ಕೇಂದ್ರೀಯ ಕೃಷಿ ವಿವಿ ಸ್ಥಾಪನೆಗೆ ಕ್ರಮ
ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ: ಕರ್ನಾಟಕದಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾವಯವ ಕೃಷಿ ಪ್ರಯೋಗ, ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಅಗತ್ಯ ಕ್ರಮ ಸೇರಿದಂತೆ ಸಮಗ್ರ ಕೃಷಿ ಅಭಿವೃದ್ಧಿಗೆ ಒತ್ತು ನೀಡುವುದಾಗಿಯೂ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ರಸಗೊಬ್ಬರ ಸಚಿವ ಅನಂತ್ ಕುಮಾರ್ ಮತ್ತು ಸಂಸದ ಯಡಿಯೂರಪ್ಪ ಅವರಿಗೆ ಈ ಭರವಸೆ ನೀಡಿರುವ ರಾಧಾ ಮೋಹನ್ ಪ್ರಸಕ್ತ ವರ್ಷದಲ್ಲೇ ಸಾವಯವ ಕೃಷಿ ಪೈಲಟ್ ಯೋಜನೆ ಜಾರಿ ಮಾಡುವುದಾಗಿಯೂ ತಿಳಿಸಿದರು.
ಮುಂಗಾರು ಹಂಗಾಮಿಗೆ ಅಗತ್ಯ ರಸ ಗೊಬ್ಬರ, ದಾಸ್ತಾನು, ನಿರೀಕ್ಷಿತ ಉತ್ಪಾದನೆ ಮತ್ತು ಕೊರತೆ ಬಗ್ಗೆಯೂ ಉಭಯ ಸಚಿವರು ಚರ್ಚಿಸಿದರು.