ಕಸದಿಂದ ರಸ ತಯಾರಿಸಿ ಇಚ್ಛಾಶಕ್ತಿ ಪ್ರದರ್ಶಿಸಿ
ಕಸ ರಾಜಕೀಯ ನಡೆಸಿ ಏನೂ ಸಾಧಿಸಲು ಸಾಧ್ಯವಿಲ್ಲ. ಜನರ ಸಮಸ್ಯೆಯತ್ತ ಗಮನ ನೀಡಿ...
ವಿಧಾನ ಪರಿಷತ್: ಕಸ ರಾಜಕೀಯ ನಡೆಸಿ ಏನೂ ಸಾಧಿಸಲು ಸಾಧ್ಯವಿಲ್ಲ. ಜನರ ಸಮಸ್ಯೆಯತ್ತ ಗಮನ ನೀಡಿ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಸದಿಂದ ರಸ ತಯಾರಿಸುವ ಬಗ್ಗೆ ರಾಜ್ಯ ಸರ್ಕಾರ ಇಚ್ಛಾಶಕ್ತಿ ತೋರಿಸಬೇಕು.
ಬೆಂಗಳೂರು ಹಾಗೂ ರಾಜ್ಯದ ಕಸ ವಿಲೇವಾರಿ ಅವ್ಯವಸ್ಥೆ ಕುರಿತಂತೆ ಪ್ರತಿಪಕ್ಷ ಸದಸ್ಯರು ರಾಜ್ಯ ಸರ್ಕಾರಕ್ಕೆ ನೀಡಿದ ಸಲಹೆಯಿದು.
ಕಸವನ್ನು ಕೇವಲ 'ಕಸ' ಎಂದು ಕಾಣುವುದು ಬೇಡ, ಅದರಿಂದ ನಗರ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಸಾಧ್ಯವೇ ಎಂಬ ನಿಟ್ಟಿನಲ್ಲಿ ಆಲೋಚಿಸಬೇಕು. ಯಾವುದೇ ಸರ್ಕಾರವನ್ನು ಆರೋಪಿಸಿ ಕಾಲ ಕಳೆಯುವ ಬದಲು ಪ್ರಸ್ತುತ ಸನ್ನಿವೇಶವನ್ನು ಹೇಗೆ ಸಮರ್ಥವಾಗಿ ನಿಭಾಯಿಸುವುದು ಎಂಬ ನಿಟ್ಟಿನಲ್ಲಿ ಆಡಳಿತದಲ್ಲಿದ್ದವರು ಚಿಂತಿಸಬೇಕು ಎಂದು ಬಿಜೆಪಿಯ ಗಣೇಶ್ ಕಾರ್ಣಿಕ್ ಸರ್ಕಾರಕ್ಕೆ ಬುದ್ಧಿವಾದ ಹೇಳಿದ್ದಾರೆ. ನಿಯಮ 330ರಲ್ಲಿ ಬೆಂಗಳೂರು ಹಾಗೂ ರಾಜ್ಯದ ಇತರೆ ನಗರಗಳ ಕಸ ಸಮಸ್ಯೆ ಕುರಿತಂತೆ ಗಣೇಶ್ ಕಾರ್ಣಿಕ್ ಸರ್ಕಾರದ ಗಮನ ಸೆಳೆದರು. ತಮ್ಮ ಭಾಷಣದುದ್ದಕ್ಕೂ 'ಕನ್ನಡಪ್ರಭ'ವು ಕಸದ ಸಮಸ್ಯೆ ಕುರಿತಂತೆ ಪ್ರಕಟಿಸಿದ 'ಕಸಬ್ ದಾಳಿ' ಸರಣಿ ವರದಿಗಳನ್ನು ಉಲ್ಲೇಖಿಸಿದರು. ಪತ್ರಿಕೆ ಹೇಳುತ್ತಿರುವಂತೆ ರಾಜಧಾನಿಯಲ್ಲಿ ಪ್ರತಿದಿನ ತ್ಯಾಜ್ಯೋತ್ಸವ ಆಗುತ್ತಿದೆ. ಕಸಕ್ಕೆ ಯಾವುದೇ ಜಾತಿ, ಧರ್ಮವಿಲ್ಲ. ಇದು ಮತ ಬ್ಯಾಂಕ್ ಹೊಂದಿಲ್ಲ ಎಂಬ ಕಾರಣಕ್ಕೆ ಪರಿಹಾರಕ್ಕೆ ಸರ್ಕಾರ ಗಮನ ವಹಿಸುತ್ತಿಲ್ಲ ಎನಿಸುತ್ತದೆ. ರಾಜಕೀಯ ಇಚ್ಛಾಶಕ್ತಿಯಿಂದ ಮಾತ್ರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಕಸದ ಮೇಲಿನ ಅಸಡ್ಡೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಿಡಬೇಕು ಎಂದು ಆಗ್ರಹಿಸಿದರು.
ತಾಂತ್ರಿಕವಾಗಿ ಕಸ ನಿರ್ವಹಣೆ ಮಾಡಿ: ಅಬ್ದುಲ್ ಕಲಾಂ ಅವರು ಕೆಲ ವರ್ಷಗಳ ಹಿಂದೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವಾಗ ಕಸದಿಂದ ವಿದ್ಯುತ್ ಉತ್ಪಾದಿಸುವ ಚಿಂತನೆ ಹರಿಬಿಟ್ಟಿದ್ದರು. ವಿದ್ಯುತ್ ಬೇಡಿಕೆ ನೀಗಿಸಲು ಹಾಗೂ ಸಮರ್ಪಕ ಕಸ ವಿಲೇವಾರಿಗೆ ಈ ತಂತ್ರಜ್ಞಾನದತ್ತ ಗಮನ ನೀಡಬೇಕು ಎಂದಿದ್ದರು. ಆದರೆ ಸ್ಥಳೀಯ ಆಡಳಿತ ಹಾಗೂ ಸರ್ಕಾರ ಈ ಬಗ್ಗೆ ಗಮನ ನೀಡಿಲ್ಲ. ಶೇ.90ಕ್ಕೂ ಅಧಿಕ ಕಸವನ್ನು ಲ್ಯಾಂಡ್ಫಿಲ್ಲಿಂಗ್ ಮಾಡಲಾಗುತ್ತಿದೆ. ಎಷ್ಟು ವರ್ಷ, ಯಾವ ಜಾಗದಲ್ಲಿ ಇಂತಹ ಅಮಾನವೀಯ ಕೃತ್ಯಗಳನ್ನು ಮುಂದುವರಿಸುತ್ತೀರಿ ಎಂದು ಕಾರ್ಣಿಕ್ ಪ್ರಶ್ನಿಸಿದರು.
ಸರ್ಕಾರದ ಉತ್ತರದ ಪ್ರಮುಖಾಂಶ
ಬೆಂಗಳೂರಿನ 198 ವಾರ್ಡ್ಗಳಲ್ಲಿ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರ ನಿರ್ಮಾಣ, ಈಗಾಗಲೇ 145 ಸಂಗ್ರಹಣಾ ಕೇಂದ್ರ ತೆರೆಯಲಾಗಿದೆ.
ಹಸಿ ತ್ಯಾಜ್ಯ ಸಂಸ್ಕರಣೆಗೆ 5 ಟನ್ ಸಾಮರ್ಥ್ಯದ ಬಯೋ ಮಿಥನೈಸೇಷನ್ ಘಟಕ ಸ್ಥಾಪಿಸಲಾಗಿದೆ.
ಕೆಸಿಡಿಸಿ ಕೂಡ್ಲು ಘಟಕದಲ್ಲಿ 300 ಟನ್ ಹಾಗೂ ಮಂಡೂರಿನಲ್ಲಿ 300 ಟನ್ ಸಾಮರ್ಥ್ಯದ ಗೊಬ್ಬರ ತಯಾರಿಕೆ ಘಟಕ ಕಾರ್ಯನಿರ್ವಹಿಸುತ್ತಿದೆ.
ದೊಡ್ಡಬಳ್ಳಾಪುರದಲ್ಲಿ 600 ಟನ್ ಸಾಮರ್ಥ್ಯದ ಘನತ್ಯಾಜ್ಯ ಸಂಸ್ಕರಣ ಘಟಕ ಚಾಲನೆಯಲ್ಲಿದೆ.
ಗಾಂಧಿನಗರ, ಜಯನಗರ, ಬೇಗೂರು, ಕೆಸಿಡಿಸಿ ಕೂಡ್ಲು, ಲಿಂಗದೀರನಹಳ್ಳಿ, ನಾಗಪುರ, ದೊಮ್ಮಲೂರು, ಕೋರಮಂಗಲ, ಕೆ.ಆರ್.ಪುರ ಮತ್ತು ಎಸ್ಎಂವಿ ಬಡಾವಣೆಯಲ್ಲಿ ಪ್ರತಿದಿನ 5 ಟನ್ ಹಸಿ ತ್ಯಾಜ್ಯದಿಂದ ಜೈವಿಕ ಅನಿಲ ಉತ್ಪಾದಿಸುವ ಬಯೋ ಮಿಥನೈಸೇಷನ್ ಘಟಕದ ಕಾಮಗಾರಿ ಪ್ರಗತಿಯಲ್ಲಿದೆ.
ಸಿಎಂರಿಂದಲೇ ಉತ್ತರ ಬಯಸಿದ ಸದಸ್ಯರು
ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸಭಾನಾಯಕ ಎಸ್.ಆರ್.ಪಾಟೀಲ್ ಸಭೆಗೆ ಉತ್ತರ ನೀಡಿದರು. ಆದರೆ ಪ್ರತಿಪಕ್ಷಗಳು ಮುಖ್ಯಮಂತ್ರಿಯಿಂದ ಉತ್ತರ ಬಯಸಿದ ಕಾರಣ ಅಧಿವೇಶನದ ಮುಂದಿನ ದಿನಗಳಲ್ಲಿ ಚರ್ಚೆಗೆ ಅವಕಾಶ ಕೊಡಲು ಸಭಾಪತಿ ನಿರ್ಧರಿಸಿದ್ದಾರೆ.