ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಟಿಇಟಿ ಮರು ಪರೀಕ್ಷೆ ಇಲ್ಲ

Mainashree
Updated On : 23 Jun 2014, 10:09 am

ವಿಧಾನ ಪರಿಷತ್: ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಕುರಿತಂತೆ 'ಕನ್ನಡಪ್ರಭ' ವರದಿಯನ್ನು ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ವಿಧಾನಪರಿಷತ್‌ನಲ್ಲಿ ಪ್ರಸ್ತಾಪಿಸಿದರು.
ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ಆರೋಪಿ ಶಿವಕುಮಾರ್ ಕಳೆದ 6 ವರ್ಷದಿಂದ ಸತತವಾಗಿ ಪ್ರಶ್ನೆಪತ್ರಿಕೆ ಬಹಿರಂಗಗೊಳಿಸುತ್ತಿದ್ದಾನೆ. ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಲಾಖೆ ವಿಫಲವಾಗಿದೆ ಎಂದು ಶೂನ್ಯವೇಳೆಯಲ್ಲಿ ನಾರಾಯಣಸ್ವಾಮಿ ಆರೋಪಿಸಿದರು. ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದಾರೆ. ಪರೀಕ್ಷೆಯನ್ನು ಪೂರ್ವತಯಾರಿಯಿಲ್ಲದೇ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರುಪರೀಕ್ಷೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧಿಸಿ ಯಾವುದೇ ಅಭ್ಯರ್ಥಿ ಅಥವಾ ಕೇಂದ್ರಗಳಿಂದ ದೂರು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸುವ ಯಾವುದೇ ಸಾಧ್ಯತೆಯಿಲ್ಲ. ಆದಾಗ್ಯೂ ತನಿಖೆಯ ವಿವರ ದೊರೆತ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಆರೋಪಿ ಶಿವಕುಮಾರ್ ನಿವೃತ್ತ ಶಿಕ್ಷಕನಾಗಿರಬಹುದು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಶಿಕ್ಷಣ ಇಲಾಖೆಯ ಪಾತ್ರವಿಲ್ಲ. ಯಾವುದೇ ಅಧಿಕಾರಿಗಳು ಭಾಗಿಯಾಗಿಲ್ಲ. ಈತನ ವಿರುದ್ಧ ಇನ್ನಷ್ಟು ಪ್ರಕರಣಗಳಿರುವುದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಿಮ್ಮನೆ ಹೇಳಿದರು. ಟಿಇಟಿ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿ ಪೊಲೀಸ್ ತನಿಖೆಯ ಜತೆಗೆ ಇಲಾಖಾ ವಿಚಾರಣೆ ನಡೆಸುವಂತೆ ಈಗಾಗಲೇ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಿಮ್ಮನೆ ಭರವಸೆ ನೀಡಿದರು.

10 ದಿನಗಳಲ್ಲಿ ಪು ಸ್ತಕ ಪೂರೈಕೆ
ಪಿಯು ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗಿರುವುದು ನಿಜ. ಇನ್ನು 10 ದಿನಗಳಲ್ಲಿ ಎಲ್ಲ ಪುಸ್ತಕಗಳನ್ನು ಪೂರೈಸಲಾಗುತ್ತದೆ ಎಂದು ಸಚಿವ ಕಿಮ್ಮನೆ ರತ್ನಾಕರ ಭರವಸೆ ನೀಡಿದ್ದಾರೆ.
'ತರಗತಿ ಆರಂಭವಾಗಿ ತಿಂಗಳಾದರೂ ಪುಸ್ತಕವಿಲ್ಲ' ಎಂಬ 'ಕನ್ನಡಪ್ರಭ' ವರದಿಯನ್ನು ಬಿಜೆಪಿ ಸದಸ್ಯ ಗಣೇಶ್ ಕಾರ್ಣಿಕ್ ವಿಧಾನ ಪರಿಷತ್‌ನ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದರು. ವಿದ್ಯಾರ್ಥಿಗಳು ಮೊದಲ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ. ಆದರೆ ಭಾಷೆ ಹೊರತುಪಡಿಸಿ ಉಳಿದ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ ಎಂದು ಕಾರ್ಣಿಕ್ ಆರೋಪಿಸಿದರು. ಕಳೆದ ಎರಡು ವರ್ಷದಿಂದ ಪದವಿಪೂರ್ವ ಶಿಕ್ಷಣ ಇಲಾಖೆಯಿಂದಲೇ ಪುಸ್ತಕ ವಿತರಣೆ ಮಾಡಲಾಗುತ್ತಿದೆ. ಆದರೆ ಈ ಬಾರಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಪಾರದರ್ಶಕ ವ್ಯವಸ್ಥೆ ಜಾರಿಗೆ ಟೆಂಡರ್ ಕರೆಯಲಾಗಿದೆ. ಮತ್ತೊಂದೆಡೆ ಕಳೆದ ಬಾರಿ ಪ್ರಕಟಣೆಯ ಜವಾಬ್ದಾರಿ ಪಡೆದ ಪ್ರಕಾಶನವು ಅನಧಿಕೃತವಾಗಿ ಪುಸ್ತಕ ಮಾರಾಟ ಮಾಡುತ್ತಿದೆ. ಇದನ್ನು ವಿರೋಧಿಸಿ ಈ ಬಾರಿ ಟೆಂಡರ್ ಪಡೆದ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ಸಚಿವ ರತ್ನಾಕರ ತಿಳಿಸಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಪುಸ್ತಕ ವಿತರಣೆ ವಿಳಂಬವಾಗದಂತೆ ಎಚ್ಚರ ವಹಿಸಲಾಗುವುದು. ಪ್ರಾಥಮಿಕ ತರಗತಿಗಳ ಪುಸ್ತಕ ವಿತರಣೆಗೆ ವ್ಯವಸ್ಥೆ ರೂಪಿಸಿರುವಂತೆ ವರ್ಷಾಂತ್ಯದೊಳಗೆ ಟೆಂಡರ್ ಕರೆದು ಮುಂಚಿತವಾಗಿಯೇ ಪುಸ್ತಕವು ಮಾರುಕಟ್ಟೆಯಲ್ಲಿರುವಂತೆ ಮಾಡುತ್ತೇವೆ ಎಂದು ಕಿಮ್ಮನೆ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement