ಕಾಪಿ ಹೊಡೆಯಲು ಅನುಕೂಲ ಮಾಡಿಕೊಟ್ಟ ಶಿಕ್ಷಣ ಇಲಾಖೆ
ಧಾರವಾಡ: ಭಾನುವಾರ ನಡೆದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯ ಪ್ರಶ್ನೆಪತ್ರಿಕೆ ಶ್ರೇಣಿ ಕ್ರಮವಿಲ್ಲದ ಕಾರಣ ಅಭ್ಯರ್ಥಿಗಳಿಗೆ ನಕಲು ಮಾಡಲು ಅನುಕೂಲ ಮಾಡಿಕೊಟ್ಟಿತು. ನಗರದ ಹಲವು ಕೇಂದ್ರಗಳಲ್ಲಿ ನಡೆದ ಟಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಶ್ರೇಣಿ ಕ್ರಮ (ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಡೆಸುವ ಪ್ರಶ್ನೆಯ ಕ್ರಮ ಸಂಖ್ಯೆಯನ್ನು ಅದಲು-ಬದಲು ಮಾಡಿ ಕೊಡುವ ವ್ಯವಸ್ಥೆ) ಇರಲಿಲ್ಲ. ಎಲ್ಲ ಅಭ್ಯರ್ಥಿಗಳಿಗೂ ಕ್ರಮ ಸಂಖ್ಯೆ 1ರಿಂದ 150ರ ವರೆಗೆ ಒಂದೇ ತರನಾದ ಪ್ರಶ್ನೆಗಳನ್ನು ನೀಡಿದ್ದರಿಂದ ಅಭ್ಯರ್ಥಿಗಳು ಸರಳವಾಗಿ ನಕಲು ಮಾಡಲು ಶಿಕ್ಷಣ ಇಲಾಖೆಯೇ ಅವಕಾಶ ಮಾಡಿಕೊಟ್ಟಂತಾಯಿತು. ಅಲ್ಲದೆ, ಒಂದೇ ಬೆಂಚಿನಲ್ಲಿ ಇಬ್ಬರು ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ಬರೆಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ವರದಾನವಾಯಿತು. ಈ ಹಿಂದೆ ಶಿಕ್ಷಣ ಇಲಾಖೆ ಶಿಕ್ಷಕರಿಗೆ ನಡೆಸಿದ ಸಿಇಟಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಶ್ರೇಣಿ ('ಎ'ನಿಂದ 'ಎಫ್'ವರೆಗೆ) ವ್ಯವಸ್ಥೆ ಇತ್ತು. ಈ ವ್ಯವಸ್ಥೆಯಲ್ಲಿ ನಕಲು ಮಾಡುವುದು ಕಷ್ಟ. ಈ ಸಲ ಕೆಸಿಡಿ, ಜೆಎಸ್ಸೆಸ್ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಜೋರಾಗಿತ್ತು.
ಅಭ್ಯರ್ಥಿಗಳ ಆರೋಪ: ನಗರದ ರಾಜೀವಗಾಂಧಿ ಸಿಬಿಎಸ್‌ಸಿ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಪ್ರಶ್ನೆಪತ್ರಿಕೆ ಹಾಗೂ ಓಎಂಆರ್ ಶೀಟ್ ನೀಡಿದ್ದರಿಂದ ಅಭ್ಯರ್ಥಿಗಳು ಗೊಂದಲಕ್ಕೀಡಾದರು. ಶಿಕ್ಷಣ ಇಲಾಖೆಯೂ ಪ್ರಥಮ ಎರಡು ಬಾರಿ ಪರೀಕ್ಷೆ ಮುಂದೂಡಿ ಕೊನೆಗೆ ಭಾನುವಾರ ನಡೆಸಿತು. ಪರೀಕ್ಷಾ ಮೇಲ್ವಿಚಾರಕರಿಗೆ ಪೂರ್ವಸಿದ್ಧತೆ ತರಬೇತಿಗಳು ಇಲ್ಲದೆ ಗೊಂದಲ ಸೃಷ್ಟಿಯಾಗಿದೆ ಎಂದು ಅಭ್ಯರ್ಥಿಗಳು ಆರೋಪಿಸಿದರು.