ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪ್ರತಿಷ್ಠಿತ ಸ್ಕಾಚ್ ಸ್ವರ್ಣ ಪ್ರಶಸ್ತಿ
ಬೆಳ್ತಂಗಡಿ: ಬಡವರ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ 2014ನೇ ಸಾಲಿನ ರಾಷ್ಟ್ರಮಟ್ಟದ ಪ್ರತಿಷ್ಠಿತ ಸ್ಕಾಚ್ ಆರ್ಥಿಕ ಸೇರ್ಪಡೆ ಸ್ವರ್ಣ ಪ್ರಶಸ್ತಿ ದೊರೆತಿದೆ.
ದೆಹಲಿಯ ಇಂಡಿಯಾ ಹ್ಯಾಬಿಟೆಟ್ ಸೆಂಟರ್‌ನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್. ಮಂಜುನಾಥ್ ಅವರು, ಸಂಸದೆ ಮೀನಾಕ್ಷಿ ಲೇಖಿ ಮತ್ತು ದೇಶದ ಮಾಜಿ ಮಹಾಲೇಖಪಾಲ ವಿನೋದ್ ರೈ ಅವರಿಂದ ಪ್ರಶಸ್ತಿ ಪತ್ರ ಮತ್ತು ಫಲಕ ಸ್ವೀಕರಿಸಿದರು. ಬಳಿಕ ಮಾತನಾಡಿದ ಮಂಜುನಾಥ್, ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ದೂರದೃಷ್ಟಿಯ ಫಲವಾಗಿ ಇಂದು ರಾಜ್ಯದ 31 ಲಕ್ಷಕ್ಕೂ ಅಧಿಕ ಕುಟುಂಬಗಳು ಆರ್ಥಿಕ ಕ್ಷೇತ್ರದ ಮುಖ್ಯ ವಾಹಿನಿಗೆ ಬಂದಿವೆ ಎಂದ ಅವರು, ಹೆಗ್ಗಡೆ ಕನಸನ್ನು ನನಸುಗೊಳಿಸಿದ 16,000 ಕಾರ್ಯಕರ್ತರಿಗೂ, ಯೋಜನೆಯ ಎಲ್ಲ ಟ್ರಸ್ಟಿಗಳಿಗೂ ಈ ಪ್ರಶಸ್ತಿಯನ್ನು ಸಮರ್ಪಿಸಿದರು.
ಕೆನರಾ ಬ್ಯಾಂಕ್ ಅಧ್ಯಕ್ಷ ಆರ್.ಕೆ. ದುಬೆ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಯುಕೋ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, 30ಕ್ಕೂ ಮಿಕ್ಕಿದ ಗ್ರಾಮೀಣ ಬ್ಯಾಂಕುಗಳ ಅಧ್ಯಕ್ಷರು, ವಿಮಾ ಕಂಪನಿಗಳ ಅಧ್ಯಕ್ಷರು, ಸಿಡ್ಬಿ ಸಂಸ್ಥೆಯ ಆಡಳಿತ ನಿರ್ದೇಶಕ ಮೇನಿ, ನಬಾರ್ಡ್‌ನ ಮುಖ್ಯ ಮಹಾಪ್ರಬಂಧಕರು ಇದ್ದರು.