ಮೂರು ತಿಂಗಳಾದ್ರೂ ಆಡಿಟ್ ವರದಿ ಸಲ್ಲಿಸದ ಸಾವಿರಕ್ಕೂ ಹೆಚ್ಚು ಗ್ರಾಪಂಗಳು
ಬೆಳಗಾವಿ: ಗ್ರಾಮ ಪಂಚಾಯಿತಿಗಳಲ್ಲಿ ಕೈಗೊಂಡ ಕಾಮಗಾರಿ, ಬಂದಿರುವ ಅನುದಾನ, ಉಳಿದ ಹಣ, ಬಳಕೆಯಾದ ನಿಧಿಗಳ ಕುರಿತು 'ಪಂಪಚಂತ್ರ' ತಂತ್ರಾಂಶದಲ್ಲಿ ದಾಖಲಾಗಿರುವ ದಾಖಲೆಗಳ ಬ್ಯಾಂಕ್ ರೀಕನ್ಸಿಲೇಶನ್ ಸ್ಟೇಟ್‌ಮೆಂಟ್ (ಬಿಆರ್‌ಎಸ್) ಲೆಕ್ಕಪತ್ರವನ್ನು ಅವಧಿ ಮುಗಿದು ಮೂರು ತಿಂಗಳಾದರೂ ರಾಜ್ಯದ 1064 ಗ್ರಾಪಂಗಳು ಇನ್ನೂ ನೀಡಿಲ್ಲ.
ಸಾಮಾನ್ಯಾವಾಗಿ ಗ್ರಾಪಂಗಳಲ್ಲಿ ಕೈಗೊಂಡ ಕಾಮಗಾರಿ, ಬಂದ ಅನುದಾನ ಎಲ್ಲವನ್ನೂ ಪಂಚತಂತ್ರದಲ್ಲಿ ಅಳವಡಿಸಲಾಗುತ್ತದೆ. ಪ್ರತಿ ವರ್ಷ ಈ ಎಲ್ಲ ದಾಖಲೆಗಳನ್ನು ಆಡಿಟ್ ಮಾಡಿಸಿ ಬಳಿಕ ಬಿಆರ್‌ಎಸ್ ವರದಿಯನ್ನು ಗ್ರಾಪಂ ಕಾರ್ಯದರ್ಶಿಗಳು, ಪಿಡಿಒಗಳು ತಾಪಂ ಹಾಗೂ ಜಿಪಂಗೆ ಮಾರ್ಚ್ ಅಂತ್ಯದೊಳಗೆ ನೀಡಬೇಕು.
ಈ ಅವಧಿ ಮುಗಿದು ಮೂರು ತಿಂಗಳಾದರೂ ರಾಜ್ಯದ ಶೇ.20 ರಷ್ಟು ಗ್ರಾ ಪಂಗಳು ಲೆಕ್ಕಪತ್ರವನ್ನೇ ಸಲ್ಲಿಸಿಲ್ಲ. ಲೆಕ್ಕಪತ್ರ ನೀಡಿದಲ್ಲಿ ಮಾತ್ರ ಅನುದಾನ ಸರಿಯಾಗಿ ಹಂಚಿಕೆಯಾಗಿದೆಯೇ, ಕಾಮಗಾರಿ ಕೈಗೊಳ್ಳಲಾಗಿದೆಯೇ ಎಂಬ ನಿಖರ ಭೌತಿಕ ಮಾಹಿತಿ ಲಭಿಸುತ್ತದೆ. ಅವ್ಯವಹಾರ ಆದರೂ ಬೆಳಕಿಗೆ ಬರುತ್ತದೆ. ಮುಂದಿನ ಅನುದಾನ ಬಿಡುಗಡೆಗೂ ಇದು ಮಾರ್ಗದರ್ಶಿಯಾಗುತ್ತದೆ. ಆದರೆ ಅಧಿಕಾರಿಗಳ ನಿಷ್ಕಾಳಜಿ, ಬೇಜವಾಬ್ದಾರಿಯಿಂದ 1064 ಪಂಚಾಯಿತಿಗಳು ಇನ್ನೂ ಈ ಲೆಕ್ಕಪತ್ರವನ್ನೇ ನೀಡಿಲ್ಲ.
ಇದೀಗ ಉದ್ಯೋಗ ಖಾತ್ರಿ, ನಮ್ಮ ಗ್ರಾಮ ನಮ್ಮ ರಸ್ತೆ, ಗ್ರಾಮ ಸಡಕ್ ಸೇರಿ ಹಲವು ಯೋಜನೆಗಳಡಿ ಗ್ರಾಪಂಗಳಿಗೆ ಕೋಟ್ಯಂತರ ರುಪಾಯಿ ನೇರವಾಗಿ ಹರಿದು ಬರುತ್ತದೆ. ಅದನ್ನು ವ್ಯವಸ್ಥಿತವಾಗಿ ಬಳಸಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಗ್ರಾಮೀಣಾಭಿವೃದ್ಧಿ ಇಲಾಖೆ ಸಿದ್ಧಪಡಿಸಿದ ಪಂಚತಂತ್ರ ಸಾಫ್ಟ್‌ವೇರ್‌ನಲ್ಲಿ ನಮೂದಿಸಬೇಕಲ್ಲದೆ ಪ್ರತಿ ವರ್ಷ ಆಡಿಟ್ ಮಾಡಿಸಿ ಪಾರದರ್ಶಕತೆ ಕಾಪಾಡುವುದು ಕಡ್ಡಾಯ. ರಾಜ್ಯದ 5629 ಗ್ರಾಪಂಗಳ ಪೈಕಿ 1064 ಗ್ರಾಪಂಗಳು ಇನ್ನೂ ಈ ಲೆಕ್ಕಪತ್ರ ಸಲ್ಲಿಸಿಲ್ಲ. ಉಳಿದ 4565 ಗ್ರಾಪಂಗಳು ಈಗಾಗಲೇ ಈ ಪ್ರಕ್ರಿಯೆ ಮುಗಿಸಿವೆ.
4 ಜಿಲ್ಲೆಗಳಲ್ಲಿ ಹಂಡ್ರೆಡ್ ಪರ್ಸೆಂಟ್: ಬೆಂ. ಗ್ರಾ., ಧಾರವಾಡ, ಬಿಜಾಪುರ, ಚಿಕ್ಕಮಗಳೂರು ಜಿಲ್ಲೆಗಳ ಎಲ್ಲ ಗ್ರಾಪಂಗಳೂ ಈ ದಾಖಲೆ ಈಗಾಗಲೇ ಸಲ್ಲಿಸಿವೆ. ಬೆಂಗಳೂರು ಗ್ರಾ.ದ 98, ಧಾರವಾಡದ 127, ಬಿಜಾಪುರದ 99, ಚಿಕ್ಕಮಗಳೂರು ಜಿಲ್ಲೆಯ 226 ಗ್ರಾಪಂಗಳು ಲೆಕ್ಕ ಪರಿಶೋಧನಾ ವರದಿ ಸಲ್ಲಿಕೆಯಲ್ಲಿ ಅಪ್ಟುಡೇಟ್ ಆಗಿವೆ.
ಲೆಕ್ಕ ನೀಡದ ಗ್ರಾಪಂಗಳು
ಜಿಲ್ಲೆವಾರು (ಬಿಆರ್‌ಎಸ್) ನೀಡದ ಗ್ರಾ.ಪಂಗಳು
ಬಾಗಲಕೋಟೆ 32
ಬೆಂಗಳೂರು(ನಗರ) 33
ಬೆಂಗಳೂರು(ಗ್ರಾ) --
ಬೆಳಗಾವಿ 54
ಬಳ್ಳಾರಿ 132
ಬೀದರ 52
ಬಿಜಾಪುರ --
ಚಾಮರಾಜನಗರ 49
ಚಿತ್ರದುರ್ಗ 06
ದಕ್ಷಿಣ ಕನ್ನಡ 53
ದಾವಣಗೆರೆ 37
ಧಾರವಾಡ --
ಗದಗ 23
ಚಿತ್ರದುರ್ಗ 51
ಹಾಸನ 3
ಹಾವೇರಿ 16
ಕೊಡಗು 5
ಕೋಲಾರ 56
ಕೊಪ್ಪಳ 25
ಮಂಡ್ಯ 114
ಮೈಸೂರು 43
ರಾಯಚೂರು 141
ಶಿವಮೊಗ್ಗ 18
ತುಮಕೂರು 06
ಚಿಕ್ಕಮಗಳೂರು --
ಉಡುಪಿ 20
ಉತ್ತರ ಕನ್ನ್ನಡ 59
ಚಿಕ್ಕಬಳ್ಳಾಪುರ 111
ರಾಮನಗರ 01
ಯಾದಗಿರಿ 83
-ರಾಯಣ್ಣ.ಆರ್.ಸಿ.