ಮೂಷಕ ದರಬಾರು: ಬೇಕಿದೆ ಕಿಂದರಜೋಗಿ ನೆರವು
ಮನುಷ್ಯರಿಗೆ ನಾಯಿ ಕಚ್ಚಿದ್ದೂ ಸುದ್ದಿಯಾಯಿತು. ಈಗ ಇಲಿ, ಹೆಗ್ಗಣಗಳ ಪಾಳಿ...
ಬೆಂಗಳೂರು: ಮನುಷ್ಯರಿಗೆ ನಾಯಿ ಕಚ್ಚಿದ್ದೂ ಸುದ್ದಿಯಾಯಿತು. ಈಗ ಇಲಿ, ಹೆಗ್ಗಣಗಳ ಪಾಳಿ. ಬೆಂಗಳೂರಿನ ಜನ ಇಲಿ, ಹೆಗ್ಗಣಗಳಿಗೂ ಹೆದರಲೇಬೇಕಾದ ಕಾಲ ದೂರವಿಲ್ಲ.
ಹಾಸನದ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿದ್ದ ಮಗುವಿನ ಶವ ಇಲಿ, ಹೆಗ್ಗಣ ಪಾಲಾದ ಘಟನೆ ನೋಡಿದರೆ, ಬೆಂಗಳೂರು ಜನರಿಗೂ ಅಂತಹ ದಿನಗಳು ದೂರವೇನಿಲ್ಲ. ಏಕೆಂದರೆ, ಬೆಂಗಳೂರಿನಲ್ಲಿ ಇಲಿ, ಹೆಗ್ಗಣಗಳ ಸಂಖ್ಯೆ ವಿಪರೀತ. ಹೋಟೆಲ್, ಆಸ್ಪತ್ರೆ, ಸರ್ಕಾರಿ ಕಚೇರಿ, ಅಪಾರ್ಟ್‌ಮೆಂಟ್, ಗೋದಾಮು, ತರಕಾರಿ ಅಂಗಡಿ, ಕಿರಾಣಿ ಅಂಗಡಿ, ಸಂತೆ ಮೈದಾನ, ದೊಡ್ಡ ದೊಡ್ಡ ಮಾಲ್, ಕೊನೆಗೆ ಮನೆ... ಹೀಗೆ ಇಲಿ ಇಲ್ಲದ ಜಾಗವೇ ಇಲ್ಲ. ಕೆಲವೆಡೆ ಖಾಲಿ ಕಟ್ಟಡ ಇಲಿ, ಹೆಗ್ಗಣಗಳ ಗೂಡು.
ಊರೆಂದ ಮೇಲೆ ಇಲಿ, ಹೆಗ್ಗಣ ಸಾಮಾನ್ಯವೇ, ಆದರೆ, ಬೆಂಗಳೂರಿನವಕ್ಕೂ ಹಳ್ಳಿಗಳಲ್ಲಿನ ಇಲಿ, ಹೆಗ್ಗಣಗಳಿಗೂ ಗಾತ್ರದಲ್ಲಿ ಅಜಗಜಾಂತರ. ಸ್ವಭಾವದಲ್ಲೂ. ಇವು ಗಾತ್ರದಲ್ಲಿ ಮುಂಗುಸಿಗಳನ್ನು ಮೀರಿಸುತ್ತವೆ. ಮನುಷ್ಯರ ಭಯವಂತೂ ಇಲ್ಲವೇ ಇಲ್ಲ. ರಾತ್ರಿಯಾಯಿತೆಂದರೆ ಕಾರ್ಯಾಚರಣೆ ಆರಂಭ.
ಹಾಗಂತ, ಇವು ಸಿಕ್ಕವರನ್ನೆಲ್ಲ ತಿಂದು ಹಾಕಿ ಬಿಡಬಲ್ಲವೇ ಎಂದು ತಮಾಷೆ ಮಾಡಿ ನಿರ್ಲಕ್ಷಿಸುವಂತಿಲ್ಲ. ಮನುಷ್ಯನನ್ನು ಇಡೀಯಾಗಿ ತಿನ್ನುವುದಿರಲಿ, ಇವು ಕಚ್ಚಿದರು ಕೂಡ, ಹುಚ್ಚು ನಾಯಿ ಕಡಿತದಷ್ಟೇ ಅಪಾಯಕಾರಿ. ವೈದ್ಯ ಶಾಸ್ತ್ರದ ಪ್ರಕಾರ ಕನಿಷ್ಠ ಹತ್ತು ದಿನ ಚಿಕಿತ್ಸೆ ಅಗತ್ಯ.
ಹೋಟೆಲ್‌ಗೂ ಕಿರಿಕಿರಿ: ಹೋಟೆಲ್‌ಗಳಲ್ಲಿಂತೂ ಇಲಿ, ಹೆಗ್ಗಣಗಳ ಕಿರಿಕಿರಿ ವಿಪರೀತ. ಸ್ವಲ್ಪ ಯಾಮಾರಿದರೂ ತಿಂಡಿ ತಿನಿಸುಗಳು, ತರಕಾರಿಗಳು ನಾಪತ್ತೆಯಾಗುತ್ತವೆ. ಅಷ್ಟೇ ಅಲ್ಲ, ಬಳಸುವ ಆಹಾರ ಪದಾರ್ಥಗಳನ್ನು ಅವು ಸ್ಪರ್ಶ ಮಾಡುವುದರಿಂದ, ತರಕಾರಿಗಳನ್ನು ಕಚ್ಚಿ ಬಿಟ್ಟು ಹೋಗುವುದರಿಂದ ಲೇಪ್ಟೋ ಪೈರೋಸಿಸ್ ಎಂಬ ಬ್ಯಾಕ್ಟೀರಿಯಾ ಹರಡಿ, ಮನುಷ್ಯರಿಗೆ ಮಾರಕ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಇದರಿಂದ ಇಲಿ, ಹೆಗ್ಗಣಗಳಿಂದ ಗೋಡೌನ್‌ಗಳಲ್ಲಿ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳಗಳನ್ನು ಸುರಕ್ಷಿತವಾಗಿಡುವುದೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
ಕಚ್ಚಿದರೆ ಅಪಾಯಕಾರಿ: ಇಲಿ ಕಚ್ಚಿದರೆ ನಿರ್ಲಕ್ಷ್ಯ ಮಾಡುವ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ. ಇಲಿ, ಹೆಗ್ಗಣಗಳು ಮನುಷ್ಯರನ್ನು ಕಚ್ಚುವುದರಿಂದ ಅಪಾಯವೂ ಇದೆ. ಸಾಮಾನ್ಯವಾಗಿ ಇಲಿ, ಹೆಗ್ಗಣಗಳು ಕೊಳಚೆ ಪ್ರದೇಶಗಳಲ್ಲಿರುವುದರಿಂದ ಲೆಪ್ಟೋ ಪೈರೋಸಿಸ್ ಎಂಬ ಬ್ಯಾಕ್ಟರಿಯಾಗಳಿಗೆ ಒಳಗಾಗಿರುತ್ತದೆ. ಇಂತಹ ಇಲಿ ಹೆಗ್ಗಣ ಮನುಷ್ಯರನ್ನು ಕಚ್ಚುವುದರಿಂದ ಜ್ವರ, ಧನುರ್ವಾಯುವಿನಂತಹ ಕಾಯಿಲೆಗಳು ಬರುವ ಸಾಧ್ಯತೆಗಳು ಹೆಚ್ಚಿವೆ. ಅದರಲ್ಲೂ ಬೆಂಗಳೂರಿನಲ್ಲಿರುವ ಇಲಿ, ಹೆಗ್ಗಣಗಳು ಇಂತಹ ಬ್ಯಾಕ್ಟೀರಿಯಾಗಳಿಂದ ಹೆಚ್ಚು ಒಳಗಾಗಿರುತ್ತವೆ. ಇದರಿಂದ ಇಲಿ, ಹೆಗ್ಗಣಗಳನ್ನು ನಿರ್ಮೂಲನೆ ಮಾಡುವುದು ತೀರಾ ಅಗತ್ಯ ಎನ್ನುತ್ತಾರೆ ವೈದ್ಯರಾದ ಡಾ. ನಾ. ಸೋಮೇಶ್ವರ್.
ರಕ್ತ ರುಚಿ ನೋಡಿದರೆ: ಸಾಮಾನ್ಯವಾಗಿ ಆಹಾರ ಪದಾರ್ಥಗಳು ಲಭ್ಯವಾಗದ ಸಂದರ್ಭದಲ್ಲಿ ಇಲಿ, ಹೆಗ್ಗಣಗಳು ಮನುಷ್ಯರ ಮೇಲೂ ದಾಳಿ ಮಾಡುತ್ತವೆ. ಅಂತಹ ಸಂದರ್ಭದಲ್ಲಿ ಅವು ರಕ್ತದ ರುಚಿ ಕಂಡರೆ ಮಕ್ಕಳ ಮೇಲೂ ಅವು ದಾಳಿ ಮಾಡುವ ಆತಂಕವಿದೆ. ಹಾಸನದ ಜಿಲ್ಲಾ ಆಸ್ಪತ್ರೆ ಶವಾಗಾರದಲ್ಲಿ ಮಗುವಿನ ಮೃತ ದೇಹ ತಿಂದ ಇಲಿ, ಹೆಗ್ಗಣಗಳು ಇದೇ ಗುಂಪಿಗೆ ಸೇರಿದವು. ಇಂತಹ ಆತಂಕ ಇಲ್ಲಿಯೂ ಇದೆ ಎನ್ನುತ್ತಾರೆ ಸ್ಥಳೀಯರಾದ ರಮೇಶ್.
ಗಾಡಿ ಲಗಾಡಿ: ಸಂಜೆ ಪಾರ್ಕ್ ಮಾಡಿದ್ದ ವಾಹನ ಬೆಳಗ್ಗೆ ಬಂದು ನೋಡಿದರೆ ಸ್ಟಾರ್ಟ್ ಆಗುವುದೇ ಇಲ್ಲ. ಸ್ಟಾರ್ಟ್ ಆದರೂ ಮಧ್ಯದಲ್ಲಿ ಅನಾಹುತ ಗ್ಯಾರಂಟಿ. ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಇಲಿ, ಹೆಗ್ಗಣಗಳಿಂದ. ರಾತ್ರಿ ಕೆಳಭಾಗದಿಂದ ಕಾರು ಹೊಕ್ಕುವ ಇವು. ವಯರ್‌ಗಳನ್ನು ಕತ್ತರಿಸುವ ಕತರ್ನಾಕ್ ಕೆಲಸ ಮಾಡುತ್ತವೆ. ಒಂದೆರಡು ತಾಸಿನಲ್ಲಿ ನಿಮ್ಮ ಗಾಡಿಯನ್ನು ಲಗಾಡಿತೆಗೆಯುವ ತಾಕತ್ತು ಇವಕ್ಕಿದೆ. ಕೆಲವೊಮ್ಮೆ ಟಯರ್, ಮಡ್‌ಪ್ಲ್ಯಾಬ್, ಬಂಪರ್‌ಗಳನ್ನು ಕೂಡ ಇವು ಮುಕ್ಕಾಗಿಸುತ್ತವೆ.
ವಾಶಿಂಗ್ ಮೆಷಿನ್‌ಗಳಿಗೇನೊ ರ್ಯಾಟ್‌ಮೆಶ್‌ಗಳು ಬಂದಿವೆ. ಆದರೆ ಗಾಡಿಗಳಿಗೆ ಅಂತಹ ಮೆಶ್‌ಗಳು ಬಂದಿಲ್ಲ. ಈ ಸಮಸ್ಯೆ ಸಾಮಾನ್ಯವಾಗಿ ರಸ್ತೆಯಲ್ಲಿ ವಾಹನ ಪಾರ್ಕ್ ಮಾಡುವ ಮತ್ತು ಅಪರೂಪಕ್ಕೆ ವಾಹನ ಬಳಸುವವರಿಗೆ ಹೆಚ್ಚು.
ಸೊಳ್ಳೆ, ನಾಯಿ ನಿಯಂತ್ರಣಕ್ಕೆ ಸೂಕ್ತ ಕ್ರಮ ತೆಗೆದುಕೊಂಡಂತೆ ಬಿಬಿಎಂಪಿ, ಇಲಿ,ಹೆಗ್ಗಣ ಕಾಟಕ್ಕೂ ಕಡಿವಾಣ ಹಾಕಬೇಕಿದೆ. ಬಿಬಿಎಂಪಿ ಆರೋಗ್ಯ ವಿಭಾಗದಲ್ಲಿ ಈ ಕಾರ್ಯಚರಣೆಗಾಗಿಯೇ ಪ್ರತ್ಯೇಕ ಪಡೆ ಸ್ಥಾಪಿಸಬೇಕಿದೆ. ಆ ಮೂಲಕ ಸಮರೋಪಾದಿಯಲ್ಲಿ ಕೆಲಸ ಶುರುಮಾಡಬೇಕಿದೆ. ಇಲ್ಲದಿದ್ದರೆ, ಇಲಿ, ಹೆಗ್ಗಣ ನಗರದಲ್ಲಿ ಮತ್ತಷ್ಟು ಹೆಚ್ಚಾಗಿ ಅನಾಹುತ ಹೆಚ್ಚಾಗಲಿದೆ.
- ವಾಸುದೇವ್ ಅಡಿಗ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ
ಹೆಚ್ಚಾಗಿದ್ದು ಹೇಗೆ ?
ಬೆಂಗಳೂರೆಂಬ ಸುಂದರ ನಗರಿ ಇವತ್ತು ಇಲಿ, ಹೆಗ್ಗಣಗಳ ತವರೂರು ಎಂದಾಗಿರುವುದಕ್ಕೂ ಕಸವೇ ಕಾರಣ. ತರಕಾರಿ ಅಂಗಡಿ, ಸಂತೆ ಮೈದಾನ, ಕೆಲ ಹೋಟೆಲ್‌ಗಳ ಸುತ್ತ ಯಥೇಚ್ಛ ಆಹಾರ ಪದಾರ್ಥ ಅವುಗಳಿಗೆ ಲಭ್ಯವಾಗುತ್ತಿದೆ. ಇದರಿಂದ ಇಲಿ, ಹೆಗ್ಗಣಗಳ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ಸಾರ್ವನಿಕರ ದೂರು. ಇದಕ್ಕೆ ಮಹಾನಗರ ಪಾಲಿಕೆ ನಿರ್ಲಕ್ಷವೂ ಕಾರಣವಿದೆ. ಇಲಿ, ಹೆಗ್ಗಣಗಳ ನಿಯಂತ್ರಣಕ್ಕೆ ಪಾಲಿಕೆ ಇಂದಿಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆ ಪಕ್ಷ, ಇಲಿ, ಹೆಗ್ಗಣಗಳಿಂದ ಜನರಿಗೆ ತೊಂದರೆಯಾಗಬಹುದೆಂದು ಪಾಲಿಕೆ ಭಾವಿಸಿದಂತೆಯೂ ಇಲ್ಲ. ಅಥವಾ ನಾಯಿಯಂತೆ ಇಲಿ-ಹೆಗ್ಗಣಗಳು ಜನರಿಗೆ ಕಚ್ಚಿ ದೊಡ್ಡ ವಿವಾದವಾಗುವುದನ್ನು ಕಾಯುತ್ತಿದೆಯೋ ಏನೊಯ
-ದೇಶಾದ್ರಿ ಹೊಸಮನೆ