ಮೂವರು ಅಂತಾರಾಜ್ಯ ಚೋರರ ಬಂಧನ
ಮಡಿಕೇರಿ: ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರಾಜ್ಯ ಚೋರರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ. ಸೋಮವಾರಪೇಟೆ ಬಳಿಯ ಚೌಡ್ಲು ಗ್ರಾಮದ ಎಂ.ಎಸ್. ಶರತ್ ಕುಮಾರ್ (23), ವಿರಾಜಪೇಟೆ ಅರಸು ನಗರದ ಪಿ.ಎನ್. ಪ್ರಸಾದ್ (41) ಮತ್ತು ಪುತ್ತೂರು ದರ್ಬೆಯ ರವಿಕುಮಾರ್ ಅಲಿಯಾಸ್ ಪುಟ್ಟ ಬಂಧಿತರು. 4 ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಹಲವು ಮನೆ ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜೂ.10 ರಂದು ಮಡಿಕೇರಿ ಬಳಿಯ ತಾಳತ್ತಮನೆಯಿಂದ ವಸಂತ ಕುಮಾರ್ಗೆ ಸೇರಿದ್ದ ಬೈಕ್ ಕಳವಾಗಿತ್ತು. ಪ್ರಕರಣದ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠ ಎಂ.ಎನ್. ಅನುಚೇತ್ ಸೂಚನೆಯಂತೆ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಆರ್. ಸತೀಶ್ ಕುಮಾರ್ ವಹಿಸಿಕೊಂಡರು. ಆರೋಪಿಗಳು ಪುತ್ತೂರು, ಹಾಸನದಲ್ಲೂ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.