ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಹಳಿ ತಪ್ಪಿದ ರಾಜಧಾನಿ ಎಕ್ಸ್‌ಪ್ರೆಸ್: ನಾಲ್ಕು ಸಾವು

Vishwanath S
Updated On : 26 Jun 2014, 10:17 am

ಪಟನಾ: ಪೊಲೀಸ್ ದೌರ್ಜನ್ಯದ ವಿರುದ್ಧ ಮಾವೋವಾದಿ ನಕ್ಸಲರು ಬಂದ್‌ಗೆ ಕರೆ ನೀಡಿದ್ದ ದಿನವೇ ಬಿಹಾರದಲ್ಲಿ ಎರಡು ರೇಲ್ವೆ ಅಪಘಾತಗಳು ಸಂಭವಿಸಿವೆ.
ಮೊದಲ ಘಟನೆಯಲ್ಲಿ ಸರನ್ ಜಿಲ್ಲೆಯ ಛಪ್ರಾ ಬಳಿ ದೆಹಲಿ-ದಿಬ್ರುಗಡ ರಾಜಧಾನಿ ಎಕ್ಸ್‌ಪ್ರೆಸ್‌ನ 12 ಬೋಗಿಗಳು ಹಳಿತಪ್ಪಿ ನಾಲ್ವರು ಸಾವನ್ನಪ್ಪಿದರೆ, ಇನ್ನೊಂದು ಪ್ರಕರಣದಲ್ಲಿ ಇಲ್ಲಿಂದ 60 ಕಿ.ಮೀ ದೂರದಲ್ಲಿ ಹಳಿ ಸ್ಫೋಟಿಸಿದ್ದರಿಂದ ಗೂಡ್ಸ್ ರೈಲು ಹಳ್ಳಿ ತಪ್ಪಿದೆ. ಗೂಡ್ಸ್ ರೈಲು ಹಳ್ಳಿ ತಪ್ಪಿದ್ದರ ಹಿಂದೆ ಮಾವೋವಾದಿಗಳ ಕೈವಾಡ ಶಂಕಿಸಲಾಗಿದೆ. ರಾಜಧಾನಿ ಎಕ್ಸ್‌ಪ್ರೆಸ್ ಪ್ರಕರಣದಲ್ಲಿ ನಕ್ಸಲರ ಪಾತ್ರವಿರುವಂತೆ ಕಾಣುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಮತ್ತು ರೇಲ್ವೆ ಸಚಿವಾಲಯಗಳು ಹೇಳಿವೆ. ಆದರೆ, ಇಲ್ಲಿಯೂ ಹಳಿ ಸ್ಫೋಟವಾಗಿದೆ ಎಂದು ರೇಲ್ವೆ ಮಂಡಳಿ ಅಧ್ಯಕ್ಷ ಅರುಣೇಂದ್ರಕುಮಾರ್ ಹೇಳಿದ್ದಾರೆ. ಅದೂ ಅಲ್ಲದೆ ಸರನ್, ಗೋಪಾಲ್‌ಗಂಜ್, ಮುಜಾಪ್ಫರ್‌ನಗರ ಮತ್ತು ಸಿವಾನ್ ಜಿಲ್ಲೆಗಳಲ್ಲಿ ಬುಧವಾರದ ಬಂದ್ ವೇಳೆ ವಿಧ್ವಂಸಕ ಕೃತ್ಯಗಳು ನಡೆಯುವ ಸಾಧ್ಯತೆ ಕುರಿತು ಇಂಟೆಲಿಜೆನ್ಸ್ ಬ್ಯೂರೊ ಕೇಂದ್ರಕ್ಕೆ ಮಾಹಿತಿ ನೀಡಿತ್ತು ಎನ್ನಲಾಗಿದೆ.
ಪಟನಾದಿಂದ 75 ಕಿ.ಮೀ ದೂರದಲ್ಲಿರುವ ಛಪ್ರಾ ಬಳಿಯ ಗೋಲ್ಡನ್ ಗಂಜ್ ನಿಲ್ದಾಣದ ಬಳಿ ರಾಜಧಾನಿ ಎಕ್ಸ್‌ಪ್ರೆಸ್ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಹಳಿತಪ್ಪಿತು. ನಾಲ್ವರು ಸಾವನ್ನಪ್ಪಿದ್ದು, 23 ಜನ ಗಾಯಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರೇಲ್ವೆ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ರಾಜೀವ್ ಪ್ರತಾಪ್ ರೂಡಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತರ ಕುಟುಂಬಗಳಿಗೆ ತಲಾ ರು. 2 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ರು. 1 ಲಕ್ಷ ಹಾಗೂ ಸಣ್ಣ ಪ್ರಮಾಣದಲ್ಲಿ ಗಾಯಗೊಂಡವರಿಗೆ ರು. 20 ಸಾವಿರ ಪರಿಹಾರ ಘೋಷಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ರಾಜಧಾನಿ ಎಕ್ಸ್‌ಪ್ರೆಸ್ ಹಳಿ ತಪ್ಪಲು ಕಾರಣ ಎಂದು ಮಾಜಿ ರೇಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಆರೋಪಿಸಿದ್ದಾರೆ.  
ಪ್ರಧಾನಿ ಸಂತಾಪ: ಅವಘಡದಲ್ಲಿ ಸಾವನ್ನಪ್ಪಿರುವವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement