ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶೈಕ್ಷಣಿಕ ಭಯೋತ್ಪಾದನೆ ಬೇಡ

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮವನ್ನು ಬದಲಿಸಿರುವ ರಾಜ್ಯ...

Mainashree
Updated On : 24 Jun 2014, 9:58 am

ವಿಧಾನ ಪರಿಷತ್: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಮವನ್ನು ಬದಲಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ರಾಜ್ಯದಲ್ಲಿ ಶೈಕ್ಷಣಿಕ ಭಯೋತ್ಪಾದನೆ ನಡೆಯುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿವೆ.
ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ಶೇ.75ರಿಂದ 25ಕ್ಕೆ ಇಳಿಕೆ ಮಾಡಿರುವ ಕ್ರಮ ಸಮರ್ಪಕವಲ್ಲ. ಚುನಾವಣಾ ಮತ ಬ್ಯಾಂಕ್‌ಗಾಗಿ ಹಾಗೂ ಕೆಲವು ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಆದೇಶ ಜಾರಿಗೆ ತಂದಿದೆ. ಬಡಮಕ್ಕಳಿಗೆ ಹಾಗೂ ಅಲ್ಪಸಂಖ್ಯಾತ ಮಕ್ಕಳ ಹಿತಕ್ಕೆ ತಿಲಾಂಜಲಿ ಇಟ್ಟಂತಾಗುತ್ತಿದೆ. ಇದು ಶೈಕ್ಷಣಿಕ ಭಯೋತ್ಪಾದನೆ ಎಂದು ಜೆಡಿಎಸ್‌ನ ಹಿರಿಯ ಸದಸ್ಯ ಎಂ.ಸಿ.ನಾಣಯ್ಯ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
1992ರಲ್ಲಿ ಸರ್ವೋಚ್ಛ ನ್ಯಾಯಾಲಯ ಸೇಂಟ್ ಸ್ಟೀಫನ್ ಆದೇಶದಲ್ಲಿ ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ.50ರಷ್ಟು ಪ್ರವೇಶ ನೀಡಲೇಬೇಕು. ಈ ಹಿಂದಿನ ಸರ್ಕಾರ ಅದನ್ನು ಶೇ.75ಕ್ಕೆ ಏರಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅದನ್ನು ಶೇ.25ಕ್ಕೆ ಇಳಿಸಿ, ಆತುರದ ನಿರ್ಧಾರ ಕೈಗೊಂಡಿದೆ ಎಂದು ನಾಣಯ್ಯ ದೂರಿದರು.
'ನೀವು ಅಲ್ಪರಾಗಿಯೇ ಉಳಿಯಿರಿ' ಎಂಬ ಶೀರ್ಷಿಕೆಯಲ್ಲಿ ಜೂ.17ರಂದು 'ಕನ್ನಡಪ್ರಭ'ದಲ್ಲಿ ಈ ಕುರತಂತೆ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಪ್ರತಿಪಕ್ಷ ಸದಸ್ಯರು ಪ್ರಸ್ತಾಪಿಸಿದರು.
ಆದೇಶ ಉಲ್ಲಂಘನೆ: ಈ ಆದೇಶದಿಂದ ಶೇ.50ರಷ್ಟು ಪ್ರವೇಶ ನೀಡಬೇಕೆಂಬ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದಂತಾಗುತ್ತದೆ. ಭಾಷೆ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಮೇಲೂ ಇದು ಪ್ರತಿಕೂಲ ಪರಿಣಾಮ ಬೀರಲಿದೆ. ಶಿಕ್ಷಣ ಹಕ್ಕು ಕಾಯಿದೆ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಸೀಟುಗಳ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಆದೇಶ ಜಾರಿಗೆ ತರಬಾರದು ಎಂದು ಮುಖ್ಯಮಂತ್ರಿಯನ್ನು ಅವರು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement