ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುನ್ನಿ ಬಂಡರಿಗೆ ಭಾರತೀಯರೇ ಗುರಾಣಿ?

ವಶದಲ್ಲಿರುವ 39 ಭಾರತೀಯ ಕಾರ್ಮಿಕರನ್ನೇ ಎದುರಿಟ್ಟುಕೊಂಡು ಮುಂದಿನ ನಡೆಗೆ ಸುನ್ನಿ...

Mainashree
Updated On : 23 Jun 2014, 5:45 am

ನವದೆಹಲಿ: ವಶದಲ್ಲಿರುವ 39 ಭಾರತೀಯ ಕಾರ್ಮಿಕರನ್ನೇ ಎದುರಿಟ್ಟುಕೊಂಡು ಮುಂದಿನ ನಡೆಗೆ ಸುನ್ನಿ ಬಂಡುಕೋರರು ತೀರ್ಮಾನಿಸಿದ್ದಾರೆ. ಇರಾಕ್ ಅಥವಾ ಅಮೆರಿಕ ಸೇನಾ ದಾಳಿಗೆ ಮುಂದಾದರೆ ಅಪಹೃತರನ್ನು ಗುರಾಣಿಯಾಗಿ ಬಳಸಿಕೊಳ್ಳುವುದು ಅವರ ಇರಾದೆ.
ಅಪಹರಣಕ್ಕೆ ಒಳಗಾಗಿ ತಪ್ಪಿಸಿಕೊಂಡು ಬಂದಿರುವ ಹರ್ಜಿತ್ ಸಿಂಗ್ ಇಂಥದ್ದೊಂದು ವಿಚಾರವನ್ನು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳ ಬಳಿ ಹೇಳಿದ್ದಾರೆ.

ಅಪಹರಣಕಾರರನ್ನು ಶಸ್ತ್ರಾಸ್ತ್ರ ಸಾಗಿಸುವ ಕಾರ್ಯಕ್ಕೆ ಮತ್ತು ಅಡುಗೆ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದಾರೆ ಹರ್ಜಿತ್. ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರಕಾರ, ಹರ್ಜಿತ್ ಇನ್ನೂ ಅಪಹರಣದ ಆಘಾತದಿಂದ ಹೊರಬಂದಿಲ್ಲ. ಅಪಹೃತ ಭಾರತೀಯರನ್ನು ಬಂಡುಕೋರರು ಗುರಾಣಿಯಾಗಿ ಬಳಸಿಕೊಳ್ಳಬಹುದು ಎನ್ನುವುದು ಅವರ ತರ್ಕ ಮಾತ್ರ. ಅಪಹರಣಕಾರರಿಂದ ಈವರೆಗೆ ಯಾವುದೇ ಬೇಡಿಕೆ ಬಂದಿಲ್ಲ. ಅವರ ವಶದಲ್ಲಿರುವವರ ಬಿಡುಗಡೆ ಸಂಬಂಧ ಭಾರತ ಇರಾಕ್‌ನಲ್ಲಿರುವ ಅಂತಾರಾಷ್ಟ್ರೀಯ ರೆಡ್ ಕ್ರೆಸೆಂಟ್, ಸೌದಿ ಅರೇಬಿಯಾ ಮತ್ತಿತರ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ.

ವಿದೇಶಾಂಗ ವ್ಯವಹಾರಗಳ ಇಲಾಖೆ ಅಪಹೃತ ಭಾರತೀಯರನ್ನು ಸಂಪರ್ಕಿಸುವಲ್ಲಿ ಶನಿವಾರ ಯಶಸ್ವಿಯಾಗಿದೆ. 'ಅವರಾರಿಗೂ ತೊಂದರೆಯಾಗಿಲ್ಲ. ಬಂಡುಕೋರರು ಎಲ್ಲರಿಗೂ ಆಹಾರ ನೀಡುತ್ತಿದ್ದಾರೆ. ಆದರೆ ಅವರ ಭದ್ರತೆ ಕುರಿತು ಏನನ್ನೂ ಹೇಳಲಾಗದು' ಎಂದು ಇಲಾಖೆ ವಕ್ತಾರ ಸೈಯ್ಯದ್ ಅಕ್ರಬುದ್ದೀನ್ ಹೇಳಿದ್ದಾರೆ. ಬಂಡುಕೋರರು ನಿತ್ಯವೂ ತಮ್ಮ ತಾಣ ಬದಲಿಸುತ್ತಿರುವುದರಿಂದ ಅಪಹೃತರೊಂದಿಗೆ ನಿರಂತರ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ. ಅಲ್ಲದೆ ಸುನ್ನಿಗಳು ತಮ್ಮ ಸ್ವಾಧೀನದಲ್ಲಿಯೇ ಇರುವ ಮೊಸುಲ್ ಪಟ್ಟಣದ ಸುತ್ತಮುತ್ತವೇ ಇರುವುದರಿಂದ ಬೇರಾವುದೇ ರೀತಿಯ ಕಾರ್ಯಾಚರಣೆ ಕೈಗೊಳ್ಳುವುದೂ ಅಸಾಧ್ಯ ಎಂದು ತಿಳಿಸಿದ್ದಾರೆ.

ಬಂಡುಕೋರರ ಮೇಲುಗೈ
ಇರಾಕ್‌ನ ಉತ್ತರ ಪ್ರಾಂತ್ಯದಲ್ಲಿ ಬಹುತೇಕ ಮೇಲುಗೈ ಸಾಧಿಸಿದ್ದ ಸುನ್ನಿ ಬಂಡುಕೋರರು ಈಗ ಪಶ್ಚಿಮ ಪ್ರಾಂತ್ಯದಲ್ಲೂ ಹಿಡಿತ ಬಿಗಿಗೊಳಿಸುತ್ತಿದ್ದಾರೆ. ಶನಿವಾರ ಖೈಮಾ ಪಟ್ಟಣ ವಶಪಡಿಸಿಕೊಂಡಿದ್ದ ಸುನ್ನಿಗಳು ರಾವಾ, ಅನಾ, ಹುಸಯ್‌ಬಾ ಪಟ್ಟಣಗಳನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇವೆಲ್ಲವೂ ಸಿರಿಯಾ-ಇರಾಕ್ ಹೆದ್ದಾರಿಯಲ್ಲಿವೆ.
ಹುಸಯ್‌ಬಾ ರಾಜಧಾನಿ ಬಾಗ್ದಾದ್‌ಗೆ ಸನಿಹದಲ್ಲಿದೆ. ರಾವಾ ಬಳಿಯ ಪ್ರಮುಖ ಜಲಾಶಯವೊಂದನ್ನು ಧ್ವಂಸಗೊಳಿಸುವ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ. ಬಂಡುಕೋರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ 11 ಸುನ್ನಿಗಳು, 20 ಯೋಧರು ಸಾವನ್ನಪ್ಪಿದ್ದಾರೆ ಎಂದು ಇರಾಕ್ ಸೇನಾಧಿಕಾರಿಗಳು ಹೇಳಿಕೊಂಡಿದ್ದಾರೆ. ಸಮಗ್ರ ಇರಾಕ್‌ನ ಪ್ರತಿಪಾದಕ ಸಂಘಟನೆಗಳ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಬಾಗ್ದಾದ್‌ನಲ್ಲಿ ಪಥಸಂಚಲನ ನಡೆಸಿ ತಮ್ಮ ಬಲ ಪ್ರದರ್ಶಿಸಿದ್ದಾರಲ್ಲದೆ ಅಮೆರಿಕ ಭದ್ರತಾ ಸಲಹೆಗಾರರನ್ನು ಕಳಿಸುವುದನ್ನು ಖಂಡಿಸಿದರು. 'ನಮಗೆ ಅಮೆರಿಕ ಸೇರಿದಂತೆ ಬಾಹ್ಯ ಶಕ್ತಿಗಳ ನೆರವಿನ ಅಗತ್ಯವಿಲ್ಲ. ಸುನ್ನಿಗಳು, ಶಿಯಾಗಳು ಎಲ್ಲರನ್ನೂ ನಾವು ಸ್ವತಂತ್ರಗೊಳಿಸುತ್ತೇವೆ' ಎಂದು ಘೋಷಿಸಿದರು.

ನಿರಾಶ್ರಿತರ ಸಂಖ್ಯೆ ಹತ್ತು ಲಕ್ಷ!
ಶಿಯಾ-ಸುನ್ನಿಗಳ ನಡುವಿನ ಆಂತರಿಕ ಸಂಘರ್ಷ ಸ್ಫೋಟಗೊಂಡು ಯುದ್ಧ ವಾತಾವರಣ ನಿರ್ಮಾಣವಾದ ಬಳಿಕ ಇರಾಕ್‌ನಲ್ಲಿ ಮನೆ, ಉದ್ಯೋಗ ಕಳೆದುಕೊಂಡು ನಿರಾಶ್ರಿತರಾದವರ ಸಂಖ್ಯೆ ಹತ್ತು ಲಕ್ಷ ದಾಟಿದೆ ಎಂದು ವಿಶ್ವಸಂಸ್ಥೆ ಅಂದಾಜು ಮಾಡಿದೆ. ಜೂನ್ 10ರಂದು ಮೊಸುಲ್ ಪಟ್ಟಣ ಸುನ್ನಿ ಬಂಡುಕೋರರ ವಶವಾದ ಬಳಿಕ ಪಲಾಯನಗೈದವರ ಸಂಖ್ಯೆಯೇ 8 ಲಕ್ಷ! ಸಂಘರ್ಷ ಮುಂದುವರಿದರೆ ನಿರಾಶ್ರಿತರ ಸಂಖ್ಯೆ ಇನ್ನೂ ಹೆಚ್ಚಲಿದೆ.


ಸಂಬಳ ವಿಚಾರದಲ್ಲಿ ಅಸಹಾಯಕ
ಇರಾಕ್‌ನಲ್ಲಿರುವ ಭಾರತೀಯರು ಸ್ವದೇಶಕ್ಕೆ ಮರಳಲು ಇಚ್ಛಿಸಿದರೆ ಅಗತ್ಯ ನೆರವು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ತಿಳಿಸಿದೆ. ಉದ್ಯೋಗದಾತರ ಸ್ವಾಧೀನದಲ್ಲಿರುವ ಪಾಸ್‌ಪೋರ್ಟ್‌ಗಳನ್ನು ದೊರಕಿಸಿಕೊಡುವುದು, ಪ್ರಯಾಣಕ್ಕೆ ವ್ಯವಸ್ಥೆ ಮಾಡುವುದು ಸೇರಿದಂತೆ ಯಾವುದೇ ನೆರವು ನೀಡಲಾಗುವುದು. ಆದರೆ ನೇಮಕಾತಿ ಒಪ್ಪಂದದ ಷರತ್ತುಗಳಂತೆ ಅವರ ವೇತನವನ್ನು ಮುಟ್ಟುಗೋಲು ಹಾಕಿಕೊಂಡರೆ ಆ ವಿಚಾರದಲ್ಲಿ ಸರ್ಕಾರ ಏನೂ ಮಾಡುವಂತಿಲ್ಲ ಎಂದು ಇಲಾಖೆ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement