ಪರೀಕ್ಷಾ ಸಂಹಿತೆಗೆ ಜೀವ?
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜೂ.25
ಪರೀಕ್ಷಾ ನೀತಿಸಂಹಿತೆ ಬಗ್ಗೆ ಶಿಕ್ಷಣ ಇಲಾಖೆ ಮತ್ತೆ ತಲೆ ಕೆಡಿಸಿಕೊಂಡಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಮೂಲಕ ಇಲಾಖೆಯ ಮರ್ಯಾದೆ ಹರಾಜಾದ ಬಳಿಕ ಪರೀಕ್ಷಾ ನೀತಿಸಂಹಿತೆ ರಚನೆ ಕಡತದ ಮೇಲಿನ ಧೂಳು ಒರೆಸಲು ಅಧಿಕಾರಿಗಳು ಮುಂದಾಗಿದ್ದಾರೆ. ಪರೀಕ್ಷಾ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ನಿಯಂತ್ರಣಕ್ಕೆ ಸರ್ಕಾರ ಚಿಂತಿಸಿದೆ.
ಕಳೆದ ಅಕ್ಟೋಬರ್ನಲ್ಲಿಯೇ ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆಯು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಬಗ್ಗೆ 'ಕನ್ನಡಪ್ರಭ' ವಿವರ ವರದಿ ಪ್ರಕಟಿಸಿತ್ತು. ಆದರೆ ನಂತರದ ದ್ವಿತೀಯ ಪಿಯುಸಿ, ಎಸ್ಎಸ್ಎಲ್ಸಿ ಹಾಗೂ ಟಿಇಟಿ ಸೇರಿ ಎಲ್ಲ ಪ್ರಮುಖ ಪರೀಕ್ಷೆಗಳಲ್ಲಿ ಈ ಸಂಹಿತೆ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದ್ದು, ನೂತನ ಪರೀಕ್ಷಾ ಸಂಹಿತೆ ಜಾರಿಗೊಳಿಸಲು ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಧನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಸಂಬಂಧಪಟ್ಟ ಕಾನೂನು ಹಾಗೂ ಗೃಹ ಇಲಾಖೆ ಜತೆ ಚರ್ಚಿಸುವ ಭರವಸೆ ನೀಡಿದ್ದಾರೆ.
3 ತಿಂಗಳಲ್ಲಿ 15 ಸಾವಿರ ಶಿಕ್ಷಕರ ನೇಮಕ
ವಿಧಾನಸಭೆ: ರಾಜ್ಯದಲ್ಲಿ 28 ಸಾವಿರ ಶಿಕ್ಷಕರ ಕೊರತೆ ಇದ್ದು, ಸುಮಾರು 15 ಸಾವಿರ ಶಿಕ್ಷಕರನ್ನು ಅಕ್ಟೋಬರ್ಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ. 11 ಸಾವಿರ ಶಿಕ್ಷಕರ ನೇಮಕಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದೆ. ಇನ್ನೂ ಐದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಸಿಎಂ ಮೌಖಿಕ ಆದೇಶ ನೀಡಿದ್ದಾರೆ. ಸುಮಾರು 15 ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ನ ತುಕಾರಾಮ್ ಪ್ರಶ್ನೆಗೆ ಉತ್ತರಿಸಿದರು. ಪ್ರಾಥಮಿಕ ಶಾಲೆಗಳಲ್ಲಿ 9,045 ಮತ್ತು ಪ್ರೌಢಶಾಲೆಗಳಲ್ಲಿ 1,137 ಅತಿಥಿ ಶಿಕ್ಷಕರನ್ನು ನೇಮಿಲು ಆದೇಶಿಸಿದೆ.
ಟಿಇಟಿ: ಕೊಪ್ಪಳದಲ್ಲಿ ಸಿಸಿಬಿ
ಕೊಪ್ಪಳ: ಟಿಇಟಿ ಪ್ರಶ್ನೆಪತ್ರಿಕೆ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಕೊಪ್ಪಳದಲ್ಲಿ ಬುಧವಾರ ಮಾಹಿತಿ ಕಲೆ ಹಾಕಿದರು. ಎಸಿಪಿ ನಾಗರಾಜ ನೇತೃತ್ವದ 8 ಮಂದಿ ಪೊಲೀಸರ ತಂಡ ವಿವಿಧೆಡೆ ಗುಪ್ತ ಮಾಹಿತಿ ಸಂಗ್ರಹಿಸಿತು. ತನಿಖೆ ವೇಳೆ ಮಹತ್ವದ ಮಾಹಿತಿ ಲಭ್ಯವಾಗಿವೆ ಎನ್ನಲಾಗಿದೆ. ತಂಡ ಸ್ಥಳೀಯ ಪೊಲೀಸರನ್ನೂ ಸಂಪರ್ಕಿಸಿಲ್ಲ. ಮಾಧ್ಯಮದವರೊಂದಿಗೆ ಮಾತನಾಡಲೂ ನಿರಾಕರಿಸಿದ್ದಾರೆ. ಅಕ್ರಮದಲ್ಲಿ ನೇರವಾಗಿ ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವ ಅನುಮಾನ ಬಲವಾಗಿದೆ.
ಏನಿದು ಸಂಹಿತೆ?
ಇದರ ಪರೀಕ್ಷೆಗೆ ಕೆಲ ದಿನಗಳ ಮುಂಚೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳಲ್ಲಿ ಭಾಗಿಯಾದ ಆರೋಪಿಗಳು, ಶಂಕಿತರನ್ನು ಬಂಧಿಸಿ ಸರ್ಕಾರ ವಶದಲ್ಲಿರಿಸಿಕೊಳ್ಳುತ್ತದೆ. ಪರೀಕ್ಷೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ರೀತಿ ಚುನಾವಣೆ ಸಂದರ್ಭದಲ್ಲಿಯೂ ನಡೆಯುತ್ತದೆ. ರೌಡಿ ಶೀಟರ್ಗಳನ್ನು ಬಂಧಿಸಿ ಯಾವುದೇ ಅಚಾತುರ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಈ ಪರೀಕ್ಷಾ ಸಂಹಿತೆ ಪ್ರಕಾರ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುತ್ತದೆ.