ಒಂದು ಲಕ್ಷಕ್ಕೆ ಟಿಇಟಿ ಪ್ರಶ್ನೆಪತ್ರಿಕೆ ಬಿಕರಿ!
ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪ್ರವೇಶ ಪರೀಕ್ಷೆಯ(ಟಿಇಟಿ) ಪ್ರಶ್ನೆಪತ್ರಿಕೆ...
ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಅರ್ಹತಾ ಪ್ರವೇಶ ಪರೀಕ್ಷೆಯ(ಟಿಇಟಿ) ಪ್ರಶ್ನೆಪತ್ರಿಕೆ ಬೆಲೆ ಬೆಂಗಳೂರಿನಲ್ಲಿ 1 ಲಕ್ಷ..!
ರಾಜ್ಯದಲ್ಲಿ ಮೊದಲ ಬಾರಿ ನಡೆದ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಈ ಸಂಬಂಧ ಆರೋಪಿ ನಿವೃತ್ತ ಶಿಕ್ಷಕ ಶಿವಕುಮಾರ(65), 10 ವಿದ್ಯಾರ್ಥಿಗಳು ಸೇರಿದಂತೆ 13 ಜನರನ್ನು ಸಿಸಿಬಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
10 ವಿದ್ಯಾರ್ಥಿಗಳ ಪ್ರವೇಶ ಪತ್ರವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಭಾನುವಾರ ನಡೆದ 2 ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಶನಿವಾರ ನಗರದಲ್ಲಿ 1 ಲಕ್ಷಕ್ಕೆ ಮಾರಾಟವಾಗುತ್ತಿದ್ದವು.
ನಂದಿನಿ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಶಿವಕುಮಾರ್ ಮನೆ ಬಳಿ ವಿದ್ಯಾರ್ಥಿಗಳು ಸೇರಿದ್ದು ಹಣ ನೀಡಿ ಪ್ರಶ್ನೆಪತ್ರಿಕೆ ಪಡೆಯುತ್ತ್ತಿದ್ದರು. ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಶಿವಕುಮಾರ್, ಸ್ನೇಹಿತ ಸೋಮಶೇಖರ್, ಚಾಲಕ ಹಾಗೂ 10 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಭಾನುವಾರ ಬೆಳಗ್ಗೆ ಪರೀಕ್ಷೆ ಆರಂಭವಾದ ಬಳಿಕ ಅಲ್ಲಿ ನೀಡಲಾಗಿದ್ದ ಪ್ರಶ್ನೆಪತ್ರಿಕೆಗೂ ಸೋರಿಕೆಯಾಗಿದ್ದವಕ್ಕೂ ಸಾಮ್ಯ ಇದೆ. ಆರೋಪಿಗಳ ವಿರುದ್ಧ ಐಪಿಸಿ 420, 120ಬಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ತಿಳಿಸಿದರು.
ಆರೋಪಿ ಪ್ರಶ್ನೆಪತ್ರಿಕೆಗಳನ್ನು ಕೊಳ್ಳುವ ವಿದ್ಯಾರ್ಥಿಗಳನ್ನು ಮಾತ್ರ ಕರೆಸಿಕೊಂಡು ಮನೆಯಲ್ಲೇ ಉತ್ತರ ಹುಡುಕಿಸುತ್ತಿದ್ದ. ಅಲ್ಲಿಂದ ವಿದ್ಯಾರ್ಥಿಗಳು ನೇರಪರೀಕ್ಷೆ ಹಾಲ್ಗೆ ಹೋಗುವಂತೆ ಮಾಡಿದ್ದ. ಪ್ರಶ್ನೆಪತ್ರಿಕೆ ತೆಗೆದುಕೊಂಡು ಹೋದರೆ ಬೇರೆಯವರಿಗೂ ಸೋರಿಕೆ ಆಗಿ ಆದಾಯ ಕುಸಿಯಬಹುದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದ.
-ಇದೇ ಕಸುಬು
ಬಂಧಿತ ಶಿವಕುಮಾರ್ 2008ರಿಂದ ದ್ವಿತೀಯ ಪಿಯು ಸೇರಿಶಿಕ್ಷಣ ಇಲಾಖೆ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುತ್ತಿದ್ದ. ಈತನ ವಿರುದ್ಧ 2008ರಲ್ಲಿ ವಿಜಯನಗರ ಠಾಣೆ, 2009ರಲ್ಲಿ ಮಲ್ಲೇಶ್ವರ, 2011ರಲ್ಲಿ ಗುಬ್ಬಿ ಹಾಗೂ 2013ರಲ್ಲಿ ತುಮಕೂರು ನ್ಯೂ ಎಕ್ಸ್ ಟೆನ್ಷನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಾಥಮಿಕ ತನಿಖೆ ವೇಳೆ ಆರೋಪಿ ಶಿವಕುಮಾರ್ ಕೊಪ್ಪಳ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ತಂದಿರುವುದಾಗಿ ತಿಳಿಸಿದ್ದಾನೆ. ಬೆಂಗಳೂರಿನಲ್ಲಿ ಮಾರಿರುವುದು ತಿಳಿದುಬಂದಿದೆ. ತನಿಖೆ ನಡೆಸಲಾಗುತ್ತಿದೆ.
- ಹೇಮಂತ್ ನಿಂಬಾಳ್ಕರ್ ಜಂಟಿ ಪೊಲೀಸ್ ಆಯುಕ್ತ
- ಕೊಪ್ಪಳ ಖಜಾನೆಯಿಂದ ಸೋರಿಕೆ
ಸೋರಿಕೆ ಮಾಡಿದ್ದ ಪ್ರಶ್ನೆಪತ್ರಿಕೆಗಳು ಕೊಪ್ಪಳ ಶಿಕ್ಷಣ ಇಲಾಖೆ ಖಜಾನೆಯಿಂದ ಬಂದಿದ್ದವು ಎನ್ನುವುದು ವಿಚಾರಣೆ ವೇಳೆ ತಿಳಿದಿದೆ. ಹೀಗಾಗಿ ಖಜಾನೆ ಭದ್ರತಾ ಸಿಬ್ಬಂದಿ, ಕಚೇರಿ ಸಿಬ್ಬಂದಿ ಸೇರಿ ಅಧಿಕಾರಿಗಳ ವಿರುದ್ಧ ತನಿಖೆ ಸಾಧ್ಯತೆ ಇದೆ.
- ಪರೀಕ್ಷೆ ಮುಂದೂಡಿಕೆಯೇ ಕಾರಣ?
ಜೂ.15ರಂದೇ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ, ಬೇರೆ ಬೇರೆ ಪರೀಕ್ಷೆಗಳು ಇದ್ದ ಕಾರಣ ಇಲಾಖೆ ಪರೀಕ್ಷೆಗಳನ್ನು ಜೂ.22ಕ್ಕೆ ಮುಂದೂಡಿತ್ತು. ಜೂನ್ 15ಕ್ಕೆ ಪರೀಕ್ಷೆ ನಿಗದಿಯಾಗಿದ್ದರಿಂದ ಪ್ರಶ್ನೆ ಪತ್ರಿಕೆಗಳು ಜಿಲ್ಲಾ ಖಜಾನೆಗಳಿಗೆ ರವಾನೆಯಾಗಿದ್ದವು. ಒಂದು ವಾರ ಅಲ್ಲಿದ್ದ ವೇಳೆ ಸೋರಿಕೆಯಾಗಿದೆ.
ಸಚಿವರ ಮೌನ
ಅರ್ಹತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿರುವುದು ವರದಿಯಾದಂತೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರನ್ನು ಸಂಪರ್ಕಿಸಲು 'ಕನ್ನಡಪ್ರಭ' ಸತತ ಪ್ರಯತ್ನ ನಡೆಸಿತು. ಅವರ ಆಪ್ತ ಸಹಾಯಕರು ಸೇರಿದಂತೆ ಯಾರನ್ನೇ ಸಂಪರ್ಕಿಸಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ. ಸಚಿವರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ, 'ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ' ಎಂದು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಟಿಇಟಿ ಅವಾಂತರ ಮಾಧ್ಯಮ ಅದಲು ಬದಲು!
ಚಿತ್ರದುರ್ಗ: ಆರಂಭದಿಂದಲೂ ಗೊಂದಲದ ಗೂಡಾಗಿರುವ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ಭಾನುವಾರ ಅಂತ್ಯಗೊಂಡರೂ ಪರೀಕ್ಷಾ ಮಾಧ್ಯಮದ ಗೊಂದಲ, ಗ್ರಾಮೀಣ ಅಭ್ಯರ್ಥಿಗಳಿಗೆ ತೊಂದರೆಗಳಿಂದ ಅವಾಂತರ ಸೃಷ್ಟಿ ಮಾಡಿದೆ.
ಇದೇ ಮೊದಲ ಬಾರಿಗೆ ಸರ್ಕಾರ ಆನ್ಲೈನ್ ಮುಖಾಂತರ ಅರ್ಜಿ ಪಡೆದಿದೆ. ಪ್ರವೇಶ ಪತ್ರ ಪಡೆದ ನಂತರ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯುವುದಾಗಿ ಅರ್ಜಿ ಸಲ್ಲಿಸಿದವರಿಗೆ ಇಂಗ್ಲಿಷ್ ಮಾಧ್ಯಮ, ಹಿಂದಿ ಆಯ್ಕೆ ಮಾಡಿಕೊಂಡವರಿಗೆ ಕನ್ನಡ ಪ್ರಶ್ನೆ ಪತ್ರಿಕೆ ಎನ್ನುವ ಗೊಂದಲ ಸೃಷ್ಟಿಯಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ ಈ ಗೊಂದಲಕ್ಕೆ ಸಂಬಂಧಿಸಿ ಪರಿಹಾರ ಸಾಧ್ಯವಿಲ್ಲ, ಅನಿವಾರ್ಯವಾಗಿ ಆಗಿರುವ ತೊಂದರೆಗಳನ್ನು ನೀವೇ ಒಪ್ಪಿಕೊಳ್ಳಬೇಕು, ಯಾವ ಭಾಷೆಯ ಪ್ರಶ್ನೆ ಪತ್ರಿಕೆ ದೊರೆಯುವುದೋ ಆ ಭಾಷೆಯಲ್ಲಿ ಉತ್ತರಿಸಬೇಕು. ಇನ್ನು 3 ತಿಂಗಳಲ್ಲಿ ಮತ್ತೆ ಅರ್ಜಿ ಕರೆಯಲಾಗುತ್ತದೆ. ಆಗ ಸಮಸ್ಯೆ ಆಗದಂತೆ ಅರ್ಜಿ ಹಾಕಿಕೊಳ್ಳಿ ಎಂದು ಹೇಳಿ ಕೈ ತೊಳೆದುಕೊಂಡಿತ್ತು.
ಕೊಪ್ಪಳದಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಗಿಲ್ಲ
ಕೊಪ್ಪಳ: ಕೊಪ್ಪಳದಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಶ್ನೆಪತ್ರಿಕೆ ಬಹಿರಂಗಗೊಂಡಿಲ್ಲ ಎಂದು ಡಿಡಿಪಿಐ ವೀರಣ್ಣ ಸ್ಪಷ್ಟಪಡಿಸಿದ್ದಾರೆ. ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿವೆ ಎಂಬ ವದಂತಿ ಜಿಲ್ಲೆಯಲ್ಲಿ ಅಭ್ಯರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿತ್ತು. ಖಜಾನೆಯಲ್ಲಿ ಬಿಗಿ ಭದ್ರತೆಯಲ್ಲಿಟ್ಟಿದ್ದ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿವೆ ಎಂಬ ಪ್ರಶ್ನೆ ಅಧಿಕಾರಿಗಳಲ್ಲಿ ಮೂಡಿತ್ತು. ಕೂಡಲೇ ಖಜಾನೆಗೆ ಭೇಟಿ ನೀಡಿದ ಶಿಕ್ಷಣ ಇಲಾಖೆ ಉಪನಿರ್ದೇಶಕ ವೀರಣ್ಣ ಪರಿಶೀಲನೆ ನಡೆಸಿದ ಬಳಿಕ ಕೊಪ್ಪಳದಲ್ಲಿ ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.