ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಒಕ್ಕಲೆಬ್ಬಿಸಲು ಬಂದ್ರೆ ಕಾನೂನು ಮೀರ್ತೇವೆ: ಗಂಗಾಧರ್ ಎಚ್ಚರಿಕೆ

ಅರಣ್ಯ ಒತ್ತುವರಿ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರ ಕಾನೂನು ರಚಿಸುವವರೆಗೆ ಅರಣ್ಯಾಧಿಕಾರಿಗಳು...

Mainashree
Updated On : 27 Jun 2014, 11:15 am

ಬೆಂಗಳೂರು: ಅರಣ್ಯ ಒತ್ತುವರಿ ಪ್ರದೇಶಗಳ ಬಗ್ಗೆ ರಾಜ್ಯ ಸರ್ಕಾರ ಕಾನೂನು ರಚಿಸುವವರೆಗೆ ಅರಣ್ಯಾಧಿಕಾರಿಗಳು ಸುಮ್ಮನಿರಬೇಕು. ಅಷ್ಟರೊಳಗೆ ತೆರವಿಗೆ ಮುಂದಾದರೆ ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅರಣ್ಯಾಧಿಕಾರಿಗಳು ದಾಳಿ ನಡೆಸಿ ಜಮೀನು ನಾಶ, ಬೆಳೆ ಕಡಿಯುವಂಥ ಕೃತ್ಯದಲ್ಲಿ ತೊಡಗಿದರೆ ರೈತರು ತಮ್ಮ ಕುಟುಂಬದವರ ರಕ್ಷಣೆಗಾಗಿ ಕಾನೂನು ಮೀರಿ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಶೇ.15 ಬಡ್ಡಿ ನೀಡಲಿ: ಸಂಘದ ಕಾರ್ಯದರ್ಶಿ ಕಲ್ಯಾಣ್‌ರಾವ್ ಮುಚಲಂಬಿ ಮಾತನಾಡಿ, ಸರ್ಕಾರ ಈಗಾಗಲೇ ಟನ್ ಕಬ್ಬಿಗೆ 2650 ಅನ್ನು ನಿಗದಿ ಮಾಡಿದೆ. ಇದರಲ್ಲಿ ಚೌಕಾಶಿ ಇಲ್ಲ. ಕಾಯ್ದೆ ಪ್ರಕಾರ ಸಕ್ಕರೆ ಕಾರ್ಖಾನೆಗಳು ನಿಗದಿತ ಸಮಯಕ್ಕೆ ಹಣ ನೀಡದಿದ್ದರೆ, ಶೇ. 15ರಷ್ಟು ಬಡ್ಡಿ ಸೇರಿ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದರು.
ವೈಜ್ಞಾನಿಕ ಬೆಲೆ ನೀಡಿ: ಸಂಘದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಮಾತನಾಡಿ, ಈಚೆಗೆ ಸದನದಲ್ಲಿ ಮಾತನಾಡಿದ ಇಂಧನ ಸಚಿವರು, ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ಬಗ್ಗೆ ಪುನರ್ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಮೊದಲು ನಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಅಗತ್ಯ ಸೌಕರ್ಯ ಒದಗಿಸಲಿ. ನಂತರ ವಿದ್ಯುತ್‌ಗೆ ಹಣ ಕೇಳಲಿ. ಇದಾವುದನ್ನೂ ನೀಡದೇ ಬಿಲ್ ಕಟ್ಟಿ ಎಂದರೆ ಸರ್ಕಾರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಳ್ಳಿಗಳಿಗೆ ದಿನದ 24 ಗಂಟೆ ವಿದ್ಯುತ್ ನೀಡಲು ನಿರಂತರ ಜ್ಯೋತಿ ಯೋಜನೆ ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಪಂಪ್‌ಸೆಟ್‌ಗೆ 6 ತಾಸು ಮಾತ್ರ ನಿಗದಿ ಮಾಡಿದೆ. ನಮಗೆ ಪಂಪ್‌ಸೆಟ್‌ಗೆ 24 ತಾಸು ವಿದ್ಯುತ್ ಪೂರೈಸುವಂತೆ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ರಾಜ್ಯದ 175 ತಾಲೂಕುಗಳಲ್ಲಿ ಶೇ. 85ರಷ್ಟು ಮಳೆಕೊರತೆಯಾಗಿದೆ. ಬಿತ್ತನೆಯಾದ ಪ್ರದೇಶಗಳಲ್ಲಿ ಬೆಳೆಗಳು ಒಣಗುತ್ತಿವೆ. ಇನ್ನೂ ಕೆಲವು ಕಡೆ ಬಿತ್ತನೆಯನ್ನೇ ಪ್ರಾರಂಭಿಸಿಲ್ಲ. ರಾಜ್ಯ ಮತ್ತೊಂದು ಬರಗಾಲದ ಲಕ್ಷಣ ಎದುರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸಮಿತಿ, ತಂಡಗಳ ಭೇಟಿ ಎಂದು ಕಾಲಹರಣ ಮಾಡುವುದು ಬೇಡ. ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ನಿಧಿ ಸ್ಥಾಪಿಸಲಿ. ಅದರಿಂದ ತಕ್ಷಣವೇ ನಷ್ಟವಾದವರಿಗೆ ಹಂಚಿಕೆ ಮಾಡಲಿ ಎಂದು ಒತ್ತಾಯಿಸಿದರು.
ಹೊಸ ರೂಪ: ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಮಾತನಾಡಿ, ಜು. 21ರಂದು ಮೈಸೂರಿನಲ್ಲಿ ರೈತ ಚಳವಳಿಗೆ ಹೊಸ ರೂಪ ನೀಡಲಾಗುತ್ತದೆ. ಈಗಾಗಲೇ ಹಲವರನ್ನು ಸಂಪರ್ಕಿಸಲಾಗಿದೆ. ಮುಂದಿನ ಹೋರಾಟಗಳ ಬಗ್ಗೆ ಚರ್ಚಿಸಲಾಗುತ್ತಿದೆ. 38 ಮಂದಿಯ ಸಮಿತಿ ರಚನೆಯಾಗಲಿದೆ. ಬರಹಗಾರರು, ಪ್ರಗತಿಪರರು ಭಾಗವಹಿಸಲಿದ್ದಾರೆ. ಅಂದು ರೈತ ಸಂಘದ ಹೆಸರಿನ ದುರ್ಬಳಕೆಗೆ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚಿಸಲಾಗುವುದು ಎಂದರು.

ಶಾಲು ಕೀಳುತ್ತೇವೆ!
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿ, ಅವರು ತೆಪ್ಪಗಿದ್ದರೆ ಒಳ್ಳೆಯದು. ಇಲ್ಲದ ಆರೋಪ ಸರಿಯಲ್ಲ. ಅವರ ಬಗ್ಗೆ ಮಾತಾನಾಡುವುದೇ ಅಸಹ್ಯ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಹೇಳಿದರು. ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಭೇಟಿ ಮಾಡುವ, ಉದ್ಯಮಿ ಅಶೋಕ್ ಖೇಣಿ ಜತೆ ಫೋಟೋ ತೆಗೆಸಿಕೊಳ್ಳುವ ಕೋಡಿಹಳ್ಳಿ ನಿಲುವೇನು? ಹಸಿರು ಶಾಲು ಹೊದ್ದು ಇಂಥ ಕೆಲಸ ಮಾಡುವುದನ್ನು ಖಂಡಿಸುತ್ತೇವೆ. ಹೀಗೇ ಮುಂದುವರಿದರೆ ಇಂಥವರ ಭಜದ ಮೇಲಿಂದ ಹಸಿರು ಶಾಲನ್ನು ಕಿತ್ತು ಬಿಸಾಕುವ ಹೋರಾಟ ಆರಂಭಿಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement