ಬಂಡೀಪುರ ಹುಲಿ ಸಂರಕ್ಷಣೆಗೆ ಏರ್ಸೆಲ್ ನೆರವು
ಬೆಂಗಳೂರು: ಬಂಡೀಪುರ ಮೀಸಲು ಹುಲಿ ಸಂರಕ್ಷಣಾ ಕಾರ್ಯಪಡೆಗೆ ಈಗ ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾ ಸಂಘಟನೆಯ ಮೂಲಕ ಏರ್ಸೆಲ್ ಕಂಪನಿ ತನ್ನ ಬೆಂಬಲ ಘೋಷಿಸಿದೆ.
ಮೊದಲ ಹಂತದಲ್ಲಿ ಏರ್ಸೆಲ್, ಹುಲಿಗಳ ಸಂರಕ್ಷಣೆಗಾಗಿ ಬಂಡೀಪುರದಲ್ಲಿ ನಿಯೋಜನೆಗೊಂಡಿರುವ ವಿಶೇಷ ಕಾರ್ಯಪಡೆ ಸಿಬ್ಬಂದಿಗೆ ಆಂಡ್ರ್ಯಾಯ್ಡ್ ತಂತ್ರಜ್ಞಾನದ ಮೊಬೈಲ್ ಹಾಗೂ ರೈನ್ಕೋಟ್ ಒದಗಿಸಿದೆ. ಬಂಡೀಪುರದ ಜಂಗಲ್ ರೆಸಾರ್ಟ್ಸ್ ಸಭಾಂಗಣದಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಏರ್ಸೆಲ್ ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗದ ಮುಖ್ಯಸ್ಥೆ ಬೃಂದಾ ಮಲ್ಹೋತ್ರಾ, ಕಾರ್ಯಪಡೆ ಸಿಬ್ಬಂದಿಗೆ ಮೊಬೈಲ್, ರೈನ್ಕೋಟ್ ವಿತರಿಸಿದರು.
ವನ್ಯಜೀವಿ ವಿಭಾಗದ ಪ್ರಧಾನ ಸಂರಕ್ಷಣಾಧಿಕಾರಿ ವಿನಯ್ ಲೂಥ್ರಾ, ಹುಲಿ ಸಂರಕ್ಷಣೆ ಕಾರ್ಯಾಚರಣೆಗೆ ಏರ್ಸೆಲ್ ತನ್ನ ಬೆಂಬಲ ನೀಡಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕಾರ್ಪೊರೇಟ್ ವಲಯ, ಸರ್ಕಾರೇತರ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಕಾರ್ಯಪಡೆಯ ಜವಾಬ್ದಾರಿ ತೆಗೆದುಕೊಳ್ಳಬೇಕಿದೆ ಎಂದರು.
ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾ ಸರ್ಕಾರೇತರ ಸಂಸ್ಥೆಯ ಉಪಾಧ್ಯಕ್ಷೆ ತಾರಾಗಾಂಧಿ, ಅರಣ್ಯ ಸಂರಕ್ಷಣಾಧಿಕಾರಿ ಕಾಂತರಾಜು ಅರಸ್, ಜಂಗಲ್ ರೆಸಾಟ್ಸ್ ರ್ ನಿರ್ದೇಶಕ ವಿಜಯ್ ಮೋಹನ್ ರಾಜ್ ಭಾಗವಹಿಸಿದ್ದರು. ಏರ್ಸೆಲ್ ಕಂಪನಿಯ 'ನಮ್ಮ ಹುಲಿ ಉಳಿಸಿ' ಅಭಿಯಾನದ ಕುರಿತು ವೈಲ್ಡ್ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಸಂಚಾಲಕ ಜೋಶ್ ಮಾಹಿತಿ ನೀಡಿದರು.