ಕಬ್ಬು ಬೆಳೆಗಾರರ ಧರಣಿಗೆ ಇಂಡಿ, ಸಿಂದಗಿ ರೈತರ ಬೆಂಬಲ
ಬಿಜಾಪುರ: ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿರುವ ಅಹೋರಾತ್ರಿ ಧರಣಿ ಬೆಂಬಲಿಸಿ ಇಂಡಿ, ಸಿಂದಗಿ ತಾಲೂಕಿನ ರೈತರು ಬುಧವಾರ ಧರಣಿಯಲ್ಲಿ ಪಾಲ್ಗೊಂಡು ಹೋರಾಟ ಚುರುಕುಗೊಳಿಸಿದರು. ಈ ನಡುವೆ, ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿ ಎದುರು ಕೈಗೊಂಡ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿದೆ.
ಸಭೆಗೆ ಆಹ್ವಾನ: ಸ್ವಾಗತಾರ್ಹ: ಕಬ್ಬು ಬೆಳೆಗಾರರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಒಡೆಯರ್ ಮಾತನಾಡಿ, ಅಹೋರಾತ್ರಿ ಹೋರಾಟಕ್ಕೆ 10 ದಿನದೊಳಗೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಯ 5 ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಹಾಗೂ ಜಿಲ್ಲೆಯ ಶಾಸಕರಿಗೆ ಮತ್ತು ಐವರು ರೈತ ಹೋರಾಟಗಾರರ ಮುಖಂಡರಿಗೆ ಬೆಂಗಳೂರಿನಲ್ಲಿ ನಡೆಯುವ ಸಭೆಗೆ ಬರಲಿಕ್ಕೆ ಆಹ್ವಾನ ನೀಡಿದೆ. ನಮ್ಮ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆ ಎಂದರು.