ಕೈ ಹಿಡಿದು ನಡೆಸುತ್ತಿರುವ ಗ್ರಾಮೀಣ ಯುವತಿಯರು
ಸ್ಫುರದ್ರೂಪಿಯಾಗಿಲ್ಲ ಎಂಬ ಪುಟ್ಟ ಕಾರಣಕ್ಕೆ..
ತುಮಕೂರು: ಸ್ಫುರದ್ರೂಪಿಯಾಗಿಲ್ಲ ಎಂಬ ಪುಟ್ಟ ಕಾರಣಕ್ಕೆ ಹುಡುಗರನ್ನು ತಿರಸ್ಕರಿಸುವ ಯುವತಿಯರಿಗೆ ಅಪವಾದ ಇವರು!
ಕಣ್ಣಿಲ್ಲದ, ತೆವಳುತ್ತ್ತ ಓಡಾಡುವ, ಹುಟ್ಟಿ ನಿಂದಲೇ ಅಂಗವೈಕಲ್ಯವಿರುವರನ್ನು ತುಮಕೂರಿನ ಯುವತಿಯರು ಮದುವೆಯಾಗಿ ಆದರ್ಶ ಮೆರೆಯುತ್ತಿದ್ದಾರೆ. 10 ತಿಂಗಳಲ್ಲಿ ಜಿಲ್ಲೆಯಲ್ಲಿ ಭರ್ತಿ 27 ಯುವತಿಯರು ವಿಕಲಚೇತನರನ್ನು ಕೈ ಹಿಡಿದಿದ್ದಾರೆ.
ಗ್ರಾಮೀಣರು: ಯಾರದ್ದೋ ಒತ್ತಡಕ್ಕೆ ಬಿದ್ದು ಇವರು ಈ ನಿರ್ಧಾರ ಕೈಗೊಳ್ಳುತ್ತಿಲ್ಲ. ಅವಿದ್ಯಾವಂತರೂ ಅಲ್ಲ. ವಿಶೇಷವೆಂದರೆ ಇಂಥ ಬೆಳವಣಿಗೆ ನಡೆಯುತ್ತಿರುವುದು ಗ್ರಾಮೀಣ ಭಾಗದಲ್ಲಿ. ಚಿಕ್ಕದಾಸರಹಳ್ಳಿ, ಕಿಲಾರದಹಳ್ಳಿ, ಬುಕ್ಕಾಪಟ್ಟಣ, ಹೊನ್ನಗೊಂಡನಹಳ್ಳಿ, ಕ್ವಾದಿಗುಂಟೆ, ಗಜಮಾರನಹಳ್ಳಿ, ಬಂದಕುಂಟೆ, ಬ್ರಹ್ಮಸಂದ್ರ, ಹುಲಿಕುಂಟೆ ಹೋಬಳಿ ಎಂ.ಜಿ. ಪಾಳ್ಯ ಮಸ್ಕಲ್ಲು ಮುಂತಾದೆಡೆ ಹೀಗೆ ಸಪ್ತಪದಿ ತುಳಿದಿದ್ದಾರೆ.
ಸಮಾಜಕ್ಕೆ ಮಾದರಿ: ಶಿರಾ ತಾಲೂಕಿನಲ್ಲೇ ಇಂಥ 16 ಪ್ರಕರಣಗಳು ನಡೆದಿವೆ. ತಿಪಟೂರು, ಪಾವಗಡ, ಗುಬ್ಬಿಯಲ್ಲಿ ತಲಾ ಇಬ್ಬರು ಹಾಗೂ ಕುಣಿಗಲ್ ನಲ್ಲಿ 3 ಯುವತಿಯರು ವಿಕಲಾಂಗರನ್ನು ಮದುವೆಯಾಗಿದ್ದಾರೆ. ಚಿಕ್ಕದಾಸರಹಳ್ಳಿಯ ರಾಜಣ್ಣ ಎಂಬು ವರಿಗೆ ಎರಡೂ ಕಾಲಿಲ್ಲ. ಅಕ್ಷರಶಃ ತೆವಳಿ ಹೋಗಬೇಕಾದ ಅನಿವಾರ್ಯ ಇದೆ. ಇವ ರನ್ನು ಅದೇ ಗ್ರಾಮದ ಬಿ.ಟಿ. ಭಾಗ್ಯ ಎಂಬಾಕೆ ಮದುವೆಯಾಗಿದ್ದಾರೆ. ಹಾಗೆಯೇ ಬುಕ್ಕಾಪಟ್ಟಣದಲ್ಲಿ ಕಣ್ಣಿಲ್ಲದ ಯುವಕನನ್ನು ಚಂದ್ರಕಲಾ ಎಂಬಾಕೆ ಮದುವೆಯಾಗಿದ್ದಾರೆ.
ಅದೇ ಗ್ರಾಮದ ಗೂನು ಯುವಕ ರಾಮಯ್ಯನಿಗೆ ಬೆನ್ನೆಲುಬಾಗಿ ನಿಂತವಳು ಶಾಂತಮ್ಮ. ಹಾಗೆಯೇ ಹೊನ್ನಗೊಂಡನಹಳ್ಳಿಯ ಸರೋಜ, ಕ್ವಾದಿಗುಂಟೆಯ ಲಕ್ಷ್ಮೀ, ಗಜಮಾರನಹಳ್ಳಿಯ ಮಹಾಲಕ್ಷ್ಮೀ, ಹೆಂದೊರೆಯ ಕೆಂಪಮ್ಮ, ಬ್ರಹ್ಮಸಂದ್ರದ ಲೀಲಾವತಿ ಮುಂತಾದವರು ಅಂಗವಿಕಲರನ್ನು ವರಿಸಿದ್ದಾರೆ. ಅಲ್ಲದೇ, ಕೈ ಇಲ್ಲದವರು, ನಡೆಯಲು ಆಗದವರು, ಮೂಗರು, ಕಿವುಡರಿಗೂ ಕಂಕಣಭಾಗ್ಯ ಕೂಡಿಬಂದಿದೆ.
ಅಂಗವಿಕಲರಿಗೆ ಅನುಕಂಪ ಬೇಡ. ಬದುಕಿಗೆ ಊರುಗೋಲು ಆಗಬೇಕೆಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡೆ.
- ಬಿ.ಟಿ. ಭಾಗ್ಯ
-ಉಗಮ ಶ್ರೀನಿವಾಸ್