500 ಮೆ.ವ್ಯಾ. ಸೌರವಿದ್ಯುತ್ ಉತ್ಪಾದನೆ ಗುರಿ
ನೂತನ ಸೋಲಾರ್ ನೀತಿಯ ಅನ್ವಯ ರಾಜ್ಯದಲ್ಲಿ ಈ ವರ್ಷ 500 ಮೆ.ವ್ಯಾ ವಿದ್ಯುತ್...
ವಿಧಾನ ಪರಿಷತ್: ನೂತನ ಸೋಲಾರ್ ನೀತಿಯ ಅನ್ವಯ ರಾಜ್ಯದಲ್ಲಿ ಈ ವರ್ಷ 500 ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಯೋಜನೆಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಆಸಕ್ತ ಕಂಪನಿಗಳ ಹುಡುಕಾಟದಲ್ಲಿ ಸರ್ಕಾರವಿದೆ. ಆದ್ದರಿಂದ ಟೆಂಡರ್ ಸಲ್ಲಿಸುವಾಗ ಬ್ಯಾಂಕ್ ಭದ್ರತಾ ಠೇವಣಿ ಕಡ್ಡಾಯಗೊಳಿಸಲಾಗಿದೆ. ಒಂದೊಮ್ಮೆ ಕಂಪನಿಗಳು ಸೌರ ವಿದ್ಯುತ್ ಘಟಕ ಆರಂಭಿಸದಿದ್ದರೆ ಸರ್ಕಾರ ಠೇವಣಿ ಮೊತ್ತ ಮುಟ್ಟುಗೋಲು ಹಾಕಿಕೊಳ್ಳಲಿದೆ ಎಂದು ಅವರು ಬಿಜೆಪಿಯ ಸಿ.ಎಚ್.ವಿಜಯಶಂಕರ ಅವರ ಪ್ರಶ್ನೆಗೆ ಉತ್ತರಿಸಿದರು.
ಹಿಂದಿನ ಸರ್ಕಾರದ ಅವಧಿಯಲ್ಲೇ ಸೌರವಿದ್ಯುತ್ ನೀತಿ ಜಾರಿಗೆ ಬಂದಿದೆ. ಆದರೆ ಅದನ್ನು ಪರಿಣಾಮಕಾರಿಗೊಳಿಸಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಒಟ್ಟಾರೆ ಕೇವಲ 46 ಮೆ.ವ್ಯಾ ಸೌರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಸರ್ಕಾರದ ಪಾಲು 19 ಮೆ.ವ್ಯಾ. ಈ ಬಾರಿ ಸೌರ ವಿದ್ಯುತ್ ಯೋಜನೆಗಳನ್ನು ಯಶಸ್ವಿಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ರೈತರಿಗೆ 7400 ಕೋಟಿ ಉಚಿತ ವಿದ್ಯುತ್
ರೈತರ ಕೃಷಿ ಭೂಮಿಗಳ ಪಂಪ್‌ಸೆಟ್‌ಗಳಿಗೆ ಪ್ರತಿ ವರ್ಷ 7400 ಕೋಟಿ ಮೊತ್ತದ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಸರ್ಕಾರದ ಮೇಲೆ ದೊಡ್ಡ ಹೊರೆ ಬೀಳುತ್ತಿದೆ. ಸೌರ ವಿದ್ಯುತ್‌ಗೆ ಪ್ರೋತ್ಸಾಹ ನೀಡುವ ಮೂಲಕ ಈ ಹೊರೆ ಕಡಿಮೆ ಮಾಡಿಕೊಳ್ಳಬೇಕಿದೆ. ಈ ಮೂಲಕ ಉಚಿತ ವಿದ್ಯುತ್ ಬಗ್ಗೆ ಮರುಪರಿಶೀಲನೆ ಮಾಡಬೇಕಿದೆ ಎಂದು ಶಿವಕುಮಾರ್ ತಿಳಿಸಿದರು.