ತಿಂಗಳು ಪೂರೈಸಿದ ಎನ್ಡಿಎ ಸರ್ಕಾರ, ಹನಿಮೂನ್ ಇಲ್ಲದ ಚೊಕ್ಕ ಸಂಸಾರ
125 ಕೋಟಿ ಭಾರತೀಯರ ನಿರೀಕ್ಷೆಯ...
ನವದೆಹಲಿ: 125 ಕೋಟಿ ಭಾರತೀಯರ ನಿರೀಕ್ಷೆಯ ಭಾರ ಹೊತ್ತು ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಗುರುವಾರ ತಿಂಗಳ ಸಂಭ್ರಮ. ಸಾಮಾನ್ಯವಾಗಿ ಹೊಸ ಸರ್ಕಾರ ಅನುಭವಿಸುವ 100 ದಿನಗಳ 'ಮಧುಚಂದ್ರದ ಅವಧಿ'ಯ ಗೋಜಿಗೇ ಹೋಗಲಿಲ್ಲ ಮೋದಿ. ಅಧಿಕಾರ ವಹಿಸಿಕೊಂಡ ಮೊದಲ ದಿನದಿಂದಲೇ ಆಡಳಿತಕ್ಕೆ ಹೊಸ ರೂಪ ನೀಡುವ ಪ್ರಯತ್ನಗಳಿಗೆ ಚಾಲನೆ ನೀಡಿದ್ದಾರೆ.
'ಹೀಗೆಯೇ ಕಾರ್ಯನಿರ್ವಹಿಸಬೇಕು' ಎನ್ನುವುದನ್ನು ಮೊದಲೇ ನಿರ್ಧರಿಸಿಕೊಂಡಂತಿದ್ದ ಮೋದಿ ಮೊದಲ ದಿನದಿಂದಲೇ ಆ ರೀತಿ ನಡೆದುಕೊಳ್ಳುತ್ತಿದ್ದಾರೆ ಕೂಡ. ತಮ್ಮ ಸರ್ಕಾರ ಕ್ರಿಯಾಶೀಲತೆ (ಪ್ರೊ ಆ್ಯಕ್ಟೀವ್) ಪರವೇ ವಿನಾ ಪ್ರತಿಕ್ರಿಯಾಶೀಲ (ರಿಯಾಕ್ಟೀವ್) ಅಲ್ಲ ಎನ್ನುವುದನ್ನು ಅಲ್ಪಾವಧಿಯಲ್ಲೇ ತೋರಿಸಿಕೊಟ್ಟಿದ್ದಾರೆ. 'ಪುಟ್ಟ ಸರ್ಕಾರ, ಗರಿಷ್ಠ ಆಡಳಿತ'ದ ತತ್ವಕ್ಕೆ ಬದ್ಧರಾಗಿರುವ ಮೋದಿಯವರ ಪ್ರಮುಖ ಸಾಧನೆ ಎಂದರೆ ಪ್ರಧಾನಿ ಕಾರ್ಯಾಲಯವನ್ನು ಬಲಗೊಳಿಸಿದ್ದು. ಆಡಳಿತದಲ್ಲಿ ಪಿಎಂಒ ಎಷ್ಟು ಮುಖ್ಯ ಎಂದು ತೋರಿಸಿಕೊಡುವುದರ ಮೂಲಕ ಕಾರ್ಯಾಲಯಕ್ಕೆ ಹಿಂದಿನ ಘನತೆ ತಂದುಕೊಟ್ಟಿದ್ದಾರೆ. ಪಿಎಂಒದಲ್ಲಿ ಈಗ ನಿತ್ಯ 19 ಗಂಟೆ ಕಾರ್ಯನಿರ್ವಹಣೆ.
ಕೆಲಸದತ್ತ ಗಮನ ಕೊಡಿ
ಮೊದಲ ದಿನವೇ ಎಲ್ಲ ಸಚಿವರನ್ನೂ ಖುದ್ದು ಭೇಟಿ ಮಾಡಿದ ಪ್ರಧಾನಿ, ತಮ್ಮ ಸಚಿವಾಲಯಕ್ಕೆ ಸಂಬಂಧಿಸಿ 100 ದಿನಗಳ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಸೂಚಿಸಿದರು. ಹಿಂದಿನ ಸರ್ಕಾರದ ಯೋಜನೆಗಳ ಹೆಸರು ಬದಲಿಸುವ ಬಗ್ಗೆ ಗಮನ ನೀಡದೆ ಯೋಜನೆಗಳ ಜಾರಿಗೆ ಗಮನ ಕೊಡುವಂತೆ ಕಿವಿಮಾತು ಹೇಳಿದರು.
ನಿರ್ಭೀತಿಯ ಕೆಲಸ
ಹತ್ತನೇ ದಿನ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಮೋದಿ, 'ನಿರ್ಭೀತಿಯಿಂದ ಕೆಲಸ ಮಾಡಿ, ನಿಮ್ಮ ರಕ್ಷಣೆಗೆ ನಾನಿದ್ದೇನೆ' ಎಂದು ಅಭಯ ನೀಡಿದರು. ಕಡತಗಳ ತ್ವರಿತ ವಿಲೇವಾರಿ, ಆಡಳಿತ ಚುರುಕುಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸುದೀರ್ಘ 2 ಗಂಟೆ ಸಮಾಲೋಚನೆ ನಡೆದದ್ದು ವಿಶೇಷ. 'ದೇಶಕ್ಕಾಗಿ ಒಂದು ತಂಡವಾಗಿ ಕೆಲಸ ಮಾಡೋಣ' ಎನ್ನುವ ಕರೆ ನೀಡಿದ್ದು ಮಾತ್ರವಲ್ಲ, ಹೊಸಹೊಸ ಆಲೋಚನೆಗಳಿದ್ದರೆ ನೇರವಾಗಿ ತಮ್ಮೊಂದಿಗೆ ಹಂಚಿಕೊಳ್ಳಬಹುದು ಎಂದು ಹುರುಪು ತುಂಬಿದರು. ಹಳೆ ಕಡತಗಳನ್ನು ವಿಲೇವಾರಿ ಮಾಡಿ ಕೆಲಸದ ಸ್ಥಳ ಚೆನ್ನಾಗಿಟ್ಚುಕೊಳ್ಳುವಂತೆಯೂ ಸೂಚಿಸಿದರು.
ಕಾಲು ಮುಟ್ಟಬೇಡಿ
15ನೇ ಲೋಕಸಭೆ ಚೊಚ್ಚಲ ಅಧಿವೇಶನ ಆರಂಭಕ್ಕೆ ಮುನ್ನ ಬಿಜೆಪಿ ಸಂಸದೀಯ ಪಕ್ಷವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 'ನಾನೂ ಸೇರಿದಂತೆ ಯಾವ ನಾಯಕರ ಕಾಲು ಮುಟ್ಟಿ ನಮಸ್ಕರಿಸಬೇಡಿ. ಪ್ರಾಮಾಣಿಕ ಕೆಲಸಗಳ ಮೂಲಕ ಜನರ ಹೃದಯ ತಲುಪುವ ಪ್ರಯತ್ನ ಮಾಡಿ' ಎಂದು ಕಿವಿಮಾತು ಹೇಳಿದರು. ಪಕ್ಷದ ಸಂಸದರಲ್ಲಿ ಹೆಚ್ಚಿನವರು ಮೊದಲ ಸಲ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನೂ ಪ್ರಧಾನಿ ನಿರ್ವಹಿಸಿದರು.
ಮೋದಿ ಮೊದಲ ದಿನ: ಸಾರ್ಕ್ ದೇಶಗಳ ಮುಖಂಡರು, ಮಾರಿಷಸ್ ಪ್ರಧಾನಿ ಜತೆ ದ್ವಿಪಕ್ಷೀಯ ಮಾತುಕತೆ. ಸಂಪುಟದ ಮೊದಲ ಸಭೆ.
ಸಂಪುಟದ ಮೊದಲ ತೀರ್ಮಾನ: ವಿದೇಶಗಳಲ್ಲಿ ಭಾರತೀಯರು ಇರಿಸಿರುವ ಕಪ್ಪುಹಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೆ ಸಮ್ಮತಿ
ಪಿಎಂಒ ಮೊದಲ ಮಹತ್ವದ ನಿರ್ಧಾರ: ಯುಪಿಎ ಸರ್ಕಾರದ 'ಜೀವನಾಡಿ'ಯಾಗಿದ್ದ, ತ್ವರಿತ ತೀರ್ಮಾನಗಳಿಗೆ ಅಡ್ಡಿಯಾಗಿದ್ದ ಸಚಿವರ ಸಮಿತಿ, ಉನ್ನತಾಧಿಕಾರ ಸಚಿವರ ಸಮಿತಿಗಳ ರದ್ದು
ಪ್ರಧಾನಿ ಮೊದಲ ವಿದೇಶ ಪ್ರವಾಸ: ಭೂತಾನ್
ಮುಂದಿದೆ ಸವಾಲು
ಕುಸಿದಿರುವ ಆರ್ಥಿಕತೆ ಮೇಲಕ್ಕೆತ್ತುವುದು, ಸಂಭವನೀಯ ಬರ ಎದುರಿಸುವುದು, ಇರಾಕ್ ಬಿಕ್ಕಟ್ಟಿನಿಂದ ತೈಲ ಪೂರೈಕೆಯಲ್ಲಿ ಆಗಬಹುದಾದ ಸಂಭವನೀಯ ವ್ಯತ್ಯಯ.
ಪ್ರೀತಿಯೇ ಸ್ಫೂರ್ತಿ ಒಲವಿನ ಗೆಳೆಯರೇ,
ಇಂದು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರ್ಣಗೊಂಡಿದೆ. ಜನರ ಬೆಂಬಲ ಮತ್ತು ಪ್ರೀತಿ ಅಭೂತಪೂರ್ವವಾಗಿ ಸಿಗುತ್ತಿದ್ದು, ಇದು ನಮಗೆ ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡಲು ಸ್ಫೂರ್ತಿ ನೀಡುತ್ತಿದೆ. ತಿಂಗಳ ಹಿಂದೆ ನಾವು ಅಧಿಕಾರಕ್ಕೇರಿದಾಗ, ನಾನು ಈ ಜಾಗಕ್ಕೆ ಹೊಸಬ ಎಂದು ನನಗನಿಸುತ್ತಿತ್ತು. ಇನ್ನೂ ಅನೇಕರು ಕೇಂದ್ರ ಸರ್ಕಾರದ ಕಾರ್ಯವೈಖರಿಯ ಕ್ಲಿಷ್ಟತೆಯನ್ನು ಅರಿಯಲು ನನಗೆ ಕನಿಷ್ಠ ಒಂದೆರಡು ವರ್ಷಗಳಾದರೂ ಬೇಕು ಎಂದೇ ಭಾವಿಸಿದ್ದರು. ಅದೃಷ್ಟವಶಾತ್, ಒಂದು ತಿಂಗಳ ನಂತರ ಅಂದರೆ ಈಗ ನನ್ನ ಮನಸ್ಸಲ್ಲಿ ಆ ಯೋಚನೆಯೇ ಇಲ್ಲ. ನನ್ನ ಆತ್ಮವಿಶ್ವಾಸ ಮತ್ತು ಬದ್ಧತೆ ಇನ್ನಷ್ಟು ಹೆಚ್ಚಾಗಿದೆ.
ನಿಮ್ಮವನಾದ
ಒಂದು ತಿಂಗಳ ಸಾಧನೆಯನ್ನು 67 ವರ್ಷಗಳಿಗೆ ಹೋಲಿಸಬೇಡಿ. ನಮ್ಮ ಸರ್ಕಾರದ ಪ್ರತಿ ತೀರ್ಮಾನದ ಆಶಯವೂ ರಾಷ್ಟ್ರೀಯ ಹಿತ.
- ನರೇಂದ್ರ ಮೋದಿ
ಸಚಿವರಿಗೆ ಕಿವಿಮಾತು
ಅಪ್ತ ಸಿಬ್ಬಂದಿ ನೇಮಕದಲ್ಲಿ ಕುಟುಂಬ/ಬಂಧು ವರ್ಗ ದೂರ ಇಡಿ.
ಪ್ರಚಾರದ ಹುಚ್ಚು ಬೇಡ. ಕೆಲಸಕ್ಕೆ ಒತ್ತು ಕೊಡಿ.
ಪಾಲುದಾರಿಕೆಗಳಿಂದ ಹೊರಬನ್ನಿ. ಯಾವುದೇ ವಾಣಿಜ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಡಿ.
ಹೊಸ ಕಾರುಗಳ ಖರೀದಿ ಬೇಡ.
ರು. 1 ಲಕ್ಷಕ್ಕಿಂತ ಹೆಚ್ಚಿನ ಖರ್ಚಿಗೆ ಪಿಎಂಒ ಅನುಮತಿ ಪಡೆದುಕೊಳ್ಳಿ