ಅದಕ್ಷ ಪತಿ, ಆಡಳಿತ ಪತ್ನಿ ಕೈಗೆ!
-ಅಧ್ಯಕ್ಷನ ಪತ್ನಿ ಸರೋಜಾ ಕಿರುಕುಳವೇ ಸುರೇಶ್ ಸಾವಿಗೆ ಕಾರಣ
ಕ.ಪ್ರ.ವಾರ್ತೆ | ಚಾಮರಾಜನಗರ ಟಿ ಜೂ. 24
ಕೊಳ್ಳೇಗಾಲ ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಎಂಜಿನಿಯರ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಅಲ್ಲಿನ ಆಡಳಿತ ವ್ಯವಸ್ಥೆಯೇ ಸರಿ ಇರಲಿಲ್ಲ. ಇದಕ್ಕೆಲ್ಲ ಗ್ರಾಪಂ ಹಿಂದಿನ ಅಧ್ಯಕ್ಷರ ಪತ್ನಿಯ ನೇರ ಕೈವಾಡವೇ ಕಾರಣ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಗ್ರಾ.ಪಂ.ಗಳಲ್ಲಿ ಪತ್ನಿ ಹೆಸರಲ್ಲಿ ಪತಿರಾಯ ದರ್ಬಾರ್ ನಡೆಸುವುದನ್ನು ಈವರೆಗೆ ಕೇಳಿದ್ದೇವೆ. ಆದರಿಲ್ಲಿ ಪತಿ ಗ್ರಾಪಂ ಸರ್ದಾರ್ ಅಧ್ಯಕ್ಷನಾಗಿದ್ದರೂ ಸಂಪೂರ್ಣ ಆಡಳಿತ ಇದ್ದದ್ದು ಪತ್ನಿ ಸರೋಜಾ ಕಪಿಮುಷ್ಠಿಯಲ್ಲಿ. ಯಾರಾದರೂ ಪ್ರಶ್ನಿಸಿದರೆ ಅಟ್ರಾಸಿಟಿ (ಜಾತಿ ನಿಂದನೆ) ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಳು ಈಕೆ!
ಸರೋಜಾ ಪರಿಶಿಷ್ಟ ಜನಾಂಗಕ್ಕೆ ಸೇರಿದವಳಾಗಿದ್ದು, ಇವಳದು ಅಂತರ್ಜಾತಿ ವಿವಾಹ. ಕೊಳ್ಳೇಗಾಲ ತಾಲೂಕಿನ ಕುರಹಟ್ಟಿ ಹೊಸೂರು ಗ್ರಾಪಂ ಚುನಾವಣೆಗೆ ಈ ಪತಿ, ಪತ್ನಿ ಇಬ್ಬರೂ ಸ್ಪರ್ಧಿಸಿದ್ದರು. ಆದರೆ ಸರ್ದಾರ್ ಗೆದ್ದರು. ಸರೋಜಾ ಸೋತಳು. ಆದರೆ ಈಕೆ ತನ್ನ ಪ್ರಭಾವ ಬೆಳೆಸಿ ಪತಿಯನ್ನು ಅಧ್ಯಕ್ಷರನ್ನಾಗಿ ಮಾಡಿಸಿದಳು.
ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಸರೋಜಾ ಕೆಲಸಕ್ಕೆ ಚಕ್ಕರ್ ಹೊಡೆದು ಪಂಚಾಯ್ತಿ ಸಭೆಗಳಲ್ಲಿ ಗಂಡನ ಪಕ್ಕ ಕೂರತೊಡಗಿದಳು. ನರೇಗಾ ಸೇರಿದಂತೆ ಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳ ಉಸ್ತುವಾರಿ ನೋಡಿಕೊಳ್ಳತೊಡಗಿದಳು. ಇದನ್ನು ವಿರೋಧಿಸಲು ಹೊರಟ ಎಲ್ಲ ಸದಸ್ಯರನ್ನು ಜಾತಿ ನಿಂದನೆ ಪ್ರಕರಣದ ಬೆದರಿಕೆ ಒಡ್ಡಿ ತೆಪ್ಪಗಾಗಿಸುತ್ತಿದ್ದಳು ಎಂದು ಗ್ರಾಪಂ ಸದಸ್ಯರೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಪೀಡಿಸಿದಳು: ಅಧಿಕಾರಿಗಳು ಈಕೆ ಹೇಳಿದಂತೆ ಕೇಳಬೇಕು. ಪ್ರತಿ ಕೆಲಸಕ್ಕೂ ಸರೋಜಾಳಾ ಒಪ್ಪಿಗೆಯೇ ಬೇಕಿತ್ತು. ಪಂಚಾಯ್ತಿಯ ಎಲ್ಲ ಅಕ್ರಮಗಳನ್ನು ಮುಚ್ಚಿಹಾಕಲು ಖೊಟ್ಟಿ ದಾಖಲೆ ಸೃಷ್ಟಿಸುವಂತೆ ಎಂಜಿನಿಯರ್ ಸುರೇಶ್ ಮೇಲೆ ಈಕೆಯೇ ಒತ್ತಡ ಹೇರಿದ್ದಳು ಎನ್ನಲಾಗಿದೆ. ಇಲ್ಲ ಎಂದಿದ್ದಕ್ಕೆ ಅಟ್ರಾಸಿಟಿ ಕೇಸ್ನ ಬೆದರಿಕೆಯನ್ನೂ ಒಡ್ಡಿದ್ದಾಳೆ. ಕೆಲವು ದಿನಗಳ ಹಿಂದಷ್ಟೇ ಪತಿಯ ಅಧಿಕಾರದ ಅವಧಿ ಮುಗಿದಿದ್ದರಿಂದ ಶೀಘ್ರ ಈ ಕೆಲಸ ಮುಗಿಸಿಕೊಡುವಂತೆ ಪೀಡಿಸಿದ್ದಾಳೆ. ಜತೆಗೆ ಈಗಿನ ಅಧ್ಯಕ್ಷರಿಗೆ ಇನ್ನೂ ದಾಖಲೆಯನ್ನೂ ನೀಡಿರಲಿಲ್ಲ ಎಂಬ ಅಂಶವೂ ತಿಳಿದುಬಂದಿದೆ.
ತಕ್ಕ ಶಿಕ್ಷೆ ನೀಡಿ: ಕೆಲವು ದಿನಗಳ ಹಿಂದೆ ಎಂಜಿನಿಯರ್ ಸುರೇಶ್ ಜತೆ ಜಗಳ ಮಾಡಿದ್ದ ಈಕೆ ಹಲ್ಲೆಯನ್ನೂ ಮಾಡಿದ್ದಾಳೆ. ಹಾಗಾಗಿ ಆಕೆಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತನ ಕುಟುಂಬ ವರ್ಗದವರ ಆಗ್ರಹ.
ಆರೋಪಿಗಳ ಬಂಧನಕ್ಕೆ 3 ತಂಡ
ಎಂಜಿನಿಯರ್ ಸುರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕುರಟ್ಟಿ ಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಸರ್ದಾರ್, ಪತ್ನಿ ಸರೋಜ ಹಾಗೂ ಪಿಡಿಒ ವೈರಮುಡಿ ಮಾಣಿಕ್ಯಂ ಬಂಧನಕ್ಕೆ 3 ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ತಿಳಿಸಿದರು.
ಅಮಾನತು, ವಜಾ, ರದ್ದತಿಗೆ ಪತ್ರ
ಪ್ರಕರಣಕ್ಕೆ ಸಂಬಂಧಿಸಿ ಕುರಟ್ಟಿ ಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಸರ್ದಾರ್ ಸದಸ್ಯತ್ವ ರದ್ದುಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆತನ ಪತ್ನಿ ಎಲ್ಪಿಎಸ್ ಪಾಜೆಕ್ಟ್ನ ಸಿ ವಿಲೇಜ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಸರೋಜಾಳನ್ನು ಸೇವೆಯಿಂದ ವಜಾ ಮಾಡಲಾಗಿದೆ. ಪಿಡಿಓ ವೈರಮುಡಿ ಮಾಣಿಕ್ಯಂ ಮೇಲೆ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಜಿಪಂ ಸಿಇಓ ಡಾ. ಕೆ.ಎಚ್. ನರಸಿಂಹಮೂರ್ತಿ ತಿಳಿಸಿದ್ದಾರೆ.
ಸುರೇಶ್ ಸಾವು: ಕಾನೂನು ಕ್ರಮ
ವಿಧಾನ ಪರಿಷತ್: ಸರ್ಕಾರಿ ಎಂಜಿನಿಯರ್ ಸುರೇಶ್ ಆತ್ಮಹತ್ಯೆ ಕುರಿತಂತೆ ರಾಜ್ಯ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಆತನ ಪತ್ನಿಯ ಕಿರುಕುಳದಿಂದ ಎಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಪ್ರತಿಪಕ್ಷ ಸದಸ್ಯರ ಸಲಹೆಯಂತೆ ಕಿರುಕುಳ ನೀಡುವವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲು ಕಾನೂನು ಹಾಗೂ ಗೃಹ ಸಚಿವರ ಜತೆ ಚರ್ಚಿಸುತ್ತೇನೆ ಎಂದು ಅವರು ವಿಧಾನ ಪರಿಷತ್ಗೆ ಭರವಸೆ ನೀಡಿದರು.
- ದೇವರಾಜು ಕಪ್ಪಸೋಗೆ