ಮಗು ಹೆತ್ತ ಮರುದಿನವೇ ಪರೀಕ್ಷೆ ಬರೆದಳು ರೇಷ್ಮಾ ಬಾನು!
ಮಗುವಿಗೆ ಜನ್ಮ ನೀಡಿದ ಮರುದಿನವೇ ಬಾಣಂತಿಯೊಬ್ಬರು ಕರ್ನಾಟಕ ಶಿಕ್ಷಕರ...
ಶಿವಮೊಗ್ಗ: ಮಗುವಿಗೆ ಜನ್ಮ ನೀಡಿದ ಮರುದಿನವೇ ಬಾಣಂತಿಯೊಬ್ಬರು ಕರ್ನಾಟಕ ಶಿಕ್ಷಕರ ಅರ್ಹತಾ ಪ್ರವೇಶ ಪರೀಕ್ಷೆ(ಟಿಇಟಿ) ಬರೆದು ಅಚ್ಚರಿ ಮೂಡಿಸಿದ್ದಾರೆ!
ಭದ್ರಾವತಿ ನೆಹರೂ ನಗರದ ನಿವಾಸಿ ರೇಷ್ಮಾಬಾನು ಟಿಇಟಿ ತೆಗೆದುಕೊಂಡಿದ್ದರು. ಗರ್ಭವತಿಯಾಗಿದ್ದ ಅವರಿಗೆ ಪರೀಕ್ಷೆ ಹಿಂದಿನ ದಿನವಾದ ಶನಿವಾರ ಹೆರಿಗೆ ಬೇನೆ ಶುರುವಾಗಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಪರೀಕ್ಷೆ ಬರೆಯಲು ಸಾಧ್ಯವೇ ಇಲ್ಲದ ಸ್ಥಿತಿಯಲ್ಲಿ ಅವರಿದ್ದರು. ಆದರೂ ಛಲ ಬಿಡದ ರೇಷ್ಮಾ ಮಾತ್ರ ಭಾನುವಾರ ಆ್ಯಂಬುಲೆನ್ಸ್‌ನಲ್ಲೇ ಪರೀಕ್ಷಾ ಕೇಂದ್ರವಾದ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಾಗಪ್ಪ ಶ್ರೇಷ್ಠಿ ವಿಜ್ಞಾನ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾರೆ. ರೇಷ್ಮಾ ಪರಿಸ್ಥಿತಿ ಅರಿತ ಪರೀಕ್ಷಾ ಕೇಂದ್ರದ ಸಿಬ್ಬಂದಿ ಆಕೆಗೆ ಪರೀಕ್ಷೆ ಬರೆಯಲು ಕಾಲೇಜಿನ ಪ್ರಯೋಗಾಲಯದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಟ್ಟರು. ಅಲ್ಲಿ ಹಾಸಿಗೆ ಮೇಲೆ ಮಲಗಿಕೊಂಡೇ ರೇಷ್ಮಾ ಪರೀಕ್ಷೆ ಬರೆದರು. ಈ ವೇಳೆ ಅಲ್ಲಿಯವರೆಗೆ ಅವರ ಪತಿ ಮತ್ತು ಅತ್ತೆ ಮಗುವನ್ನು ಆ್ಯಂಬುಲೆನ್ಸ್‌ನಲ್ಲೇ ಇರಿಸಿಕೊಂಡು ನೋಡಿಕೊಳ್ಳುತ್ತಿದ್ದರು.ರೇಷ್ಮಾ ಇದ್ದ ಪರಿಸ್ಥಿತಿಯಲ್ಲಿ ಪರೀಕ್ಷೆ ಬರೆಯುವುದು ಅಸಾಧ್ಯವಾಗಿತ್ತು. ಆದರೂ ಪರೀಕ್ಷೆ ಬರೆಯಲೇಬೇಕೆಂದು ತೀರ್ಮಾನಿಸಿದ್ದರು.
ಮತ್ತೆ ಯಾವಾಗ ಟಿಇಟಿ ಪರೀಕ್ಷೆ ಬರುತ್ತದೆಯೋ ಗೊತ್ತಿಲ್ಲ. ಹಾಗಾಗಿ ಪರೀಕ್ಷೆ ಬರೆಯಲೇಬೇಕೆಂದು ನನ್ನ ಪತ್ನಿ ಹಠ ಹಿಡಿದರು. ಹಾಗಾಗಿ ಒಪ್ಪಿಕೊಂಡೆ. ಅವಳ ಪ್ರಯತ್ನ ಖುಷಿಯಾಗಿದೆ.
- ತೌಫಿಕ್ ಅಹ್ಮದ್, ರೇಷ್ಮಾಬಾನು ಪತಿ