ಕನ್ನಡ ಕಲಿಯದ ಅಧಿಕಾರಿಗಳಿಗೆ ರಾಜ್ಯದಲ್ಲಿನ್ನು ಉಳಿಗಾಲ ಇಲ್ಲ
ಕನ್ನಡ ಕಲಿಯದ ಐಎಎಸ್ ಅಧಿಕಾರಿಗಳಿಗೆ ಇನ್ನುಮುಂದೆ ರಾಜ್ಯದಲ್ಲಿ ಉಳಿಗಾಲವಿಲ್ಲ...
ವಿಧಾನಪರಿಷತ್: ಕನ್ನಡ ಕಲಿಯದ ಐಎಎಸ್ ಅಧಿಕಾರಿಗಳಿಗೆ ಇನ್ನುಮುಂದೆ ರಾಜ್ಯದಲ್ಲಿ ಉಳಿಗಾಲವಿಲ್ಲ.
ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು ಇನ್ನುಮುಂದೆ ರಾಜ್ಯದಲ್ಲಿ ಸೇವೆ ಸಲ್ಲಿಸಬೇಕಾದರೆ ಕನ್ನಡವನ್ನು ಕಡ್ಡಾಯವಾಗಿ ಕಲಿಯಲೇಬೇಕು. ಇಲ್ಲದಿದ್ದರೆ ಅವರನ್ನು ವಾಪಸ್ ಕಳುಹಿಸುವ ಸಾಧ್ಯತೆ ಇದೆ.
ಇಂಥದೊಂದು ನಿಯಮ ಜಾರಿಗೊಳಿಸುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ಸಭಾನಾಯಕ ಎಸ್.ಆರ್. ಪಾಟೀಲ್ ಹೇಳಿದ್ದಾರೆ. ಬಿಜೆಪಿಯ ತಾರಾ ಅನುರಾಧ ಮಂಗಳವಾರ ಸದನದಲ್ಲಿ ಈ ಬಗ್ಗೆ ಗಮನ ಸೆಳೆದಾಗ, ಕನ್ನಡ ಸಂಸ್ಕೃತಿ ಸಚಿವೆ ಪರವಾಗಿ ಸಭಾನಾಯಕ ಎಸ್.ಆರ್.ಪಾಟೀಲ್ ಉತ್ತರಿಸಿದರು.
ಮಹಾರಾಷ್ಟ್ರದಲ್ಲಿ ಎಲ್ಲಾ ವರ್ಗದ ಅಧಿಕಾರಿಗಳಿಗೂ ಮರಾಠಿಯನ್ನು ಕಡ್ಡಾಯವಾಗಿ ಕಲಿಯುವಂತೆ ಮಾಡಲಾಗುತ್ತಿದೆ. ಅದಕ್ಕಾಗಿ ತರಬೇತಿಯನ್ನೂ ನೀಡಲಾಗುತ್ತದೆ. ಅಲ್ಲದೆ, ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಿಗೆ 2 ವರ್ಷಗಳ ವರೆಗೆ ಮರಾಠಿ ತರಬೇತಿ ನೀಡಿ, ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಅನುತ್ತೀರ್ಣರಾದ ಅಧಿಕಾರಿಗಳನ್ನು ತವರು ರಾಜ್ಯಗಳಿಗೆ ವಾಪಸ್ ಕಳುಹಿಸಲಾಗುತ್ತದೆ. ಅದೇರೀತಿ ಇಲ್ಲೇಕೆ ಮಾಡುತ್ತಿಲ್ಲ. ಇಲ್ಲಿಯೂ ಅದೇ ಮಾದರಿ ನೀತಿ ರೂಪಿಸಿದರೆ, ಕನ್ನಡ ಉಳಿಯುತ್ತದೆ. ಇಲ್ಲವಾದರೆ ಕನ್ನಡ ಕಡ್ಡಾಯ ಬರೀ ಘೋಷಣೆಯಲ್ಲಿ ಮಾತ್ರ ಇರುತ್ತದೆ ಎಂದು ತಾರಾ ಹೇಳಿದರು.
ಇದಕ್ಕೆ ಸಹಮತ ವ್ಯಕ್ತಪಡಿಸಿದ ಎಸ್.ಆರ್.ಪಾಟೀಲ್, ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಅನ್ಯಭಾಷೆ ಅಧಿಕಾರಿಗಳಿಗೆ ಕನ್ನಡ ಕಲಿಸುವ ತರಬೇತಿಗಳನ್ನು ನೀಡಲಾಗುತ್ತಿದೆ. ಅವರು ಕಡ್ಡಾಯವಾಗಿ ಕನ್ನಡದಲ್ಲೇ ವ್ಯಹರಿಸುವಂತೆ ಮಾಡಲಾಗಿದೆ. ಇದರೊಂದಿಗೆ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ಕನ್ನಡ ತರಬೇತಿ ನೀಡಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಅನುತ್ತೀರ್ಣರಾದರೆ ವಾಪಸ್ ಕಳುಹಿಸುವ ಬಗ್ಗೆ ಪರಿಶೀಲಿಸಲಾಗುತ್ತದೆ ಎಂದರು.