ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸುವರ್ಣ ಸೌಧದ ಮೇಲೇಕೆ ತಾತ್ಸಾರ?

ಉತ್ತರ ಕರ್ನಾಟಕ ಭಾಗಕ್ಕೆ ಪ್ರಾಧಾನ್ಯ ನೀಡಬೇಕೆಂದು ಇಲ್ಲಿ ಕಟ್ಟಲಾಗಿರುವ...

Mainashree
Updated On : 25 Jun 2014, 1:17 am

ಖಾಲಿ ಹೊಡೆಯುತ್ತಿರುವ ಕೋಟ್ಯಂತರ ವೆಚ್ಚದ ಸೌಧ | ನಿರ್ಲಕ್ಷದಿಂದ ಅಭಿವೃದ್ಧಿ ನಿರೀಕ್ಷೆ ಹುಸಿಯಾಯಿತೇ? | ನಿರ್ವಹಣೆಗಾಗಿ ಅನವಶ್ಯಕ ಖರ್ಚು | ಪ್ರಮುಖ ಕಚೇರಿಗಳೂ ಸ್ಥಳಾಂತರಗೊಂಡಿಲ್ಲ


ಬೆಳಗಾವಿ: ಉತ್ತರ ಕರ್ನಾಟಕ ಭಾಗಕ್ಕೆ ಪ್ರಾಧಾನ್ಯ ನೀಡಬೇಕೆಂದು ಇಲ್ಲಿ ಕಟ್ಟಲಾಗಿರುವ ಸುವರ್ಣ ವಿಧಾನಸೌಧ ಕೇವಲ ಅಧಿವೇಶನಕ್ಕಷ್ಟೇ ಸೀಮಿತವಾಯಿತೇ? ಇದಕ್ಕಾಗಿ ಬರೋಬ್ಬರಿ 400 ಕೋಟಿ ವ್ಯಯಿಸಿ ಕಟ್ಟಬೇಕಾಗಿತ್ತೇ? ಎಂಬ ಪ್ರಶ್ನೆ ಇದೀಗ ಕಾಡತೊಡಗಿದೆ.
ಈ ಕಟ್ಟಡ ನಿರ್ಮಾಣವಾಗಿ ಒಂದೂ ಮುಕ್ಕಾಲು ವರ್ಷ ಕಳೆದಿದೆ. ಕೇವಲ ಇದರ ನಿರ್ವಹಣಾ ವೆಚ್ಚವೇ ಸರಿಸುಮಾರು 10 ಕೋಟಿಯಾಗಿದೆ. ಪ್ರತಿ ದಿನ ನಿರ್ವಹಣಾ ವೆಚ್ಚ ಹೆಚ್ಚುತ್ತಲೇ ಇರುತ್ತದೆ. ಹಾಗಾದರೆ ಇದನ್ನು ಗಮನಿಸಿ, ಸೂಕ್ತ ವ್ಯವಸ್ಥೆ ಮಾಡಬೇಕಿರುವ ಸರ್ಕಾರ ಏನು ಮಾಡುತ್ತಿದೆ? ಇದು ಹಿಂದಿನ ಸರ್ಕಾರದ ಕನಸಿನ ಕೂಸು, ನಾವೇಕೆ ಪೋಷಿಸಬೇಕು ಎಂಬ ತಾತ್ಸಾರವೇ? ಅಥವಾ ಮಾಡಿದರಾಯಿತು ಎಂಬ ಉಡಾಫೆಯೇ? ಆದರೆ ಇದೆಲ್ಲವನ್ನೂ ಮಾನ್ಯ ಮುಖ್ಯಮಂತ್ರಿಗಳೇ ವಿವರಿಸಬೇಕು.

ಖರ್ಚು, ವೆಚ್ಚವೇನು?

ಈ ಕಟ್ಟಡದ ನಿರ್ವಹಣೆಗೆ ಪ್ರತಿ ತಿಂಗಳು ಸರಿಸುಮಾರು 25ರಿಂದ 35 ಲಕ್ಷ ಅಗತ್ಯವಿದೆ. ಯಾವುದೇ ಕಾರ್ಯಕಲಾಪ ಇಲ್ಲದಿದ್ದರೂ ದಿನದ ಕೆಲವು ಅವಧಿಯ ಮಟ್ಟಿಗಾದರೂ ಇಲ್ಲಿಯ ಲಿಫ್ಟ್ ಕಾರ್ಯನಿರ್ವಹಿಸಬೇಕು. ಹವಾ ನಿಯಂತ್ರಿತ ವ್ಯವಸ್ಥೆಯನ್ನೂ ಸಹ ದಿನದ 1 ಗಂಟೆ ಮಟ್ಟಿಗಾದರೂ ಚಾಲು ಇಡಬೇಕು. ಧ್ವನಿವರ್ಧಕ ಸೇರಿದಂತೆ ಎಲ್ಲ ಎಲೆಕ್ಟ್ರಾನಿಕ್ಸ್ ಪರಿಕರಗಳನ್ನು ಪ್ರತಿ 10 ದಿನಕ್ಕೊಮ್ಮೆ ಪರೀಕ್ಷಿಸಬೇಕಾಗುತ್ತದೆ. ಇದರ ಜೊತೆಗೆ ಸುವರ್ಣ ವಿಧಾನಸೌಧದ ಸುತ್ತ ಪ್ರತಿದಿನ ವಿದ್ಯುತ್ ದೀಪ ಬೆಳಗಲೇ ಬೇಕು. ಒಳಾಂಗಣದ ದೀಪವನ್ನೂ ಕೆಲವು ಸಮಯ ಹೊತ್ತಿಸಲಾಗುತ್ತದೆ. ಇವೆಲ್ಲ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವುದರಿಂದ ಪ್ರತಿ ದಿನ ಇದನ್ನು ಪರಿಶೀಲಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಉಪಯೋಗಕ್ಕೆ ಬಾರದೆ ಹಾಳಾಗುವ ಸಂಭವೂ ಇರುತ್ತದೆ.

ಉದ್ದೇಶ ಏನಿತ್ತು?
ಉತ್ತರ ಕರ್ನಾಟಕದ ದೆಸೆ ಬದಲಿಸಬೇಕು. ಅಭಿವೃದ್ಧಿ ಪರ್ವಕ್ಕೆ ನಾಂದಿಯಾಗಬೇಕು. ಉತ್ತರಾಧಿಕಾರಕ್ಕೆ ಮುನ್ನುಡಿ ಬರೆಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿನ ಜನರ ಸಮಸ್ಯೆ ತ್ವರಿತ ಗತಿಯಲ್ಲಿ ಬಗೆಹರಿಯಬೇಕು ಎಂಬ ಮಹದೋದ್ದೇಶದಿಂದ ಹಿಂದಿನ ಸರ್ಕಾರ ಸುವರ್ಣ ವಿಧಾನಸೌಧ ನಿರ್ಮಿಸಿತ್ತು.

ಆದರೆ ಆಗಿದ್ದೇನು?

ಕಳೆದ ಡಿಸೆಂಬರ್‌ನಲ್ಲಿ 15 ದಿನದ ಅಧಿವೇಶನಕ್ಕೆ ಚಾಲನೆ ನೀಡಲಾಯಿತು. ಆದರೆ ಇಲ್ಲಿ ಉತ್ತರ ಕರ್ನಾಟಕಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗಲಿಲ್ಲ. ಸೌಧದ ಎದುರೇ ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಳ್ಳುವುದರ ಮೂಲಕ ಪರಿಸ್ಥಿತಿಯೇ ಕೈಮೀರಿತ್ತು. ಹೀಗಾಗಿ 15 ದಿನದ ಬದಲು ನಡೆದಿದ್ದು ಹತ್ತೇ ದಿನ. ನಂತರ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಯಾವುದೇ ಉಪಯೋಗಕ್ಕೂ ಬಾರದಂತಾಗಿದೆ.

ಉದ್ಯಾನ
ಇದರ ಜೊತೆಗೆ ಸೌಧದ ಭದ್ರತೆ, ಸ್ವಚ್ಛತೆ ಹಾಗೂ ಸುಮಾರು 10 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಉದ್ಯಾನವನದ ನಿರ್ವಹಣೆಗೆ 100 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅವರು ಸರತಿಯಂತೆ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಾರೆ. ಪ್ರತಿ ದಿನವೂ ಇಲ್ಲಿ ನಿರ್ಮಿಸಿರುವ ಉದ್ಯಾನ, ಹಸಿರಿನ ಮೇಲು ಹಾಸಿಗೆ ನೀರುಣಿಸಲಾಗುತ್ತಿದೆ. ಯಾರೂ ನೋಡಲು ಬಾರದಿದ್ದರೂ ವರ್ಷಕ್ಕೊಮ್ಮೆ ನಡೆಯುವ ಅಧಿವೇಶನದ ಹೊತ್ತಿಗೆ ಗಿಡಗಳು ನಳನಳಿಸುವಂತೆ ಕಾಣಬೇಕಾದರೆ ಉದ್ಯಾನ ನಿರ್ವಹಣೆ ಮಾಡಲೇಬೇಕು. ಇದಕ್ಕಾಗಿ 10.3 ಲಕ್ಷ ವೆಚ್ಚ ಮಾಡಲಾಗುತ್ತದೆ.

ಸ್ಥಳಾಂತರವಾಗದ ಕಚೇರಿ

ಈ ಭವ್ಯ ಸೌಧವನ್ನು 11-10-2012 ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಾರ್ಪಣೆ ಮಾಡಿದರು. ಅದರ ಬಳಿಕ ಎರಡು ಬಾರಿ ಅಧಿವೇಶನ ನಡೆದಿದ್ದು ಹಾಗೂ ಆಗೊಮ್ಮೆ ಈಗೊಮ್ಮೆ ಸರ್ಕಾರಿ ಸಮಿತಿಗಳ ಸಭೆ ನಡೆದಿದ್ದು ಬಿಟ್ಟರೆ ಉಳಿದಂತೆ ಕಟ್ಟಡ ನಿರುಪಯುಕ್ತವಾಗಿದೆ. ಕಟ್ಟಡ ನಿರ್ಮಾಣದ ಮೂಲ ಆಶಯವೇ ಈಡೇರಿಲ್ಲ. ಯಾವುದೇ ಸರ್ಕಾರಿ ಇಲಾಖೆ, ಕಚೇರಿಗಳು ಇಲ್ಲಿ ಸ್ಥಳಾಂತರಗೊಂಡಿಲ್ಲ. ಇಲ್ಲಿ ಉತ್ತರಾಧಿಕಾರ ನಡೆಯಲಿದೆ ಎಂಬ ನಂಬಿಕೆ, ಇಚ್ಛೆಯೂ ಕೈಗೂಡಿಲ್ಲ. ಶಕ್ತಿ ಸೌಧವಾಗಬೇಕಿದ್ದ ಈ ಕಟ್ಟಡ ಭೂತ ಬಂಗಲೆಯಂತಾಗಿದೆ. ಈ ಕಟ್ಟಡ ಸಾರ್ವಜನಿಕರ ಸೇವೆಗೆ ಮುಕ್ತಗೊಂಡಿಲ್ಲ.

ಉದಾಸೀನತೆ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವಂತೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದ ನೀರಾವರಿ ಇಲಾಖೆಯ ಕಚೇರಿಗಳು ಸ್ಥಳಾಂತರವಾಗಿಲ್ಲ. ಸಕ್ಕರೆ, ಕಬ್ಬಿಗೆ ಸಂಬಂಧಿಸಿದ ಇಲಾಖೆಯ ಕಚೇರಿ, ಜವಳಿ, ಕೈಮಗ್ಗಕ್ಕೆ ಸಂಬಂಧಿಸಿದ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಕಚೇರಿ ಇಲ್ಲಿಗೆ ಸ್ಥಳಾಂತರಿಸಲು ಅವಕಾಶವಿದ್ದರೂ ಇಚ್ಛಾಶಕ್ತಿ ಕೊರತೆ, ಮುಂದಾಲೋಚನೆ ಇಲ್ಲದ ನಿರ್ಧಾರ, ಉದಾಸೀನತೆಯಿಂದ ಕಟ್ಟಡ ಅನಾಥವಾಗಿದೆ. ಲೋಕೋಪಯೋಗಿ ಇಲಾಖೆಗೆ ಕಟ್ಟಡ ಮತ್ತು ಒಳಗಿನ ಪರಿಕರಗಳ ನಿರ್ವಹಣೆಯೇ ದೊಡ್ಡ ಸಮಸ್ಯೆಯಾಗಿದೆ.

-ಶ್ರೀಶೈಲ ಮಠದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement