ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಸ್ತೂರಿ ರಂಗನ್ ವರದಿ ಜಾರಿಗೆ ಆತುರವಿಲ್ಲ: ಸಚಿವ ಪ್ರಕಾಶ್ ಜಾವಡೇಕರ್

Mainashree
Updated On : 22 Jun 2014, 10:33 am

ಕೊಲ್ಲಾಪುರ: ಪಶ್ಚಿಮ ಘಟ್ಟ ವ್ಯಾಪ್ತಿಯ ಜಿಲ್ಲೆಗಳ ಜನ ಕಸ್ತೂರಿ ರಂಗನ್ ವರದಿಯ ತೂಗುಕತ್ತಿ ವಿಚಾರದಲ್ಲಿ ಸದ್ಯಕ್ಕೆ ನಿರಾಳರಾಗಬಹುದು. ವರದಿ ಅನುಷ್ಠಾನಕ್ಕೆ ಅವಸರ ಮಾಡುವುದಿಲ್ಲ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಭಾನುವಾರ ಭರವಸೆ ನೀಡಿದ್ದಾರೆ. ವರದಿ ಜಾರಿಗೆ ನಮಗೇನೂ ಆತುರವಿಲ್ಲ. ಸಂಬಂಧಿಸಿದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೂ ಸಮಾಲೋಚನೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಯಾರೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ಸಚಿವರು ಆಶ್ವಾಸನೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ನಿಲುವು ಸ್ಪಷ್ಟ. ಪರಿಸರ ಬಲಿಕೊಟ್ಟು ಅಭಿವೃದ್ಧಿ ಸಾಧಿಸಲೂ ಬಯಸುವುದಿಲ್ಲ, ಪರಿಸರ ರಕ್ಷಣೆ ನೆಪದಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ಅಭಿವೃದ್ಧಿ ಯೋಜನೆಗಳ ಕಡತಗಳ ಮೇಲೆ ಕುಳಿತುಕೊಳ್ಳಲೂ ಇಚ್ಛಿಸುವುದಿಲ್ಲ ಎಂದರು. ಕರ್ನಾಟಕದ ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಸಂಸದರಾದ ಪ್ರತಾಪಸಿಂಹ (ಕೊಡಗು-ಮೈಸೂರು), ಶೋಭಾ ಕರಂದ್ಲಾಜೆ (ಉಡುಪಿ-ಚಿಕ್ಕಮಗಳೂರು), ನಳಿನ್‌ಕುಮಾರ್ ಕಟೀಲ್ (ದಕ್ಷಿಣ ಕನ್ನಡ), ಅನಂತಕುಮಾರ ಹೆಗಡೆ (ಉತ್ತರ ಕನ್ನಡ) ಅವರು ಜೂ.4ರಂದು ಜಾವಡೇಕರ್ ಅವರನ್ನು ಭೇಟಿ ಮಾಡಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸದಂತೆ ಮನವಿ ಮಾಡಿದ್ದರು. ಅಭಿವೃದ್ಧಿ ಕೆಲಸಗಳಿಗೆ ಈ ವರದಿಯೇ ಅಡ್ಡಿಯಾಗಲಿದೆ ಎನ್ನುವುದನ್ನೂ ಮನವರಿಕೆ ಮಾಡಿಕೊಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement