ಕಬ್ಬು ಬಾಕಿ; ನಿರ್ದಾಕ್ಷಿಣ್ಯ ಕ್ರಮ
ಮುಲಾಜಿಲ್ಲ, ಯಾವ ಪಕ್ಷದವರು ಎಂದೂ ನೋಡುವುದಿಲ್ಲ,..
-ವಿಧಾನಸಭೆಯಲ್ಲಿ ಸಿಎಂ ಭರವಸೆ
ಕನ್ನಡ ಪ್ರಭವಾರ್ತೆ ವಿಧಾನಸಭೆ ಜೂ.24
ಮುಲಾಜಿಲ್ಲ, ಯಾವ ಪಕ್ಷದವರು ಎಂದೂ ನೋಡುವುದಿಲ್ಲ, ಕಬ್ಬು ಬೆಳೆಗಾರರಿಗೆ ನಿಗದಿತ ಹಣ ಕೊಡದಿದ್ದರೆ ಕ್ರಿಮಿನಲ್ ಕೇಸು ಹಾಕಲಾಗುತ್ತದೆ, ಜಪ್ತಿ ಮಾಡಲಾಗುತ್ತದೆ. ಇದು ಇಂದಿನಿಂದಲೇ ಜಾರಿ. ಬಡ್ಡಿ ಸಹಿತ ವಸೂಲಿ ಮಾಡುತ್ತೇವೆ... ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಗುಡುಗಿದ ರೀತಿ ಇದು. 'ಕಬ್ಬಿಗೆ ನಿಗದಿತ ಬೆಲೆ ಕೊಡಿಸಲು ಸರ್ಕಾರ ಬದ್ಧ. ಎಲ್ಲ ಕಾನೂನು ಕ್ರಮಗಳನ್ನೂ ಕೈಗೊಳ್ಳುತ್ತದೆ ' ಎಂದಿದ್ದಾರೆ.
ನಿಗದಿತ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳಿಂದ ಕೊಡಿಸುವ ಹಾಗೂ ಸರ್ಕಾರದ ಸಬ್ಸಿಡಿ ಹಣವನ್ನು ವಾರದೊಳಗೆ ಬಿಡುಗಡೆ ಮಾಡುವ ಮುಖ್ಯಮಂತ್ರಿ ಭರವಸೆಯಿಂದ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ ಅಂತ್ಯಗೊಂಡಿತು.
ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಿದ್ದು, ಕೃಷಿ ಇಲಾಖೆ ಕೂಡ ಇಂದು ಆದೇಶ ಹೊರಡಿಸಿದೆ. ಇನ್ನೆರಡು ಮೂರು ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹಣ ತಲುಪಲಿದೆ. ಸಕ್ಕರೆ ಕಾರ್ಖಾನೆಗಳು ಕೋರ್ಟ್‌ಗೆ ಹೋಗಿದ್ದು, 2500 ಪಾವತಿಸುವ ಸರ್ಕಾರಿ ಆದೇಶಕ್ಕೆ ಜುಲೈವರೆಗೆ ತಡೆಯಾಜ್ಞೆ ತಂದಿದ್ದಾರೆ. ಕೇಂದ್ರ ಸರ್ಕಾರ ಘೋಷಿಸಿರುವ ಎಫ್‌ಆರ್‌ಪಿ ದರ ನೀಡದವರ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ಕೋರ್ಟ್ ಸೂಚಿಸಿದೆ. ಸರ್ಕಾರ ಎಲ್ಲ ಕಾರ್ಖಾನೆಗಳಿಗೂ ನೋಟಿಸ್ ಜಾರಿ ಮಾಡಿದ್ದು, ರಿಕವರಿ ಸರ್ಟಿಫಿಕೇಟ್ ಅನ್ನೂ ಹೊರಡಿಸಿದೆ. 18 ಕಾರ್ಖಾನೆಗಳು ಉತ್ತರ ನೀಡಿಲ್ಲ ಎಂದು ಸಿದ್ದರಾಮಯ್ಯ ವಿವರಿಸಿದರು.
ಮುಖ್ಯಮಂತ್ರಿ ನೇತೃತ್ವದಲ್ಲಿ ರೈತರು, ಕಾರ್ಖಾನೆಗಳ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದು, ಸಮಸ್ಯೆ ಬಗೆಹರಿಸಲಾಗುತ್ತದೆ. ಗುರುವಾರ ಬಿಜಾಪುರ ಭಾಗದ ಮಾಲೀಕರು ಹಾಗೂ ರೈತರ ಸಭೆಯನ್ನು ನಡೆಸಲಾಗುತ್ತದೆ.
-ಮಹದೇವಪ್ರಸಾದ್, ಸಕ್ಕರೆ ಸಚಿವ
ಸರ್ಕಾರದ ಸಬ್ಸಿಡಿ ಪ್ರತಿ ಕ್ವಿಂಟಾಲ್‌ಗೆ
150
ಪಾವತಿಸಬೇಕಾದ ಮೊತ್ತ
574 ಕೋಟಿ
ಸರಕಾರದಿಂದ ಬಾಕಿ
189ಕೋಟಿ