ಪ್ರಾಚೀನ ಕಾಲದ ಪ್ರವೇಶ ದ್ವಾರ ಪತ್ತೆ
ಕನ್ನಡಪ್ರಭ ವಾರ್ತೆ, ಗಂಗಾವತಿ, ಜೂ. 22
ಕೊಪ್ಪಳ ನಗರದ ಕೋಟೆ ಪ್ರದೇಶದಲ್ಲಿ ನಗರಸಭೆ ವತಿಯಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ವೇಳೆ ಬದಾಮಿ ಚಾಲುಕ್ಯರ ಕಾಲದ ಪ್ರವೇಶ ದ್ವಾರ ಪತ್ತೆಯಾಗಿದೆ. ಭೂಮಿ ಅಗೆಯುತ್ತಿದ್ದಾಗ ಮೂರು ಕಡೆ ಕಲ್ಲಿನ ಕಂಬಗಳುಳ್ಳ ಕಲ್ಲಿನ ಬಾಗಿಲು (ದ್ವಾರ ಬಾಗಿಲು) ದೊರೆತಿದೆ. ಐದು ಅಡಿ ಆಳದಲ್ಲಿ ಸಿಕ್ಕ ಈ ದ್ವಾರ ಏಳು ಅಡಿ ಎತ್ತರ, ಐದು ಅಡಿ ಅಗಲವಿದೆ.
ಕೊಪ್ಪಳ ಈ ಹಿಂದೆ ಕೋಪಣ ನಗರ ಎಂದು ಪ್ರಸಿದ್ಧಿ ಪಡೆದಿತ್ತು. ಬದಾಮಿ ಚಾಲುಕ್ಯರ ಆಡಳಿತಕ್ಕೆ ಒಳಪಟ್ಟಿತ್ತು. 8ನೇ ಶತಮಾನದಲ್ಲಿ ಕೋಟೆ ನಿರ್ಮಾಣಗೊಂಡಿದ್ದು, ಇಮ್ಮಡಿ ಪುಲಿಕೇಶಿ ಮಗ ವಿಜಯಾದಿತ್ಯ ಕೋಟೆ ನಿರ್ಮಿಸಿ ರಾಜ್ಯಭಾರ ಮಾಡಿದ್ದ. ಆಗ ರಕ್ಷಣೆಗಾಗಿ ಕೋಟೆ ನಿರ್ಮಿಸಿದ್ದು, ಅದಕ್ಕೆ ಭದ್ರವಾದ ದ್ವಾರ ಬಾಗಿಲು ನಿರ್ಮಿಸಲಾಗಿತ್ತು. ಈಗ ಅದು ಮಣ್ಣಿನಡಿ ಸಿಕ್ಕಿದೆ. ಇದೇ ರೀತಿ ಕೋಟೆಯ ನಾಲ್ಕು ದಿಕ್ಕುಗಳಲ್ಲೂ ದ್ವಾರಗಳಿರಬೇಕು ಎಂದು ಇತಿಹಾಸಕಾರರು ಹೇಳಿದ್ದಾರೆ.
ಪ್ರಸ್ತುತ ನಗರದ ಗಡಿಯಾರ ಕಂಬದ ಬಳಿ ಹಾಗೂ ಗವಿಮಠದ ರಸ್ತೆಯಲ್ಲೂ ದ್ವಾರಗಳಿವೆ. ಕಾತರಕಿ ರಸ್ತೆಯ ದ್ವಾರ ಬಾಗಿಲು ಅವಸಾನದ ಅಂಚಿನಲ್ಲಿದೆ.