ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಜನರ ಪ್ರೀತಿಯೇ ನಮಗೆ ಸ್ಫೂರ್ತಿ

ಕೇಂದ್ರ ಸರ್ಕಾರ ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ...

Vishwanath S
Updated On : 27 Jun 2014, 12:10 pm

ಕೇಂದ್ರ ಸರ್ಕಾರ ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬ್ಲಾಗ್‌ನಲ್ಲಿ ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಜನರು ತಮ್ಮ ಮೇಲಿಟ್ಟಿರುವ ನಂಬಿಕೆಗೆ ತಾನು ಚಿರಋಣಿ ಎಂದಿದ್ದಾರೆ ಮೋದಿ. ಅವರ ಬ್ಲಾಗ್‌ನ ಪೂರ್ಣಪಾಠ ಇಲ್ಲಿದೆ:
ಒಲವಿನ ಗೆಳೆಯರೇ,
ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರ್ಣಗೊಂಡಿದೆ. ಜನರ ಬೆಂಬಲ ಮತ್ತು ಪ್ರೀತಿ ಅಭೂತಪೂರ್ವವಾಗಿ ಸಿಗುತ್ತಿದ್ದು, ಇದು ನಮಗೆ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡಲು ಸ್ಫೂರ್ತಿ ನೀಡುತ್ತಿದೆ.
ಈ ಹಿಂದಿನ 67 ವರ್ಷಗಳ ಸರ್ಕಾರಗಳಿಗೆ ಹೋಲಿಸಿದರೆ ನಮ್ಮ 1 ತಿಂಗಳು ಏನೂ ಅಲ್ಲ. ಆದರೂ ನಾನು ಹೇಳಲು ಬಯಸುವುದೇನೆಂದರೆ ಕಳೆದ ತಿಂಗಳಲ್ಲಿ ನಮ್ಮ ಇಡೀ ತಂಡವು ಪ್ರತಿಯೊಂದು ಕ್ಷಣವನ್ನೂ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿತ್ತು. ನಾವು ತೆಗೆದುಕೊಂಡ ಪ್ರತಿಯೊಂದು ನಿರ್ಧಾರವೂ ರಾಷ್ಟ್ರೀಯ ಹಿತಾಸಕ್ತಿಯನ್ನಷ್ಟೇ ಹೊಂದಿತ್ತು.
ತಿಂಗಳ ಹಿಂದೆ ನಾವು ಅಧಿಕಾರಕ್ಕೇರಿದಾಗ, ನಾನು ಈ ಜಾಗಕ್ಕೆ ಹೊಸಬ ಎಂದು ನನಗನಿಸುತ್ತಿತ್ತು. ಇನ್ನೂ ಅನೇಕರು ಕೇಂದ್ರ ಸರ್ಕಾರದ ಕಾರ್ಯವೈಖರಿಯ ಕ್ಲಿಷ್ಟತೆಯನ್ನು ಅರಿಯಲು ನನಗೆ ಕನಿಷ್ಠ ಒಂದೆರಡು ವರ್ಷಗಳಾದರೂ ಬೇಕು ಎಂದೇ ಭಾವಿಸಿದ್ದರು. ಅದೃಷ್ಟವಶಾತ್, ಒಂದು ತಿಂಗಳ ನಂತರ ಅಂದರೆ ಈಗ ನನ್ನ ಮನಸ್ಸಲ್ಲಿ ಆ ಯೋಚನೆಯೇ ಇಲ್ಲ. ನನ್ನ ಆತ್ಮವಿಶ್ವಾಸ ಮತ್ತು ಬದ್ಧತೆ ಇನ್ನಷ್ಟು ಹೆಚ್ಚಾಗಿದೆ. ಇದಕ್ಕೆ ನಾನು 4 ಬಾರಿ ಮುಖ್ಯಮಂತ್ರಿಯಾಗಿದ್ದ ಅನುಭವ ಮತ್ತು ನನ್ನ ಸಹೋದ್ಯೋಗಿ ಸಚಿವರ ಸಾಮುದಾಯಿಕ ಅನುಭವ ಹಾಗೂ ಜ್ಞಾನವೂ ಕಾರಣ. ಜತೆಗೆ ಜನರ ಪ್ರೀತಿ, ಅಧಿಕಾರಿಗಳ ಬೆಂಬಲ ಕೂಡ ನನ್ನ ಆತ್ಮವಿಶ್ವಾಸಕ್ಕೆ ಹೆಚ್ಚಿನ ಇಂಬು ನೀಡಿದವು.
ಕಳೆದ ಕೆಲವು ದಿನಗಳಿಂದ ನಾನು ವಿವಿಧ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಅವರೂ ತಮ್ಮ ಇಲಾಖೆಗಳ ಬಗ್ಗೆ ವಿವರಣೆ ನೀಡುತ್ತಿದ್ದಾರೆ. ಇದು ನಮ್ಮೊಂದಿಗೆ ವಿಚಾರಗಳು, ಚಿಂತನೆಗಳ ಅತ್ಯದ್ಭುತ ವಿನಿಮಯಕ್ಕೆ ಕಾರಣವಾಗಿದೆ. ಈಗ ನಾವು ವಿವಿಧ ಸಚಿವಾಲಯಗಳು, ಇಲಾಖೆಗಳಿಗೆ ಸಂಬಂಧಿಸಿ ಅತ್ಯುತ್ತಮ ಮಾರ್ಗಸೂಚಿಗಳನ್ನು ರಚಿಸಿದ್ದೇವೆ.
ವಿವಿಧ ರಾಜ್ಯಗಳ ಸಿಎಂಗಳೂ ನನ್ನನ್ನು ಭೇಟಿಯಾಗಿದ್ದಾರೆ. ಅವರವರ ರಾಜ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನೆತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರೊಂದಿಗೆ ಆತ್ಮೀಯವಾಗಿ ಕೆಲಸ ಮಾಡಲು ನಾನು ಎದುರುನೋಡುತ್ತಿದ್ದೇನೆ.
ಕೆಲವೊಂದು ವಲಯಗಳಲ್ಲಿ ನಿಜಕ್ಕೂ ನಾವು ಸುಧಾರಣೆಯಾಗಬೇಕು ಎಂದು ನನಗನಿಸುತ್ತಿದೆ. ದೆಹಲಿಯಲ್ಲಿ ನಾನು ಎದುರಿಸುತ್ತಿರುವ ದೊಡ್ಡ ಸವಾಲೆಂದರೆ, ದೇಶದಲ್ಲಿ ಧನಾತ್ಮಕ ಬದಲಾವಣೆ ತರುವ ನಮ್ಮ ಪ್ರಾಮಾಣಿಕ ಉದ್ದೇಶಗಳನ್ನು ಜನರ ಆಯ್ದ ಗುಂಪಿಗೆ ತಿಳಿಸುವುದು. ಈ ಗುಂಪಿನಲ್ಲಿರುವ ಜನ ಸರ್ಕಾರಿ ವ್ಯವಸ್ಥೆಯೊಳಗೆ ಹಾಗೂ ಹೊರಗೆ ಎರಡೂ ಕಡೆ ಇರುವವರು. ಕಳೆದ ತಿಂಗಳು ನಡೆದ ಕೆಲವು ಘಟನೆಗಳಿಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಕೆಲ ವಿವಾದಗಳು ಕಾಣಿಸಿಕೊಂಡವು. ನಾನು ಯಾರ ವಿರುದ್ಧವೂ ಆರೋಪ ಮಾಡುತ್ತಿಲ್ಲ. ಆದರೆ ನಾವು ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು, ಆ ಮೂಲಕ ಸೂಕ್ತ ವಿಚಾರಗಳನ್ನು, ಸೂಕ್ತ ಸಮಯದಲ್ಲಿ, ಸೂಕ್ತ ಜನರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ನನಗನಿಸುತ್ತದೆ. ಆಗ ಮಾತ್ರ ಕೆಲವೊಂದು ಬದಲಾವಣೆ ಆಗಬಹುದು.
ಪ್ರತಿ ಬಾರಿ ಹೊಸ ಸರ್ಕಾರ ಬಂದೊಡನೆ, ಆರಂಭದ ಕೆಲವು ದಿನಗಳನ್ನು ಮಾಧ್ಯಮಗಳು “ÔÚ¬ÈÚßà«é @ÈÚ©’ ಎಂದು ಕರೆಯುತ್ತವೆ. ಈ ಹಿಂದಿನ ಸರ್ಕಾರಗಳು ಈ ಹನಿಮೂನ್ ಅವಧಿಯನ್ನು 100 ದಿನಗಳವರೆಗೆ ಅಥವಾ ಅದಕ್ಕಿಂತಲೂ ಹೆಚ್ಚು ದಿನ ವಿಸ್ತರಿಸುತ್ತಾ ಹೋಗಿದ್ದವು. ಆದರೆ ನಾನು ಅಂತಹ ವಿಲಾಸವನ್ನು ಬಯಸಿಲ್ಲ, ಇದು ಅನಿರೀಕ್ಷಿತವೂ ಅಲ್ಲ. 100 ದಿನಗಳು ಬೇಡ, ನಾವು ಅಧಿಕಾರಕ್ಕೆ ಬಂದ 100 ಗಂಟೆಗಳಿಗೂ ಮೊದಲೇ ಸರಣಿ ಆರೋಪಗಳು ಕೇಳಿಬಂದವು. ಆದರೆ ಯಾವಾಗ ಒಬ್ಬ ವ್ಯಕ್ತಿಯು ಬದ್ಧತೆಯಿಂದ ತನ್ನ ದೇಶಕ್ಕೆ ಸೇವೆ ಸಲ್ಲಿಸುವ ಏಕಮಾತ್ರ ಉದ್ದೇಶ ಹೊಂದಿರುತ್ತಾನೋ ಅಂಥವನಿಗೆ ಇಂತಹ ಆರೋಪಗಳು ಏನೇನೂ ಅಲ್ಲ. ಅದಕ್ಕಾಗಿಯೇ ನಾನು ನನ್ನಷ್ಟಕ್ಕೇ ಕಾರ್ಯನಿರ್ವಹಿಸುತ್ತಿದ್ದೇನೆ, ಇದು ನನಗೆ ಪೂರ್ಣ ತೃಪ್ತಿಯನ್ನೂ ತಂದಿದೆ.
ಜೂನ್ 26 ಎಂಬುದು ನನಗೆ ಮಹತ್ವದ ದಿನ. ಜನರ ಆಶೋತ್ತರಗಳನ್ನು ಈಡೇರಿಸುವ ನಮ್ಮ ಪಯಣ ಆರಂಭವಾಗಿ ಒಂದು ತಿಂಗಳು ಪೂರೈಸಿದ ದಿನವಿದು. ಈ ದಿನವು ಮತ್ತೊಂದು ಐತಿಹಾಸಿಕ ದಿನವನ್ನು ನೆನಪಿಸಿತು. ಅದು 1975ರ ಜೂ.26. ಅಂದೇ ದೇಶದಲ್ಲಿ ತುರ್ತು ಪರಿಸ್ಥಿತಿ ಆರಂಭವಾಗಿತ್ತು. ಒಂದು ದಿನ ಮೊದಲೇ ಅದನ್ನು ಘೋಷಿಸಲಾಗಿತ್ತು. ಅದು ನನಗೆ ಶಕ್ತಿಶಾಲಿ ಪ್ರಜಾಸತ್ತೆಯ ಮಹತ್ವವನ್ನು ಕಲಿಸಿಕೊಟ್ಟಿತು. ಆಗ ನಾನಿನ್ನೂ ಹುಡುಗ. ಆದರೂ ಆ ಪರೀಕ್ಷಾ ದಿನಗಳ ಅನೇಕ ಅನುಭವಗಳು ನನ್ನ ನೆನಪಿನ ಬುತ್ತಿಯಲ್ಲಿ ಉಳಿದಿವೆ.
ತುರ್ತು ಪರಿಸ್ಥಿತಿಯು ದೇಶದ ಇತಿಹಾಸದಲ್ಲೇ ಕರಾಳ ಅವಧಿಯಾಗಿತ್ತು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ಯ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಾಗೂ ಪ್ರತಿಪಕ್ಷವನ್ನು ಮೌನವಾಗಿಸಿದರೆ ಆಗುವ ಅಪಾಯವನ್ನು ನೆನಪಿಸುತ್ತದೆ. ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಖಾತ್ರಿಪಡಿಸದೇ ಇದ್ದರೆ ನಮ್ಮ ಪ್ರಜಾಪ್ರಭುತ್ವವೇ ಉಳಿಯದು. ಇಂದು ಈ ಮೌಲ್ಯಗಳನ್ನು ಎತ್ತಿಹಿಡಿಯುವ ನಮ್ಮ ಇಚ್ಛೆಯನ್ನು ಮತ್ತೆ ದೃಢಪಡಿಸುವ ದಿನ. ಅದರ ಜತೆಗೇ ಉತ್ತಮ ಆಡಳಿತದ ಮೂಲಕ ಬಲಿಷ್ಠ ಸಂಸ್ಥೆಯನ್ನು ರೂಪಿಸಿ, ಆ ಮೂಲಕ ಮತ್ತೊಮ್ಮೆ ನಾವು ಎಂದಿಗೂ ಕರಾಳ ದಿನವನ್ನು ನೋಡದಂತೆ ಮಾಡುವ ದಿನ.
ನಾವು ತಿಂಗಳು ಪೂರೈಸುತ್ತಿರುವ ಈ ದಿನ ನಾನು ಮತ್ತೊಮ್ಮೆ ದೇಶದ ಜನರಿಗೆ, ಅವರು ನೀಡಿದ ಬೆಂಬಲ ಮತ್ತು ಶುಭ ಆಶಯಗಳಿಗಾಗಿ ಸೆಲ್ಯೂಟ್ ಮಾಡುತ್ತೇನೆ. ಮುಂದಿನ ವರ್ಷಗಳಲ್ಲಿ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನಾವು ಬದ್ಧರಾಗಿದ್ದೇವೆ ಎಂಬುದನ್ನು ಪುನರುಚ್ಚರಿಸುತ್ತೇನೆ.
ನಿಮ್ಮವನಾದ,
- ನರೇಂದ್ರ ಮೋದಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement