ಕಬ್ಬು ಪ್ರತಿಭಟನೆ; ಹಾವೇರಿಯಲ್ಲಿ ರೈತರ ಬಂಧನ, ಬಿಡುಗಡೆ
ಕಬ್ಬು ಬೆಳೆಗಾರರ ಪ್ರತಿಭಟನೆ ಹಾವೇರಿಯಲ್ಲಿ ತೀವ್ರಗೊಂಡು ರೈತರನ್ನು ಬಂಧಿಸಿ ಬಿಡುಗಡೆ ಮಾಡಿದರೆ...
ಹಾವೇರಿ/ಬಿಜಾಪುರ: ಕಬ್ಬು ಬೆಳೆಗಾರರ ಪ್ರತಿಭಟನೆ ಹಾವೇರಿಯಲ್ಲಿ ತೀವ್ರಗೊಂಡು ರೈತರನ್ನು ಬಂಧಿಸಿ ಬಿಡುಗಡೆ ಮಾಡಿದರೆ, ಬಿಜಾಪುರದಲ್ಲಿ ಸರದಿ ನಿರಶನ ಕೈಬಿಡಲಾಗಿದ್ದು, ಅಹೋರಾತ್ರಿ ಧರಣಿ ಮುಂದುವರಿದಿದೆ.
ಬೆಳಗಾರರ ಬೇಡಿಕೆಗಳಿಗೆ ಸರ್ಕಾರದಿಂದ ಸಮರ್ಪಕ ಸ್ಪಂದನೆ ಸಿಗದ ಕಾರಣ ಮಂಗಳವಾರ ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ರೈತರು, ಡಿಸಿ ಕಚೇರಿಯ ಮೂರೂ ಗೇಟ್‌ಗಳನ್ನು ಮುಚ್ಚಿ ದಿಗ್ಬಂಧನ ಹಾಕಿದರು. ನೌಕರರು ಕಚೇರಿಗೆ ತೆರಳದಂತೆ ಅಡ್ಡಿ ಮಾಡಿದರು. ಇದರಿಂದ 11 ಗಂಟೆವರೆಗೂ ನೌಕರರು ರಸ್ತೆಯಲ್ಲೇ ಕಳೆಯುವಂತಾಯಿತು. ನಂತರ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಈ ಮಧ್ಯೆ, ರೈತರ ವರ್ತನೆಯಿಂದ ಕಿಡಿಕಿಡಿಯಾದ ಡಿಸಿ ಕಚೇರಿ ನೌಕರರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ನೌಕರರ ಮನವೊಲಿಸಿ, ಸಂಚಾರ ಸುಗಮಗೊಳಿಸಿದರು.
ಬಿಜಾಪುರದಲ್ಲಿ: ಜೂ.26ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದ್ದು, ಜಿಲ್ಲೆಯ 5 ರೈತ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ ಎನ್ನುವ ಭರವಸೆ ಹಿನ್ನೆಲೆಯಲ್ಲಿ ಬಿಜಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೊಳ್ಳಲಾಗುತ್ತಿದ್ದ ಸರದಿ ಉಪವಾಸ ಕೈಬಿಡಲಾಯಿತು. ಆದರೆ ಬೆಳೆಗಾರರ ಅಹೋರಾತ್ರಿ ಧರಣಿ 9ನೇ ದಿನಕ್ಕೆ ಕಾಲಿಟ್ಟಿದೆ.