ಟಿಇಟಿ: ಇಲಾಖೆ ನಿರ್ದೇಶಕರು, ಅಧಿಕಾರಿಗಳೂ ಶಾಮೀಲು
ಶಿಕ್ಷಣ ಇಲಾಖೆ ನಿರ್ದೇಶಕರು, ಅಧಿಕಾರಿಗಳು, ಖಜಾನೆ ಅಧಿಕಾರಿಗಳು ಹಾಗೂ ಕೆಲವು...
ಕನ್ನಡಪ್ರಭ ವಾರ್ತೆ ಬೆಂಗಳೂರು ಜೂ.24
ಶಿಕ್ಷಣ ಇಲಾಖೆ ನಿರ್ದೇಶಕರು, ಅಧಿಕಾರಿಗಳು, ಖಜಾನೆ ಅಧಿಕಾರಿಗಳು ಹಾಗೂ ಕೆಲವು ಸರ್ಕಾರಿ ಅಧಿಕಾರಿಗಳೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿ...!
ಶಿಕ್ಷಕರ ಅರ್ಹತಾ ಪ್ರವೇಶ ಪರೀಕ್ಷೆ(ಟಿಇಟಿ) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹೊಸ ತಿರುವು ಪಡೆದಿದ್ದು ಇಲಾಖೆಯ ಹಲವು ಕುಳಗಳು ಭಾಗಿಯಾಗಿವೆ ಎಂದು ಸಿಸಿಬಿ ವಿಚಾರಣೆ ವೇಳೆ ಪ್ರಮುಖ ಆರೋಪಿ ಶಿವಕುಮಾರ್ ಬಾಂಬ್ ಸಿಡಿಸಿದ್ದಾನೆ.
ಮೂರು ದಿನಗಳಿಂದ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಇಲಾಖೆ ಅಧಿಕಾರಿಗಳು ಹರಸಾಹಸ ಪಡುತ್ತಿದ್ದು ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂದೇ ಸಮರ್ಥಿಸಿಕೊಳ್ಳುತ್ತಿದ್ದರು. ಆದರೆ, ವಿಚಾರಣೆಯಿಂದ ಬಣ್ಣ ಬಯಲಾಗಿದೆ.
ಇಲಾಖೆ ಆಯುಕ್ತರು, ಅಧಿಕಾರಿ ಸೇರಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರ ದಾರಿ ತಪ್ಪಿಸುತ್ತಿದ್ದಾರೆ. ಇನ್ನು ಆಯುಕ್ತರು ಕೂಡ ಸಿಸಿಬಿ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಪತ್ರಿಕೆ ಸೋರಿಕೆ ಸುಳ್ಳು ಎನ್ನುತ್ತಿದ್ದಾರೆ. ಆದರೆ, ಕೊಪ್ಪಳದಲ್ಲಿರಬೇಕಿದ್ದ ಪ್ರಶ್ನೆಪತ್ರಿಕೆಗಳು ಒಂದು ದಿನ ಮೊದಲೇ ಬೆಂಗಳೂರಿನ ನಂದಿನಿ ಬಡಾವಣೆಗೆ ಬಂದಿವೆ. ಸಿಸಿಬಿ ಅದೇ ದಿನ ಪ್ರಶ್ನೆಪತ್ರಿಕೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಇಲಾಖೆ ಅಧಿಕಾರಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಿಸಿಬಿ ಉನ್ನತ ಮೂಲಗಳು ತಿಳಿಸಿವೆ.
ಇನ್ನೆರಡು ದಿನಗಳಲ್ಲಿ ಸ್ಪಷ್ಟ: ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು ಪರೀಕ್ಷೆಗೆ ಎಷ್ಟು ದಿನಗಳ ಹಿಂದೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ ಎನ್ನುವುದು ಶೀಘ್ರದಲ್ಲೇ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
21ರಂದೇ ಕೋರ್ಟ್ ವಶಕ್ಕೆ
ಪರೀಕ್ಷೆ ಮುನ್ನಾ ದಿನ ಶನಿವಾರ (ಜೂ.21) ಸಿಸಿಬಿ ಪೊಲೀಸರು ನಂದಿನಿ ಬಡಾವಣೆಯಲ್ಲಿ ಶಿವಕುಮಾರ್ ಮತ್ತಿತರರನ್ನು ಬಂಧಿಸಿ ಎರಡು ಪ್ರಶ್ನೆಪತ್ರಿಕೆಗಳನ್ನು ನ್ಯಾಯಾಲಯ ವಶಕ್ಕೆ ನೀಡಿದ್ದರು. ಅದಕ್ಕೂ ಮುನ್ನ ಪತ್ರಿಕೆಗಳನ್ನು ಝೆರಾಕ್ಸ್ ಮಾಡಿಸಿದ್ದ ಅಧಿಕಾರಿಗಳು ಜೂ.22ರಂದು ಪರೀಕ್ಷೆ ಕೇಂದ್ರಕ್ಕೆ ತೆರಳಿ ಸೋರಿಕೆಯಾದ ಪತ್ರಿಕೆಗಳ ಅಸಲಿಯತ್ತನ್ನು ಪರಿಶೀಲಿಸಿದ್ದರು.
ಕೋಚಿಂಗ್ ಹೆಸರಲ್ಲಿ ಮಾರಾಟ
ಕೋಚಿಂಗ್ ನೆಪದಲ್ಲಿ ಆರೋಪಿ ಶಿವಕುಮಾರ್, ಟಿಇಟಿ ಅಭ್ಯರ್ಥಿಗಳನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ. ಕೋಚಿಂಗ್ ಪಡೆವ ವಿದ್ಯಾರ್ಥಿಗಳು, ಸ್ನೇಹಿತರ ಮುಖಾಂತರ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗುತ್ತಿತ್ತು. ಆರೋಪಿ ಶಿವಕುಮಾರ್ ಪತ್ರಿಕೆ ಮಾರಾಟದ ಜತೆಗೆ ಅಭ್ಯರ್ಥಿಗಳಿಗೆ ಉತ್ತಮ ಅಂಕ ಹಾಗೂ ಸರ್ಕಾರಿ ಕೆಲಸ ಕೊಡಿಸುವ ಆಮಿಷ ಒಡ್ಡಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಅದಕ್ಕಾಗಿ 2 ಲಕ್ಷ ಡಿಮ್ಯಾಂಡ್ ಮಾಡಿದ್ದು ಮುಂಗಡವಾಗಿ ಅಭ್ಯರ್ಥಿಗಳಿಂದ 5 ರಿಂದ 10 ಸಾವಿರದವರೆಗೆ ಹಣ ಪಡೆದಿದ್ದ. ಆರೋಪಿಯಿಂದ ಪ್ರಶ್ನೆಪತ್ರಿಕೆಗಳ ಝೆರಾಕ್ಸ್ ಪ್ರತಿಗಳು, 57,150 ನಗದು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಪ್ಪಳದಲ್ಲಿ ಸೋರಿಕೆ ಖಚಿತ
ಪ್ರಶ್ನೆಪತ್ರಿಕೆ ಕೊಪ್ಪಳದಲ್ಲೇ ಸೋರಿಕೆಯಾಗಿದ್ದನ್ನು ಆರೋಪಿಗಳು ಖಚಿತಪಡಿಸಿದ್ದಾರೆ. ಬೆಂಗಳೂರಿನಿಂದ ಹೊರಟಿದ್ದ ಪ್ರಶ್ನೆಪತ್ರಿಕೆ ಕೊಪ್ಪಳದಿಂದ ಖಜಾನೆ ತಲುಪುವಷ್ಟರಲ್ಲಿ ಒಂದು ಬಂಡಲ್ ಕಾಣೆಯಾಗಿತ್ತು. ಬೆಂಗಳೂರಿಂದ 13 ಬಂಡಲ್ ಕಳುಹಿಸಲಾಗಿದೆ ಎಂದು ನಮೂದಿಸಲಾಗಿತ್ತು. ಆದರೆ, 12 ಮಾತ್ರ ತಲುಪಿವೆ ಎಂದು ಕೊಪ್ಪಳ ಡಿಡಿಪಿಐ ಡಿ.ಎಚ್.ವೀರಣ್ಣ ಒಪ್ಪಿಕೊಂಡಿದ್ದಾರೆ.
ಮಾಹಿತಿ ಮುಚ್ಚಿಟ್ಟಿದ್ದೇಕೆ?
ಪರೀಕ್ಷೆ ಮುನ್ನಾದಿನವೇ ಬಂಡಲ್ ಕಡಿಮೆ ಬಂದಿರುವ ವಿಚಾರವನ್ನು ಡಿಡಿಪಿಐ ವೀರಣ್ಣ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಿಲ್ಲವೇಕೆ? ಸಿಸಿಬಿ ಪ್ರಶ್ನೆಪತ್ರಿಕೆ ಬಹಿರಂಗವಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ ಒಂದು ದಿನದ ನಂತರ ಮಾತನಾಡಿದ ವೀರಣ್ಣ ಒಂದು ಬಂಡಲ್ ಕಡಿಮೆ ಬಂದಿದೆ ಎಂದಿದ್ದಾರೆ.