'ಅಭಿನೇತ್ರಿ' ನಿರಾತಂಕ
ನಟಿ ಪೂಜಾ ಗಾಂಧಿ ನಿರ್ಮಾಣದ 'ಅಭಿನೇತ್ರಿ' ಚಿತ್ರದ ಚಿತ್ರೀಕರಣಕ್ಕೆ ಹೈಕೋರ್ಟ್..
ಬೆಂಗಳೂರು: ನಟಿ ಪೂಜಾ ಗಾಂಧಿ ನಿರ್ಮಾಣದ 'ಅಭಿನೇತ್ರಿ' ಚಿತ್ರದ ಚಿತ್ರೀಕರಣಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಪೂಜಾ ಗಾಂಧಿ ನಟಿಸಿ ನಿರ್ಮಿಸುತ್ತಿರುವ ಅಭಿನೇತ್ರಿ ಚಿತ್ರದ ಚಿತ್ರೀಕರಣ ಹಾಗೂ ಬಿಡುಗಡೆಗೆ ಅಧೀನ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಇದನ್ನು ಪ್ರಶ್ನಿಸಿ ಪೂಜಾ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ.ನಾಗರತ್ನ ಅವರ ಏಕಸದಸ್ಯ ಪೀಠ, ಚಿತ್ರೀಕರಣ ಪೂರ್ಣಗೊಳಿಸಲು ಹಸಿರು ನಿಶಾನೆ ನೀಡಿದೆ. ಬಾಕಿ ಇರುವ ಚಿತ್ರೀಕರಣವನ್ನು ಜೂ.30ರೊಳಗೆ ಮುಗಿಸಬೇಕು ಹಾಗೂ ಚಿತ್ರದ ಪೂರ್ತಿ ವಿಡಿಯೋವನ್ನು ಕತ್ತರಿಸದೇ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಧೀನ ನ್ಯಾಯಾಲಯವು ಮುಂದಿನ 3 ತಿಂಗಳೊಳಗೆ ಚಿತ್ರದ ವಿಡಿಯೋ ಹಾಗೂ ಭಾಗ್ಯ ಕೃಷ್ಣಮೂರ್ತಿಯವರ ಪುಸ್ತಕ ಪರಿಶೀಲಿಸಿ ಅಂತಿಮ ನಿರ್ಧಾರ ಪ್ರಕಟಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. 'ಅಭಿನೇತ್ರಿ' ಚಿತ್ರವನ್ನು 'ಅಭಿನೇತ್ರಿ ಅಂತರಂಗ' ಕಾದಂಬರಿ ಆಧರಿಸಿ ನಿರ್ಮಿಸಲಾಗಿದೆ ಎನ್ನುವುದು ಭಾಗ್ಯ ಕೃಷ್ಣಮೂರ್ತಿಯವರ ಆರೋಪವಾಗಿತ್ತು.