ಕೇಶವಿನ್ಯಾಸಕಾರರಾದ ದಲಿತರು!
ತುಮಕೂರು: ಅಸ್ಪೃಶ್ಯರು ಎನ್ನುವ ಕಾರಣಕ್ಕೆ ತಲೆ ಕ್ಷೌರ ಮಾಡಲು ನಿರಾಕರಿಸಿದ್ದನ್ನೇ ಸವಾಲಾಗಿ ತೆಗೆದುಕೊಂಡ ದಲಿತರೆಲ್ಲರೂ ಹೇರ್ ಸ್ಟೈಲಿಸ್ಟ್‌ಗಳಾದ ಕಥೆ ಇದು! ಬಳ್ಳಾರಿಯ ಸಿರಗುಪ್ಪ ತಾಲೂಕಿನ ತಾಳೂರಿನಲ್ಲಿ ಇತ್ತೀಚೆಗೆ ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದು ಗೊತ್ತೋ ಇದೆ. ಅದೇ ರೀತಿ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬಿಸಲೇಹಳ್ಳಿಯ ಗ್ರಾಮದ ದಲಿತರಿಗೂ ಈ ಹಿಂದೆ ಕ್ಷೌರ ನಿರಾಕರಿಸಲಾಗಿತ್ತು. ಇದನ್ನು
ಸವಾಲಾಗಿ ತೆಗೆದುಕೊಂಡ ಗ್ರಾಮದ ದಲಿತರೆಲ್ಲಾ ತಮ್ಮ ಕೂದಲನ್ನು ತಾವೇ ಕತ್ತರಿಸಿಕೊಳ್ಳಲು ಆರಂಭಿಸಿದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ತಾವೇ ಹೇರ್ ಕಟ್ ಮಾಡಿಕೊಳ್ಳುತ್ತಿದ್ದುದನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡು ತಮ್ಮ ಕೂದಲು ಕತ್ತರಿಸುವ ಕಾಯಕ್ಕೆ ಮುಂದಾದ ದಲಿತರು ಈಗ ಹೇರ್ ಸ್ಟೈಲಿಸ್ಟ್‌ಗಳಾಗಿ ಮಾರ್ಪಟ್ಟಿದ್ದಾರೆ. ಟಿವಿ, ಸಿನಿಮಾಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಕ್ರೀಡಾಪಟುಗಳು, ಉದ್ಯಮಿಗಳು, ರಂಗಕರ್ಮಿಗಳು, ಹೋರಾಟಗಾರರ ತಲೆಕೂದಲಿನ ಸ್ಟೈಲ್‌ಗಳನ್ನು ಅಭ್ಯಸಿಸಿ ಅದೇ ರೀತಿಯ ಹೇರ್‌ಡಿಸೈನ್ ಮಾಡುವುದರಲ್ಲಿ ಸಿದ್ಧಹಸ್ತರಾಗಿದ್ದಾರೆ.
ಈ ಗ್ರಾಮದವರು ಮಾಡಿರುವ ಹೇರ್‌ಕಟ್‌ಗಳನ್ನು ನೋಡಿ ವೃತ್ತಿ ನಿರತರೆಲ್ಲಾ ಭೇಷ್ ಎಂದಿದ್ದಾರೆ. ಅಷ್ಟೇಕೆ ಕಾಲೇಜು ಹುಡುಗರುತಮ್ಮ ಕೂದಲನ್ನು ಡಿಸೈನ್ ಮಾಡಿಸಿಕೊಳ್ಳಲು ಈ ಗ್ರಾಮಕ್ಕೆ ಲಗ್ಗೆ ಇಡುತ್ತಿದ್ದಾರೆ. ಗ್ರಾಮದ ಹೊಸ ಕಾಲದ ಹುಡುಗರೆಲ್ಲಾ ಹೇರ್ ಸ್ಟೈಲಿಸ್ಟ್‌ಗಳಾಗಿ ಪರಿಣತಿ ಹೊಂದಿದ್ದಾರೆ. ದೊಡ್ಡ ವಿಜ್ಞಾನಿಗಳು, ಕ್ರಾಂತಿಕಾರಿಗಳ ತಲೆಕೂದಲನ್ನು ಥೇಟ್ ಅವರ ಹಾಗೆ ಡಿಸೈನ್ ಮಾಡುವಷ್ಟು ತಜ್ಞರಾಗಿದ್ದಾರೆ. ಗಮನ ಸೆಳೆಯುವ ಈ ಗ್ರಾಮದವರ ಕೇಶ ವಿನ್ಯಾಸವನ್ನು ಕಂಡು ಕಾಲೇಜು ಹುಡುಗರು, ಸಹಪಾಠಿಗಳು ಇವರ ಬಳಿಯೇ ಡಿಸೈನ್ ಮಾಡಿಸಿಕೊಳ್ಳಲು ಆರಂಭಿಸಿದರು. ತಲೆಕೂದಲು ವಿನ್ಯಾಸದಲ್ಲಿ ಈಗಾಗಲೇ ಪಳಗಿರುವ ಇವರೆಲ್ಲಾ ತರಹೇವಾರಿ ತಲೆಕೂದಲು ಡಿಸೈನ್‌ಗಳಲ್ಲಿ ಕಂಗೊಳಿಸುತ್ತಿದ್ದಾರೆ.
ಉಗಮ ಶ್ರೀನಿವಾಸ್