104ಕ್ಕೆ ಕರೆ ಮಾಡಿ, ನೇತ್ರದಾನ ಮಾಡಿ
ಶಿವಮೊಗ್ಗ: 108 ಆಂಬ್ಯುಲೆನ್ಸ್ ಸೇವೆ ಮಾದರಿಯಲ್ಲಿ ನೇತ್ರದಾನಕ್ಕಾಗಿ 104 ಟೋಲ್ ಫ್ರೀ ಸೇವೆ ರಾಜ್ಯದಲ್ಲಿ ಆರಂಭವಾಗಿದೆ.
ಕುಟುಂಬಸ್ಥರು, ಸ್ನೇಹಿತರು, ಬಂಧುಗಳು ಮೃತಪಟ್ಟ ಸಂದರ್ಭದಲ್ಲಿ ಮೃತರ ನೇತ್ರ ದಾನ ಮಾಡಲು ಸಹಾಯವಾಗುವಂತೆ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿರುವ ನೇತ್ರ ಭಂಡಾರಗಳ ಸಂಪರ್ಕ ಹೊಂದಿರುವಂತೆ ಈ ನೇತ್ರ ಸಹಾಯವಾಣಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ಮುಖ್ಯ ಆಡಳಿತ ಅಧಿಕಾರಿ ಗಾಯತ್ರಿ ಶಾಂತಾರಾಂ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಏಕೆ ಈ ಸಹಾಯವಾಣಿ?: ಅನೇಕರಿಗೆ ನೇತ್ರದಾನ ಮಾಡಬೇಕೆಂಬ ಆಶಯವಿದ್ದರೂ ಆಸೆ ಪೂರ್ಣಗೊಳ್ಳುವುದೇ ಇಲ್ಲ. ಇದಕ್ಕೆ ಸಂವಹನ ಕೊರತೆ, ಅಪಘಾತ ಸಂದರ್ಭ ಸೇರಿದಂತೆ ಮಾಹಿತಿ ಕೊರತೆಯೂ ಕಾರಣ. ಕೆಲವೊಮ್ಮೆ ನೇತ್ರದಾನಕ್ಕೆ ಒಪ್ಪಿಗೆಕೊಟ್ಟ ಸ್ಥಳವಲ್ಲದೆ ಬೇರೆ ಕಡೆ ವ್ಯಕ್ತಿ ಮೃತಪಟ್ಟಾಗ ಈ ಕಾರ್ಯ ಈಡೇರಿಸಲು ಕುಟುಂಬಸ್ಥರಿಗೆ ಕಷ್ಟಸಾಧ್ಯವಾಗಬಹುದು.
ಇಷ್ಟೇ ಅಲ್ಲದೇ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಆ ವ್ಯಕ್ತಿಯ ಕುಟುಂಬಕ್ಕೆ ನೇತ್ರದಾನ ಮಾಡಲು ಆಸೆ ಇದ್ದರೂ ನೇತ್ರ ಭಂಡಾರದ ಸಂಪರ್ಕ ಸಂಖ್ಯೆ ಹುಡುಕಾಟ ಕಷ್ಟವಾಗಬಹುದು. ಹೀಗಾಗಿ 104 ಸಾರ್ವತ್ರಿಕ ದೂರವಾಣಿ ಸಂಖ್ಯೆಯ ಉಚಿತ ಟೋಲ್ ವ್ಯವಸ್ಥೆ ಮಾಡಲಾಗಿದೆ.
ಕಾರ್ಯನಿರ್ವಹಣೆ: ಸರಾಸರಿ ನೂರು ಕಿಲೋಮೀಟರ್ ವ್ಯಾಪ್ತಿಗೊಂದರಂತೆ ರಾಜ್ಯದಲ್ಲಿ ನೇತ್ರ ಭಂಡಾರಗಳಿವೆ. ಇವುಗಳನ್ನು ಸಹಾಯವಾಣಿಗೆ ಲಿಂಕ್ ಮಾಡಲಾಗಿದೆ. ಯಾವ ಸ್ಥಳದಿಂದ 104 ಸಂಖ್ಯೆಗೆ ಕರೆ ಮಾಡಲಾಗುತ್ತದೋ ಅಲ್ಲಿಂದ 100 ಕಿಲೋಮೀಟರ್ ವ್ವ್ಯಾಪ್ತಿಯಲ್ಲಿರುವ ನೇತ್ರ ಭಂಡಾರಕ್ಕೆ ನೇರವಾಗಿ ಕರೆಯನ್ನು ವರ್ಗಾಯಿಸಲಾಗುತ್ತದೆ. ಅಲ್ಲಿನ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯೆ ನೀಡಿ ನೇತ್ರದಾನದ ಕುರಿತು ಮಾಹಿತಿ ನೀಡುವ ಜೊತೆಗೆ ಅಗತ್ಯ ಆಗಬೇಕಾದ ತಯಾರಿ ಮಾಡಿಕೊಳ್ಳುತ್ತಾರೆ.
ಉದಾಹರಣೆಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯನ್ನು ತೆಗೆದುಕೊಂಡರೆ, ಇಲ್ಲಿ ನೇತ್ರದಾನ ಸ್ವೀಕಾರಕ್ಕಾಗಿಯೇ ಎರಡು ವಿಶೇಷ ತಂಡ ದಿನದ 24 ಗಂಟೆ ಸರ್ವಸನ್ನದ್ಧವಾಗಿರುತ್ತದೆ. ನೇತ್ರ ಪಡೆದುಕೊಳ್ಳುವಂತೆ ದೂರವಾಣಿ ಕರೆಬರುತ್ತಿದ್ದಂತೆಯೇ ವೈದ್ಯರನ್ನೊಳಗೊಂಡ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ 20 ನಿಮಿಷಗಳಲ್ಲಿ ಮೃತ ವ್ಯಕ್ತಿಯ ನೇತ್ರವನ್ನು (ರೆಟಿನಾ) ಪಡೆದು ತೆರಳುತ್ತದೆ.
ವಿಟ್ನೆಸ್: ವಿಶೇಷವೆಂದರೆ ಶಿವಮೊಗ್ಗದಲ್ಲಿರುವ ಶಂಕರ ಕಣ್ಣಿನ ಆಸ್ಪತ್ರೆಯು ನೇತ್ರದಾನಕ್ಕೆ ವಿಟ್ನೆಸ್ ವ್ಯವಸ್ಥೆ ಮಾಡಿದೆ. ಯಾವ ವ್ಯಕ್ತಿ ತನ್ನ ನೇತ್ರಗಳನ್ನು ದಾನ ಮಾಡುತ್ತಾನೋ ಆತ ತನ್ನ ಅರ್ಜಿಯಲ್ಲಿ ವಿಟ್ನೆಸ್ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ. ಅರ್ಥಾತ್, ನೇತ್ರ ದಾನ ಮಾಡುವುದಾಗಿ ಅರ್ಜಿ ಬರೆದುಕೊಟ್ಟಿದ್ದನ್ನು ತನ್ನ ಹತ್ತಿರದ ಸಂಬಂಧಿ ಅಥವಾ ಸ್ನೇಹಿತರಿಗೆ ತಿಳಿಸಿರುತ್ತಾನೆ. ಹಾಗೆಯೇ ಅವರ ಹೆಸರು, ಸಂಬಂಧ, ದೂರವಾಣಿ ಸಂಖ್ಯೆ, ಇ-ಮೇಲ್, ಸಹಿ ಸಹ ನೇತ್ರ ಭಂಡಾರಕ್ಕೆ ನೀಡುತ್ತಾನೆ. ಹೀಗಾಗಿ ನೇತ್ರ ದಾನ ಮಾಡಿದ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ವಿಟ್ನೆಸ್ ನೀಡಿದ ವ್ಯಕ್ತಿ ಜಾಗೃತನಾಗಿ ಮೃತ ವ್ಯಕ್ತಿಯ ನೇತ್ರ ದಾನ ಮಾಡುವ ಆಸೆಯನ್ನು ಪೂರೈಸಲು ನೆರವಾಗಬಹುದು.
ಮಾರ್ಗದರ್ಶನ
ನೇತ್ರ ಭಂಡಾರ ಹಾಗೂ ನೇತ್ರ ಚಿಕಿತ್ಸಾಲಯಗಳ ನಿಯಂತ್ರಣ ಸಂಸ್ಥೆಯಾದ ಹೈದ್ರಾಬಾದ್ನಲ್ಲಿರುವ ಐ ಬ್ಯಾಂಕ್ ಅಸೋಸಿಯೇಷನ್ ಆಫ್ ಇಂಡಿಯಾದ ನಿರ್ದೇಶನದಂತೆ ವಿವಿಧ ರಾಜ್ಯಗಳಲ್ಲಿ ಟೋಲ್ ಫ್ರೀ ವ್ಯವಸ್ಥೆರೂಪಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಈಗಾಗಲೇ ಜಾರಿಯಾಗಿದೆ. ಅದೇ ರೀತಿ ಕರ್ನಾಟಕದಲ್ಲಿ 104 ಸೇವೆ ಜಾರಿಗೊಳಿಸಲಾಗಿದೆ ಎಂದು ಗಾಯತ್ರಿ ಶಾಂತಾರಾಂ ವಿವರಿಸಿದರು.
ಒಂದಷ್ಟು ಮಾಹಿತಿ
-ನೇತ್ರದಾನಕ್ಕೆ ವಯಸ್ಸು, ಲಿಂಗ, ಧರ್ಮದ ನಿರ್ಬಂಧವಿಲ್ಲ. ನೇತ್ರದಾನ ಮಾಡುವ ಇಚ್ಛೆಯನ್ನು ಹತ್ತಿರದ ಸಂಬಂಧಿಕರಿಗೆ ಮೊದಲೇ ತಿಳಿಸಬೇಕು.
-ರಕ್ತದ ಒತ್ತಡ, ಸಕ್ಕರೆ ಖಾಯಿಲೆ, ಕಣ್ಣಿನಲ್ಲಿ ಪೊರೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕ ಧರಿಸುವವರಾಗಿದ್ದರೂ ನೇತ್ರದಾನಕ್ಕೆ ಅಡ್ಡಿಯುಂಟಾಗುವುದಿಲ್ಲ.
-ವ್ಯಕ್ತಿಯ ಮರಣಾನಂತರ 6 ಗಂಟೆಯೊಳಗೆ ನೇತ್ರದಾನಕ್ಕೆ ಅವಕಾಶವಿದೆ. ಸಂಗ್ರಹಣೆ ನಂತರ ಒಂದು ವಾರದೊಳಗೆ ಅದನ್ನು ಅಗತ್ಯವಿರುವವರಿಗೆ ಅಳವಡಿಸಲಾಗುತ್ತದೆ.
- ನೇತ್ರದಾನಕ್ಕೆ ಕೇವಲ 20 ನಿಮಿಷ ಮಾತ್ರ. ಯಾವುದೇ ವಿಶೇಷ ಕೊಠಡಿಯ ಅವಶ್ಯಕತೆಯೂ ಇರುವುದಿಲ್ಲ. ಮೃತ ದೇಹ ಎಲ್ಲಿರುತ್ತದೋ ಅಲ್ಲಿಯೇ ನೇತ್ರವನ್ನು ಸ್ವೀಕರಿಸಲಾಗುತ್ತದೆ. ಮೃತ ದೇಹದ ಮುಖ ಕೂಡ ವಿಕಾರವಾಗುವುದಿಲ್ಲ.
-ನೇತ್ರದಾನದ ಕುರಿತು ಮಾಹಿತಿಗೆ 104 ಅಥವಾ 08182- 222123ಯನ್ನು ಸಂಪರ್ಕಿಸಬಹುದು.
ಶ್ರೀಕಾಂತ ಭಟ್