ಸ್ವಪಕ್ಷೀಯರಿಂದಲೇ ಕೈ ಸಚಿವರ ವಿವರ್ಣ
ವಿಧಾನಸಭೆ: ಸರ್ಕಾರದ ಅನನುಭವಿ ಸಚಿವರ ಅಸಾಮರ್ಥ್ಯವನ್ನು ಆಡಳಿತ ಪಕ್ಷದ ಅನುಭವೀ ಸದಸ್ಯರೇ ಸದನದಲ್ಲಿ ಅನಾವರಣಗೊಳಿಸಿದ್ದಾರೆ. ಪ್ರತಿಪಕ್ಷಕ್ಕಿಂತ ಹೆಚ್ಚು ಆಕ್ರಮಣಕಾರಿಯಾಗಿ ಆಡಳಿತ ಪಕ್ಷದ ಸದಸ್ಯರೇ ಮಾತನಾಡುತ್ತಿದ್ದು, ಪ್ರತಿಪಕ್ಷವೇ ಕೊಂಚ ಮಂಕಾದಂತಾಗಿದೆ.
ಅಷ್ಟು ಮಾತ್ರವಲ್ಲ, ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಖುದ್ದು ಸ್ಪೀಕರ್ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ನಿಮ್ಮಿಂದಾಗಿ ಊರಲ್ಲಿ ನಾವು ಮಾನ-ಮರ್ಯಾದೆ ಇಲ್ಲವೇ ಎಂದು ಕೇಳಿಸಿಕೊಳ್ಳುವಂತಾಗಿದೆ ಎಂದು ಗುಡುಗಿದ್ದಾರೆ.
ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿ ಬಗ್ಗೆ ಸ್ಪೀಕರ್ ಕಿಡಿಕಾರಿದರೆ, ವೈದ್ಯ ಶಿಕ್ಷಣ ಇಲಾಖೆ ಬಗ್ಗೆ ಹಿರಿಯ ಸದಸ್ಯ ರಮೇಶ್‌ಕುಮಾರ್ ವಾಗ್ದಾಳಿ ನಡೆಸಿದ್ದಾರೆ. 'ಊಟ ಯಾರದ್ದೋ, ಪಾಯಿಖಾನೆ ಯಾರದ್ದೋ ಎಂಬ ರೀತಿ ಆಡಳಿತ ನಡೆಸಬೇಡಿ ಎಂದು ಸಚಿವರನ್ನು ಛೇಡಿಸಿದ್ದಾರೆ. ಇನ್ನೊಂದೆಡೆ ಇಲಾಖೆ ಚರ್ಚೆ ಮೇಲಿನ ಸ್ಪಷ್ಟೀಕರಣ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಸಚಿವ ಕೃಷ್ಣ ಭೈರೇಗೌಡರ ಜತೆ ಮಾತಿನ ಜಂಗೀ ಕುಸ್ತಿ ನಡೆಸಿದ್ದಾರೆ.
ಸದನದಲ್ಲಿ ಇಷ್ಟೆಲ್ಲ ವಿದ್ಯಮಾನ ನಡೆದಾಗ ಸರ್ಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಮುಂದಿನ ಸಾಲಿನಲ್ಲಿ ಸಚಿವ ಟಿ.ಬಿ. ಜಯಚಂದ್ರ ಬಿಟ್ಟರೆ ಹಿರಿಯ ಸಚಿವರು ಇಲ್ಲದ್ದರಿಂದ ಕಿರಿಯ ಸಚಿವರು ತಮ್ಮ ಇಲಾಖೆ ಸಮರ್ಥನೆಗೆ ಹೆಣಗಾಡಿದರು.