಭಾಷಾ ಸೂತ್ರವೇ ಸೂಕ್ತ. ಇದು ಎಲ್ಲ ರಾಜ್ಯಗಳಿಗೂ ಅನ್ವಯಿಸುವಂಥದ್ದು. ಆಯಾ ರಾಜ್ಯದಲ್ಲಿ ಆಯಾ ಭಾಷೆಯೇ ಪ್ರಥಮ ಮಾಧ್ಯಮ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ, ಇಂಗ್ಲಿಷ್ ದ್ವಿತೀಯ, ಹಿಂದಿ ತೃತೀಯ ಎಂಬ ತ್ರಿಭಾಷಾ ಸೂತ್ರದ ಸಮರ್ಪಕ ಜಾರಿಯಾಗುವುದು ಮುಖ್ಯ. ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನೆಯ ಅರ್ಜಿ ಏನಾಗುತ್ತದೆ ನೋಡೋಣ. ಈ ಬಗ್ಗೆ ವಿವಾದ ಬೇಡ. ಭಾಷೆ ವಿಷಯದಲ್ಲಿ ಮೊದಲು ನಮ್ಮೊಳಗಿನ  ಶತ್ರುಗಳನ್ನು ನಾಶ ಮಾಡಿಕೊಳ್ಳಬೇಕಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement